ಶ್ರೀರಾಮುಲುಗೆ ಪ್ರತಿಷ್ಠೆ: ಪ್ರತಿಪಕ್ಷಗಳಿಗೆ ನಿರಾಸಕ್ತಿ

7

ಶ್ರೀರಾಮುಲುಗೆ ಪ್ರತಿಷ್ಠೆ: ಪ್ರತಿಪಕ್ಷಗಳಿಗೆ ನಿರಾಸಕ್ತಿ

Published:
Updated:
ಶ್ರೀರಾಮುಲುಗೆ ಪ್ರತಿಷ್ಠೆ: ಪ್ರತಿಪಕ್ಷಗಳಿಗೆ ನಿರಾಸಕ್ತಿ

ಬಳ್ಳಾರಿ: ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳು  ಎದುರಿಸಿರುವ ಉಪ ಚುನಾವಣೆಗಳಲ್ಲಿಯೇ ಅತ್ಯಂತ ಭಿನ್ನವಾದ ಉಪ ಚುನಾವಣೆಗೆ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಅಣಿಯಾಗುತ್ತಿದೆ.ಅನ್ಯಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸಿ, ತನ್ನತ್ತ ಸೆಳೆದಿದ್ದ ಬಿಜೆಪಿ `ಪ್ರತಿಷ್ಠೆ~ ಎಂಬಂತೆ ಉಪ ಚುನಾವಣೆಗಳನ್ನು ಎದುರಿಸಿದ್ದು, ಬಳ್ಳಾರಿಯಲ್ಲಿ ಮಾತ್ರ ಪಕ್ಷದ ಪ್ರಮುಖ ಅಭ್ಯರ್ಥಿಯ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇದೇ 30ರಂದು ಮತ್ತೊಂದು ಉಪ ಚುನಾವಣೆ ಎದುರಿಸಬೇಕಾಗಿ ಬಂದಿದೆಯಾದರೂ, ಈ ಚುನಾವಣೆಯನ್ನು ಆಡಳಿತಾರೂಢ ಪಕ್ಷ ಪ್ರತಿಷ್ಠೆ ಎಂಬಂತೆ ಪರಿಗಣಿಸಲಿದೆಯೇ? ಎಂಬುದು ಮತದಾರರ ಪ್ರಶ್ನೆಯಾಗಿದೆ.ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲಿ ತಮ್ಮ ಹೆಸರು ಸೇರಿದ್ದರಿಂದ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಶ್ರೀರಾಮುಲು ಹೇಳಿಕೊಂಡಿದ್ದರೂ, ಸಚಿವ ಸ್ಥಾನದ ಆಕಾಂಕ್ಷೆಯೇ ರಾಜೀನಾಮೆಗೆ ಪ್ರಮುಖ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ.ಸಚಿವ ಸ್ಥಾನ ದೊರೆಯದ್ದರಿಂದ ತಿಂಗಳ ಕಾಲ ರಾಜೀನಾಮೆ ಹಿಂದಕ್ಕೆ ಪಡೆಯದಿದ್ದ ಶ್ರೀರಾಮುಲು, ಜೈಲಿನಲ್ಲಿರುವ ಜಿ. ಜನಾರ್ದನರೆಡ್ಡಿ ಹೊರಬಂದ ಮೇಲೆ ತಮ್ಮ  ಮುಂದಿನ ನಡೆಯ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದರು. ಆದರೆ, ಇದೀಗ ಉಪ ಚುನಾವಣೆ ದಿಢೀರ್ ಎದುರಾಗಿರುವ ಹಿನ್ನೆಲೆಯಲ್ಲಿ ಮತದಾರರು ಮಾತ್ರ ಅವರು ಸ್ಫರ್ಧೆಗೆ ಇಳಿಯುವರೇ? ಎಂಬ ಚರ್ಚೆಯಲ್ಲಿ ತೊಡಗುವಂತಾಗಿದೆ.ಸಚಿವ ಸ್ಥಾನಕ್ಕೆ ಬೇಡಿಕೆ: ಮಂಗಳವಾರ ಸಂಜೆಯಷ್ಟೇ ಉಪ ಚುನಾವಣೆಯ ದಿನಾಂಕ ಪ್ರಕಟಗೊಂಡಿದ್ದು, ಶ್ರೀರಾಮುಲು ಹಾಗೂ ಬೆಂಬಲಿಗರು ಸಾಧ್ಯಾಸಾಧ್ಯತೆಗಳ ತೀವ್ರ ಚರ್ಚೆಯಲ್ಲಿ ತೊಡಗಿದ್ದಾರೆ. ಸಚಿವ ಸ್ಥಾನ ನೀಡದೆ ಅವಮಾನ ಮಾಡಿರುವ ಬಿಜೆಪಿಯಿಂದ ಸ್ಫರ್ಧಿಸಬೇಕೇ? ಸ್ವತಂತ್ರವಾಗಿ ಸ್ಫರ್ಧಿಸಿ ಶಕ್ತಿ ಸಾಬೀತು ಪಡಿಸಬೇಕೇ? ವಿರೋಧ ಪಕ್ಷಕ್ಕೆ ಜಿಗಿದು ಬಿಜೆಪಿಗೆ ಪಾಠ ಕಲಿಸಬೇಕೇ? ಪಕ್ಷವೊಂದನ್ನು ಹುಟ್ಟುಹಾಕಬೇಕೇ? ಎಂಬ ಚರ್ಚೆಯಲ್ಲಿ ರೆಡ್ಡಿ ಸಹೋದರರ ಬಳಗ ತೊಡಗಿದೆ.`ಒಂದೊಮ್ಮೆ ಬಿಜೆಪಿ ಟಿಕೆಟ್ ಕೊಡುವುದಾದರೆ, ಗೆದ್ದ ನಂತರ ಸಚಿವ ಸ್ಥಾನ ನೀಡಬೇಕು~ ಎಂಬ ಷರತ್ತು ಇರಿಸುವ ಇರಾದೆಯನ್ನೂ ಶ್ರೀರಾಮುಲು ವ್ಯಕ್ತಪಡಿಸಿದ್ದು, ಪಕ್ಷ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗಿನ ಕುತೂಹಲಕ್ಕೆ ಕಾರಣವಾಗಿದೆ.ಲೋಕಾಯುಕ್ತರ ವರದಿಯಲ್ಲಿ ಹೆಸರಿರುವ ಹಿನ್ನೆಲೆಯಲ್ಲೇ ಯಡಿಯೂರಪ್ಪ ಅವರೂ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದು, ಅವರ ರಾಜೀನಾಮೆಯೊಂದಿಗೆ ಸಚಿವ ಸ್ಥಾನ ಕಳೆದುಕೊಂಡಿರುವ `ರೆಡ್ಡಿ ಬಳಗ~  ಚುನಾವಣೆಯನ್ನು ಎದುರಿಸಿ ಗೆದ್ದಲ್ಲಿ ಕಳಂಕ ದೂರವಾಗಲಿದೆಯೇ? ಎಂಬ ಪ್ರಶ್ನೆಯನ್ನೂ ಬಿಜೆಪಿಯ ವರಿಷ್ಠರು ಇರಿಸಿದ್ದಾರೆ ಎನ್ನಲಾಗಿದೆ.ಸದ್ಯದ ಉಪ ಚುನಾವಣೆ ಶ್ರೀರಾಮುಲು ಅವರ ಪ್ರತಿಷ್ಠೆಗೆ ಮಾತ್ರ ಸಂಬಂಧಿಸಿದ್ದು. ಬಿಜೆಪಿಯಾಗಲಿ, ವಿರೋಧ ಪಕ್ಷಗಳಾಗಲಿ ಈ ಬಗ್ಗೆ ಯಾವುದೇ ಕುತೂಹಲವನ್ನೂ ಹೊಂದಿಲ್ಲ ಎನ್ನಲಾಗಿದೆ.ಈಗಾಗಲೇ ಎದುರಾಗಿರುವ ಅನೇಕ ಉಪಚುನಾವಣೆಗಳಲ್ಲಿ ತಮ್ಮವರು ಪಕ್ಷ ತೊರೆದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದ ವಿರೋಧ ಪಕ್ಷಗಳಿಗೆ, ಬಳ್ಳಾರಿ ಉಪ ಚುನಾವಣೆ ಮಾತ್ರ `ನಗಣ್ಯ~ ಎಂಬಂತಾಗಿದೆ.

 

ಗಳಿಸುವುದೂ, ಕಳೆದುಕೊಳ್ಳುವುದೂ ಏನೂ ಇಲ್ಲ ಎಂಬ ಸ್ಥಿತಿಯಲ್ಲಿ ಪ್ರತಿಷ್ಠೆಯನ್ನು ಪಣಕ್ಕಿಡುವುದು ಹಾಸ್ಯಾಸ್ಪದ. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಉಪ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧರಿಸಿವೆ ಎಂದು ವಿರೋಧಿ ಬಣದ ಮೂಲಗಳು ಹೇಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry