ಬುಧವಾರ, ಮೇ 25, 2022
31 °C

ಶ್ರೀರಾಮುಲುಗೆ ಪೇಜಾವರ ಶ್ರೀ ಆಶೀರ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಶಾಸಕ ಬಿ. ಶ್ರೀರಾಮುಲು ಅವರು ಕೇವಲ ವಾಲ್ಮೀಕಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ ಅವರು ರಾಜ್ಯದ ಯುವ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಬಸವ ಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿರುವ ಶ್ರೀರಾಮುಲು ಅವರನ್ನು ತಾಲ್ಲೂಕಿನ ಹುಲಿಕುಂಟೆಯಲ್ಲಿ ಭೇಟಿ ಮಾಡಿ ಆಶೀರ್ವದಿಸಿದ ಸ್ವಾಮೀಜಿ, ರಾಮುಲು ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ನುಡಿದರು. ರಾಜ್ಯದ ಒಳಿತಿಗಾಗಿ ಯಾರೇ ಉತ್ತಮ ಕಾರ್ಯ ಮಾಡಿದರೂ ನಮ್ಮ ಆಶೀರ್ವಾದ ಇರುತ್ತದೆ.ನಾನು ಬೆಂಗಳೂರಿಗೆ ಈ ಮಾರ್ಗದಲ್ಲಿ ತೆರಳುತ್ತಿದ್ದು, ರಾಜ್ಯದ ಒಳಿತಿಗಾಗಿ ಶ್ರೀರಾಮುಲು ಹಮ್ಮಿಕೊಂಡಿರುವ ಪಾದಯಾತ್ರೆಗೆ ಆಶೀರ್ವದಿಸಲು ಬಂದಿದ್ದೆೀನೆ. ಇದಕ್ಕೆ ಯಾವುದೇ ರಾಜಕೀಯ ಬಣ್ಣ ಬೇಡ ಎಂದರು. ಶ್ರೀರಾಮುಲು ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕು ಸೇರಿದಂತೆ ಬಯಲು ಸೀಮೆಯ ಆರು ಜಿಲ್ಲೆಗಳ ಜನರ ನೀರಿನ ಸಮಸ್ಯೆ ಪರಿಹಾರಕ್ಕೆ ಡಾ.ಪರಮಶಿವಯ್ಯ ಅವರ ವರದಿಯನ್ನು ಸರ್ಕಾರ ಕೂಡಲೇ ಅನುಷ್ಠಾನಕ್ಕೆ ತರಬೇಕು. ಕೇವಲ ಭರವಸೆ ನೀಡುತ್ತ ಕಾಲ ಕಳೆಯುವುದರಲ್ಲಿ ಅರ್ಥವಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಡಿತರ ಅಂಗಡಿಗಳಲ್ಲಿ ನಿತ್ಯ ಬಳಕೆಯ ಎಲ್ಲಾ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು.ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ 2 ರೂಪಾಯಿಗೆ ಒಂದು ಕೆಜಿ ಅಕ್ಕಿ ನೀಡಲಾಗುವುದು. ರೈತರ ಬೆಳೆಗಳಿಗೆ ಬಿತ್ತನೆ ಮಾಡಿದ ನಂತರವೇ ಬೆಂಬಲ ಬೆಲೆ ಘೋಷಿಸಲಾಗುವುದು ಎಂದರು.ರಾಜ್ಯದಲ್ಲಿ 124 ತಾಲ್ಲೂಕುಗಳು ಬರದಿಂದ ನಲುಗಿದ್ದರೂ ಸಾಂತ್ವನ ಹೇಳಬೇಕಾದ ಸಚಿವರು, ಶಾಸಕರು ಕುರ್ಚಿಗಾಗಿ ಕಿತ್ತಾಡುತ್ತಿದ್ದಾರೆ. ತಾವು ಪಾದಯಾತ್ರೆಯೊಂದಿಗೆ ನೊಂದವರಿಗೆ ಸಾಂತ್ವನ ಹೇಳುತ್ತಿದ್ದೆೀನೆ.ಪಾದಯಾತ್ರೆ ಜೂ. 17 ರಂದು ಮುಕ್ತಾಯವಾಗಲಿದೆ. ಅಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಡವರು, ಶ್ರಮಿಕರು ಮತ್ತು ರೈತರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ಯುವ ಮುಖಂಡ ಸುನೀಲ್‌ಕುಮಾರ್, ನಗರಸಭೆ ಸದಸ್ಯ ಎನ್.ಕೆ.ರಮೇಶ್ ಮತ್ತಿತರರು ಹಾಜರಿದ್ದರು.ಪಾದಯಾತ್ರೆಗೆ ಸ್ವಾಗತ: ಶ್ರೀರಾಮುಲು ಪಾದಯಾತ್ರೆಯನ್ನು ತಾಲ್ಲೂಕಿನ ಹುಲಿಕುಂಟೆಯಲ್ಲಿ ಶ್ರೀರಾಮುಲು ಅಭಿಮಾನಿ ಬಳಗ ಬರಮಾಡಿಕೊಂಡಿತು. ಪಾದಯಾತ್ರೆ ಮಾರ್ಗದಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಬಾಳೆ ಕಂಬ, ಮಾವಿನ ತೋರಣ ಕಟ್ಟಿ ಸ್ವಾಗತಿಸಲಾಯಿತು. ಹುಲಿಕುಂಟೆ, ದೊಡ್ಡಬೆಳವಂಗಲ ಮಾರ್ಗವಾಗಿ ಬಂದ ಶ್ರೀರಾಮುಲು ದೊಡ್ಡಹೆಜ್ಜಾಜಿ ಗ್ರಾಮದ ಪಟಾಲಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬುಧವಾರ ಮಧ್ಯಾಹ್ನ 12ಕ್ಕೆ ನಗರದ ಸರ್ಕಾರಿ ಆಸ್ಪತ್ರೆ ವೃತ್ತದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.