ಸೋಮವಾರ, ಜೂನ್ 21, 2021
30 °C
ಲೋಕಸಭಾ ಚುನಾವಣೆ: ಮತ ಗಳಿಕೆ ಲೆಕ್ಕಾಚಾರ ಆರಂಭ

ಶ್ರೀರಾಮುಲು ಸೇರ್ಪಡೆ; ಗರಿ ಗೆದರಿದ ಬಿಜೆಪಿ ಆಸೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಲೋಕಸಭೆ ಚುನಾವಣೆಯ ಅಧಿಸೂಚನೆ ಹೊರಬಿದಿ್ದದ್ದು, ರಾಜಕೀಯ ಪಕ್ಷಗಳಲ್ಲಿ ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯ ಶೇಕಡಾವಾರು ಮತ ಗಳಿಕೆಯ ಲೆಕ್ಕಾಚಾರ ಆರಂಭವಾಗಿದೆ. 2008ರ ಚುನಾವಣೆಯಲ್ಲಿ ಸಂಡೂರು ಕ್ಷೇತ್ರವೊಂದನ್ನು ಹೊರತು­ಪಡಿಸಿ ಜಿಲ್ಲೆಯ ಇತರ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಬೀಗಿದ್ದ ಬಿಜೆಪಿ, ಕಳೆದ ವರ್ಷ ನಡೆದ  ಚುನಾವಣೆಯಲ್ಲಿ ಸೋತು ಸುಣ್ಣವಾಗಿದೆ.ಆದರೆ, ಬಿಜೆಪಿಯ ಆಡಳಿತಾ­ವಧಿಯ ಕೊನೆಯ ಹಂತದಲಿ್ಲ ಸಚಿವರಾಗಿದ್ದ ಆನಂದಸಿಂಗ್‌, ವಿಜಯನಗರ  ಕ್ಷೇತ್ರದಲ್ಲಿ ಜಯಿಸಿದ್ದನ್ನು ಹೊರತುಪಡಿಸಿ, ಬಿಜೆಪಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಸೋಲುಂಡಿರುವುದು ಆಡಳಿತಾರೂಢ ಕಾಂಗ್ರೆಸ್‌ನ ಗೆಲುವಿನ ಕನಸಿಗೆ ರೆಕ್ಕ ಮೂಡಿಸಿದ್ದರೆ, ಕಾಂಗ್ರೆಸ್‌ ಪಕ್ಷದ ಮುಖಂಡರಲ್ಲಿರುವ ಭಿನ್ನಾಭಿ­ಪ್ರಾಯ ವರವಾಗಲಿದೆಯೇ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಶಾಸಕರಾಗಿದ್ದ ಗಾಲಿ ಸೋಮಶೇಖರ ರೆಡ್ಡಿ, ಟಿ.ಎಚ್.­ಸುರೇಶಬಾಬು ‘ಜಾಮೀನಿಗಾಗಿ ಲಂಚ’ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದು, ನಂತರ  ಶ್ರೀರಾಮುಲು– ರೆಡ್ಡಿ ಬಳಗ ಬಿಜೆಪಿ ತೊರೆದು ಪ್ರತ್ಯೇಕ ಬಿಎಸ್ಆರ್‌ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದು, ಬಿಜೆಪಿ ಹಿನ್ನೆಡೆಗೆ ಕಾರಣವಾಗಿತ್ತು.ಅಲ್ಲದೆ, ಚುನಾವಣೆಯಲ್ಲಿ ಬಿಜೆಪಿ ಮತ್ತು ಬಿಎಸ್‌ಆರ್‌ ಕಾಂಗ್ರೆಸ್‌ ನಡುವೆ ಮತಗಳು ಹಂಚಿ ಹೋಗಿದ್ದರಿಂದ ಒಟ್ಟು ಚಲಾವಣೆಯಾದ ಮತಗಳಲ್ಲಿ ಹೆಚ್ಚಿನವು ಕಾಂಗ್ರೆಸ್ ಪಾಲಾಗು­ವಂತಾಯಿತು.ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಇರುವ 1405608 ಮತಗಳ ಪೈಕಿ ಚಲಾವಣೆಯಾಗಿದ್ದು 1026353 ಮತಗಳು. ಎಲ್ಲ ಕ್ಷೇತ್ರಗಳ ಒಟ್ಟು ಮತಳಗಲ್ಲಿ ಕಾಂಗ್ರೆಸ್‌ ಶೇ 32.86ರಷ್ಟು ಮತ ಗಳಿಸಿದರೆ, ಬಿಎಸ್‌ಆರ್‌ ಕಾಂಗ್ರೆಸ್ ಶೇ 21.65 ಮತ ಗಳಿಸಿ ದ್ವಿತೀಯ, ಬಿಜೆಪಿ ಶೇ 15.20 ಮತಗಳಿಸಿ ಮೂರನೇ ಸ್ಥಾನದಲ್ಲಿತ್ತು.ಕೆಜೆಪಿ, ಬಿಎಸ್‌ಪಿ, ಎಸ್‌ಯುಸಿಐ, ಸಿಪಿಐ, ಸಿಪಿಎಂ ಸೇರಿದಂತೆ ಇತರರು ಒಟ್ಟು ಶೇ 13.68ರಷ್ಟು ಮತ (ಇದರಲ್ಲಿ ಕೂಡ್ಲಿಗಿಯಲ್ಲಿ ಪಕ್ಷೇತರ­ರಾಗಿ ಜಯ ಗಳಿಸಿರುವ ಬಿ.ನಾಗೇಂದ್ರ ಅವರ ಪಾಲು ಅಧಿಕ), ಜೆಡಿಎಸ್‌ ಶೇ 10.77 ಮತ ಪಡೆದು ನಂತರದ ಸ್ಥಾನದಲ್ಲಿವೆ.

ಇತ್ತೀಚೆಗಷ್ಟೇ ಬಿಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಬಿ.ಶ್ರೀರಾಮುಲು, ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿ ಸೇರಿರುವುದು (ಕೆಜೆಪಿಯಯ 8 ಕ್ಷೇತ್ರಗಳಲ್ಲಿ ಶೇ 3.74ರಷ್ಟು ಅಂದರೆ, ಒಟ್ಟು 38456 ಮತ ಗಳಿಸಿದೆ) ಏಪ್ರಿಲ್‌ 17ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕ ಮತ ಗಳಿಸಲಿದೆ ಎಂಬ ಲೆಕ್ಕಾಚಾರಕ್ಕೆ ಇಂಬು ನೀಡಿದೆ.ಒಟ್ಟು ಗಳಿಸಿರುವ ಶೇಕಡಾವಾರು ಮತಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಕಾಂಗ್ರೆಸ್‌   ಗಳಿಸಿರುವ ಮತಗಳ ಪ್ರಮಾಣ ಹೆಚ್ಚೇ ಆಗಿದ್ದರೂ, ಎಂಟು ಕ್ಷೇತ್ರಗಳ ಪೈಕಿ ಶಾಸಕ ಸ್ಥಾನ ಅಲಂಕರಿಸಿದವರು ಕೇವಲ ಮೂವರು (ಹೂವಿನ ಹಡಗಲಿ, ಬಳ್ಳಾರಿ ನಗರ ಹಾಗೂ ಸಂಡೂರು). ಅಲ್ಲದೆ, ಈ ಕ್ಷೇತ್ರಗಳಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ ಗಳಿಸಿದ್ದ ಮತಗಳನ್ನೂ ಸೇರಿಸಿ ಶೇ 36.85ರಷ್ಟು ಮತ ಗಳಿಸಿರುವ ಬಿಜೆಪಿ, ಕಾಂಗ್ರೆಸ್‌ಗಿಂತ ಅಧಿಕ ಮತ ಪಡೆದಿರುವ ಸಂತೃಪ್ತಿ ಹೊಂದಿದೆ.ಕಂಪ್ಲಿ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರೆ, ಹಗರಿ ಬೊಮ್ಮನಹಳ್ಳಿಯಲ್ಲಿ ಜೆಡಿಎಸ್‌ನ ಭೀಮಾ ನಾಯ್ಕ ಅವರು ಕೂದಲೆಳೆಯ ಅಂತರದಲ್ಲಿ ಮಾಜಿ ಶಾಸಕ, ಬಿಜೆಪಿಯ ನೇಮರಾಜ ನಾಯ್ಕ ವಿರುದ್ಧ ಜಯಿಸಿದ್ದರು.

ಕೇವಲ 125 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವಂತಾಗಿದ್ದಕ್ಕೆ ಕೆಜೆಪಿ ಅಭ್ಯರ್ಥಿ ದೊಡ್ಡರಾಮಣ್ಣ ಗಳಿಸಿರುವ 5836 ಮತಗಳೂ ಕಾರಣವಾಗಿದ್ದು ಮುಖ್ಯವಾಗಿತ್ತು.ಬಿಜೆಪಿ ಶಾಸಕರಾಗಿದ್ದ ಬಿ.ನಾಗೇಂದ್ರ ಬಿಎಸ್‌ಆರ್‌ ಕಾಂಗ್ರೆಸ್ ಗುಂಪಿ­ನೊಂದಿಗೆ ಗುರುತಿಸಿಕೊಂಡರೂ ಕೊನೆ ಗಳಿಗೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಕೂಡ್ಲಿಗಿಯಲ್ಲಿ ಜಯಿಸಿದ್ದರು. ಒಟ್ಟು 46674 ಮತಗಳನ್ನು ಗಳಿಸಿರುವ ಕಾಂಗ್ರೆಸ್‌ ಅಭ್ಯರ್ಥಿಯ ಸೋಲಿಗೆ, ಬೇರೆ ಯಾವುದೇ ಅಭ್ಯರ್ಥಿ ತೊಡಕಾಗಿರಲಿಲ್ಲ ಎಂಬುದು ಗಮನಾರ್ಹ.ಅಕ್ರಮ ಅದಿರು ರಫ್ತು ಹಾಗೂ ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ­ಯಾದ ಪ್ರಕರಣದಲ್ಲಿ ಬಿ.­ನಾಗೇಂದ್ರ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಅವರ ಬೆಂಬಲಿಗರು ಮತ್ತೆ ಬಿಜೆಪಿಯತ್ತ ಒಲವು ತೋರಿರು­ವುದು ಕಾಂಗ್ರೆಸ್ ಪಾಳಯದಲ್ಲಿ ಸಹಜ­ವಾಗಿಯೇ ನಡುಕ ಉಂಟುಮಾಡಿದೆ ಎನ್ನಲಾಗಿದೆ.ಒಡಕಿನ ಮಾತು: ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ ಜಿಲ್ಲೆಯ ಮುಖಂಡರಲ್ಲಿ ಕಂಡುಬರದ ಒಮ್ಮತ ಕಾಂಗ್ರೆಸ್‌ಗೆ ಅಲ್ಪ ಮಟ್ಟಿಗೆ ತಲೆನೋವಾಗಿದೆ. ಅಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ಪ್ರಭಾವಿ ಆಗಿರುವ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧೆಗೆ ಇಳಿಯುತ್ತಿರುವುದು, ನರೇಂದ್ರ ಮೋದಿ ಪರ ಇರುವ ಅಲೆಯದ್ದೇ ಚಿಂತೆಯಾಗಿದೆ.ಜಿಲ್ಲೆಯಲ್ಲಿನ ಪಕ್ಷದ ನಾಯಕರ ನಡುವಿನ ವೈಮನಸ್ಯ, ಸ್ಥಳೀಯ ಸಂಸ್ಥೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ಒಂದು ವರ್ಷ ಕಳೆದರೂ ಈವರೆಗೆ ದೊರೆಯದ ಅಧಿಕಾರ, ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಹುಮ್ಮಸ್ಸಿಗೆ ಅಡ್ಡಗಾಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.