ಶ್ರೀರಾಮ ಬೇಕು, ವಾಲ್ಮೀಕಿ ಬೇಡ: ಬರಗೂರು ಕಿಡಿ

7

ಶ್ರೀರಾಮ ಬೇಕು, ವಾಲ್ಮೀಕಿ ಬೇಡ: ಬರಗೂರು ಕಿಡಿ

Published:
Updated:

ತುಮಕೂರು: ಏಕ ಸಂಸ್ಕೃತಿ ವೀರರಿಗೆ ಶ್ರೀರಾಮ, ಉಡುಪಿ ಬೇಕು. ಆದರೆ ವಾಲ್ಮೀಕಿ ಮಹರ್ಷಿ, ಕನಕದಾಸರು ಬೇಡವಾಗಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕ ರಾಜಕಾರಣವನ್ನು ಎಲ್ಲ ಶೋಷಿತ ವರ್ಗಗಳ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.ಜಿಲ್ಲಾಡಳಿತ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ `ವಾಲ್ಮೀಕಿ ಪ್ರಶಸ್ತಿ~ ಸ್ವೀಕರಿಸಿ ಅವರು ಮಾತನಾಡಿದರು.ಕನಕನ ಕಿಂಡಿ ಕುರಿತು ವಿವಾದ ಎಬ್ಬಿಸುತ್ತಿರುವರನ್ನು ನಿಮ್ಮದು ಯಾವ ಧರ್ಮ ಎಂದು ಪ್ರಶ್ನಿಸಬೇಕಾಗಿದೆ. ರಾಮಾಯಣದಲ್ಲಿ ಯಾವ ಧರ್ಮ, ವರ್ಣಾಶ್ರಮದ ವಾಸನೆಯೂ ಇಲ್ಲ. ಆದರೆ ಶ್ರೀರಾಮನನ್ನು ಅಧಿಕಾರಕ್ಕಾಗಿ ಹೈಜಾಕ್ ಮಾಡುತ್ತಿದ್ದಾರೆ. ರಾಮಾಯಣ, ಮಹಾಭಾರತವನ್ನು ಅಪವ್ಯಾಖಾನ ಮಾಡಲಾಗುತ್ತಿದೆ.ರಾಮಾಯಣದಲ್ಲಿ ಏಕ ಸಂಸ್ಕೃತಿಯ ಒಂದು ಕುರುಹೂ ಇಲ್ಲ. ಅದು ಬಹುಸಂಸ್ಕೃತಿ ಮಾದರಿಯ ಮೌಲ್ಯಗಳನ್ನು ಪ್ರತಿಪಾದಿಸುವ ಮಹಾಕಾವ್ಯವೇ ಹೊರತು ಯಾವುದೇ ಧರ್ಮವನ್ನು ಪ್ರತಿಪಾದಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.ದೇಶದಲ್ಲಿ ಶ್ರಮಜೀವಿಗಳ ದೇವರು ಒಂದು ರೀತಿ ಇದ್ದರೆ, ಶ್ರಮಿಕರಲ್ಲದವರ ದೇವರುಗಳೇ ಒಂದು ರೀತಿ ಇವೆ. ಭಾರತದ ದೇವರಿಗೆ ಕಣ್ಣು ದೊಡ್ಡದಾಗಿದ್ದರೆ, ಚೀನಾದ ದೇವರಿಗೆ ಕಣ್ಣು ಸಣ್ಣದಾಗಿರುತ್ತವೆ. ದೇವರನ್ನು ಆಯಾಯ ದೇಶದ ಜನರಂತೆ ಸೃಷ್ಟಿಸಲಾಗಿದೆ ಎಂದು ಹೇಳಿದರು.ಜಾತಿವಾದ, ಕೋಮುವಾದ, ಅಸಮಾನತೆ ವಿರೋಧಿಸುವ ನೆಲೆಯಲ್ಲಿ ರಾಮಾಯಣವನ್ನು ಅರ್ಥಮಾಡಿಕೊಳ್ಳಬೇಕು, ವಾಲ್ಮೀಕಿ ಜಯಂತಿ ಅಚರಿಸಬೇಕು ಎಂದು ಸಲಹೆ ನೀಡಿದರು.ಜಾತಿ ಒಂದು ಸಾಮಾಜಿಕ ವಾಸ್ತವ. ಆದರೆ ಜಾತಿವಾದ ದೇಶದಲ್ಲಿ ಅಸಮಾನತೆ, ಶೋಷಣೆಗೆ ಎಡೆಮಾಡಿಕೊಡುತ್ತಿದೆ. ಹಳ್ಳಿ ಜನರಿಗಿಂತ ವಿದ್ಯಾಭ್ಯಾಸ ಪಡೆದವರಲ್ಲಿ ಜಾತಿವಾದ ಹೆಚ್ಚುತ್ತಿದೆ. ಕೆಲಸದಲ್ಲಿ ಬಡ್ತಿ, ಸೌಲಭ್ಯ, ಭ್ರಷ್ಟಾಚಾರದ ಮೂಲಕ ಹಣಗಳಿಸಲು ವಿದ್ಯಾವಂತ ವರ್ಗ ಜಾತಿವಾದವನ್ನು ಪೋಷಿಸುತ್ತಿದೆ.

ಆದರೆ ಜಾತಿವಾದಿ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಎಲ್ಲರನ್ನು ಉದ್ಧಾರ ಮಾಡುವ ಬೊಗಳೆ ಮಾತುಗಳನ್ನಾಡುತ್ತಾರೆ. ಈ ಗೋಸುಂಬೆತನವನ್ನು ಶೋಷಿತ ವರ್ಗ ಅರ್ಥ ಮಾಡಿಕೊಳ್ಳಬೇಕಾಗಿದೆ. ಜಾತಿ ಸಂಘಟನೆಗಳು ತಮ್ಮ ಜಾತಿಯವರನ್ನೇ ಶೋಷಣೆ ಮಾಡತೊಡಗಿದ್ದಾರೆ ಎಂದು ಹೇಳಿದರು.ಜಾತಿವಾದವು ಶೋಷಿತ ವರ್ಗದ ಒಂದು ಜಾತಿಯನ್ನು ಇನ್ನೊಂದು ಜಾತಿಯೊಂದಿಗೆ ಎತ್ತಿಕಟ್ಟುತ್ತಿದೆ. ಇದರಿಂದಾಗಿ ಶ್ರಮಿಕವರ್ಗದ ಸಮುದಾಯದಲ್ಲೇ ಅನಾರೋಗ್ಯಕರ ಸ್ಪರ್ಧೆ, ವೈಮನಸ್ಸುಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಜಾತಿ ಸಂಘಟನೆಗಳು ಸಮುದಾಯದ ಶೈಕ್ಷಣಿಕ, ಸಾಂಸ್ಕೃತಿಕ ನೆಲೆಯಿಂದ ಆಚೆಗೆ ಇರಬಾರದು ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಲಾ ರಾಜಣ್ಣ ಮಾತನಾಡಿ, ನಗರದಲ್ಲಿ ವಾಲ್ಮೀಕಿ ಭವನ ಕಟ್ಟಲು ಸರ್ಕಾರ ಹಣ ಮಂಜೂರು ಮಾಡಿದ್ದರೂ ಜಿಲ್ಲಾಡಳಿತ ಭೂಮಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಾಸಕ ಎಸ್.ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದೊಡ್ಡಯ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಎನ್.ಗೋವಿಂದೇಗೌಡ,  ಪುಟ್ಟರಾಮಯ್ಯ, ಯಾಲಕ್ಕಿಗೌಡ, ಕೃಷ್ಣಪ್ಪ, ಅಹೋಬಳಯ್ಯ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry