ಮಂಗಳವಾರ, ಏಪ್ರಿಲ್ 13, 2021
29 °C

ಶ್ರೀರಾಘವೇಂದ್ರ ಸಪ್ತಾಹ ಮಹೋತ್ಸವ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕೋತ್ಸವ ಮತ್ತು ಜನ್ಮದಿನಗಳ ಸಂಸ್ಮರಣಾರ್ಥ ‘ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ’ ಮಾರ್ಚ್ 5ರಿಂದ 12ರವರೆಗೆ ಪಟ್ಟಣದಲ್ಲಿ ನೆರವೇರಲಿದೆ.ಮಂತ್ರಾಲಯದ ಶ್ರೀರಾಘವೇಂದ್ರ ಸಪ್ತಾಹ ಕಾರ್ಯಾಚರಣ ಸಮಿತಿ, ಟಿ.ಟಿ.ಡಿ ದಾಸಸಾಹಿತ್ಯ ಪ್ರಾಜೆಕ್ಟ್ ಮತ್ತು ಬ್ರಾಹ್ಮಣ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಪ್ತಾಹದ ಅಂಗವಾಗಿ ಪಟ್ಟಣದ ಅಡವಿರಾಯ ಮುಖ್ಯಪ್ರಾಣ ದೇವಸ್ಥಾನ ಮತ್ತು ರಾಘವೇಂದ್ರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಉಡುಪಿಯ ಫಲಿಮಾರು ಮಠಾಧೀಶ ವಿದ್ಯಾಧೀಶತೀರ್ಥರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ.ಮಾ.5ರಂದು ಸಂಜೆ ಪ್ರತಿಪತ್ ಉದ್ಘಾಟನೆ ಹಾಗೂ ದಾಸಸಾಹಿತ್ಯ ದರ್ಶನ ವಸ್ತುಪ್ರದರ್ಶವನ್ನು  ಫಲಿಮಾರು ಮಠಾಧೀಶರು ನೆರವೇರಿಸುವರು. 7ರಂದು ಸಂಜೆ ಮಂತ್ರಾಲಯ ರಾಘವೇಂದ್ರ ಮಠದ ಸಂಸ್ಥಾನಾಧೀಶ್ವರ ಸುಯತೀಂದ್ರತೀರ್ಥರು, 11ರ ಸಂಜೆಯ ಕಾರ್ಯಕ್ರಮದಲ್ಲಿ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ್ವತೀರ್ಥರು ಹಾಗೂ ಸುವಿಧ್ಯೇಂದ್ರತೀರ್ಥರು ಉಪಸ್ಥಿತರಿರುವರು.6ರಂದು ಬೆಳಿಗ್ಗೆ ರಾಯರಮಠದಲ್ಲಿ ನಡೆಯುವ ಪಟ್ಟಾಭಿಷೇಕೋತ್ಸವ ಕಾರ್ಯಕ್ರಮವನ್ನು ವಿದ್ಯಾಧೀಶತೀರ್ಥರು ನೆರವೇರಿಸುವರು. ರಾಯರಿಗೆ ಪಂಚಾಮೃತ ಅಭಿಷೇಕ, ಪಂಡಿತರ ಪ್ರವಚನಗಳು, ಶ್ರೀಗಳಿಂದ ಅನುಗ್ರಹ ಭಾಷಣ ನಡೆಯುತ್ತವೆ. ಅಲ್ಲದೆ ಪ್ರತಿದಿನ ರಾತ್ರಿ 8 ರಿಂದ 10ರವರೆಗೆ ಹರಿಕಥೆ, ದಾಸವಾಣಿ, ನೃತ್ಯ ರೂಪಕಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.ವಿಶೇಷ ಕಾರ್ಯಕ್ರಮಗಳು: 6ರಂದು ಸಂಜೆ ಗುರುರಾಜರಿಗೆ ಮೆರವಣಿಗೆ, ಶೋಭಾಯಾತ್ರೆ.  7ಗಂಟೆಯಿಂದ ಕೆ.ಅಪ್ಪಣ್ಣಾಚಾರ್ಯರ ನಿರ್ದೇಶನದಲ್ಲಿ ನಡೆಯುವ ಶ್ರೀಗುರುರಾಜರ ಪಟ್ಟಾಭಿಷೇಕೋತ್ಸವದ ಸಂದರ್ಭದಲ್ಲಿ ಖ್ಯಾತ ಗಾಯಕ ಪುತ್ತೂರು ನರಸಿಂಹನಾಯಕ್ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. 8ರಂದು ಬೆಳಿಗ್ಗೆ 11ರಿಂದ ಸಾಮೂಹಿಕ ಲಕ್ಷ್ಮಿಶೋಭಾನೆ ಪಾರಾಯಣ. 10ರಂದು ಬೆಳಿಗ್ಗೆ ಸರ್ವಾಭಯಪ್ರದ ಶ್ರೀರಾಘವೇಂದ್ರರ ಸಾಮೂಹಿಕ ಪ್ರಾರ್ಥನೆ.  11ರಂದು ಶ್ರೀನಿವಾಸ ಕಲ್ಯಾಣ. 12ರಂದು ಬೆಳಿಗ್ಗೆ ಗುರುರಾಜರ ಜನ್ಮದಿನ ಮತ್ತು ಸಹಸ್ರ ಕಳಶ ಕ್ಷೀರಾಭಿಷೇಕ, ಶ್ರೀಗಳ ಅನುಗ್ರಹ ಭಾಷಣ, ಶ್ರೀಗುರುರಾಜರಿಗೆ ಪುಷ್ಪಯಾಗ. ಸಂಜೆ ಡೋಲೋತ್ಸವದ ನಂತರ ಸಮಾರೋಪ ಸಮಾರಂಭ ನಡೆಯಲಿದೆ.ಅಲ್ಲದೆ ಮಾ. 5ರಿಂದ 12ರವರೆಗೆ ಕ್ರಮವಾಗಿ ಗಣಪತಿ ನವಗ್ರಹ ಹೋಮ. ಮನ್ಯುಸೂಕ್ತ ವಾಯುಸ್ತುತಿ ಪುನಶ್ಚರಣಹೋಮ. ಪವಮಾನಹೋಮ, ಮಧ್ವವಿಜಯ ಸ್ವಾಹಾಕಾರ ಹೋಮ, ಸಪ್ತಮಸ್ಕಂದ ಭಾಗವತ ಸ್ವಾಹಾಕಾರ ಹೋಮ, ಪುರುಷಸೂಕ್ತ ಶ್ರೀಸೂಕ್ತ ಹೋಮಗಳು, ಮಹಾಸುದರ್ಶನ ಹೋಮ ಮತ್ತು ಧನ್ವಂತರಿ ಹೋಮ ಹಾಗೂ ಪ್ರತಿನಿತ್ಯ ಪೂಜ್ಯಾಯ ರಾಘವೇಂದ್ರಾಯ ಸ್ವಾಹಾಕಾರ ಹೋಮಗಳು ನಡೆಯುತ್ತವೆ.

ಸೀಮಿತವಲ್ಲ, ಮುಕ್ತ ಅವಕಾಶ

ಕುಷ್ಟಗಿ: ವಿಶ್ವಶಾಂತಿ, ಭಾವೈಕ್ಯತೆ ಮತ್ತು ಸಮನ್ವಯತೆಗಾಗಿ ಒಂದು ವಾರದವರೆಗೆ ರಾಯರ ಮಹಿಮೆ, ಚಿಂತನ-ಮಂಥನ ನಡೆಯುತ್ತದೆ ಎಂದು ಶ್ರೀರಾಘವೇಂದ್ರ ಸಪ್ತಾಹ ಕಾರ್ಯಾಚರಣೆ ಸಮಿತಿ ಮಂತ್ರಾಲಯದ ಅಧ್ಯಕ್ಷ ಅರ್ಚಕ ಪರಿಮಳಾಚಾರ್ಯ ನುಡಿದರು.ತತ್ವ ಸಂದೇಶಗಳೊಂದಿಗೆ ವೈಪರೀತ್ಯಗಳನ್ನು ದಾಟಿ ಪ್ರತಿಯೊಬ್ಬರ ಬದುಕಿನಲ್ಲಿ ಯಶ ದೊರೆಯಲಿ ಎಂಬ ಸದುದ್ದೇಶದಿಂದ ಹಾಗೂ ಎಲ್ಲರಿಗೂ ಸೇವೆಯ ಅವಕಾಶ ದೊರೆಯಲಿ ಎಂಬ ಕಾರಣಕ್ಕೆ ಪ್ರತಿವರ್ಷ ಒಂದು ಕಡೆ ಈ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.ರಾಯರು ಎಲ್ಲ ಭಕ್ತರಿಗೂ ಅನುಗ್ರಹಿಸುತ್ತ ಬಂದಿದ್ದಾರೆ. ಹಾಗಾಗಿ ಬ್ರಾಹ್ಮಣ ಸಮಾಜ ಈ ಕಾರ್ಯಕ್ರಮ ಸಂಘಟಿಸಿದ್ದರೂ ಒಂದೇ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲ ಧರ್ಮೀಯರಿಗೂ ಇಲ್ಲಿ ಮುಕ್ತ ಅವಕಾಶವಿದೆ. ಯಾವುದೇ ನಿರ್ಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅರವಿಂದಕುಮಾರ ದೇಸಾಯಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.