ಭಾನುವಾರ, ಅಕ್ಟೋಬರ್ 20, 2019
22 °C

ಶ್ರೀರಾಮ ಸೇನೆ ನಿಷೇಧಿಸಲು ಒತ್ತಾಯ

Published:
Updated:

ದಾವಣಗೆರೆ: ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಮಿನಿ ವಿಧಾನಸೌಧದ ಎದುರು ಪಾಕಿಸ್ತಾನದ ಧ್ವಜ ಹಾರಿಸಿದ ಶ್ರೀರಾಮಸೇನೆ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.ಹೊಸ ವರ್ಷದ ದಿನದಂದು ಶ್ರೀರಾಮ ಸೇನೆಯ ಕಾರ್ಯಕರ್ತರೇ ಪಾಕ್ ಧ್ವಜ ಹಾರಿಸಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾರೆ. ಮತ್ತೆ ಅವರೇ ಜನರನ್ನು ಸಂಘಟಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂಥ ಕೃತ್ಯ ಖಂಡನೀಯ ಎಂದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಶ್ಲಾಘಿಸಿದ ಕಾರ್ಯಕರ್ತರು, ಶ್ರೀರಾಮ ಸೇನೆಯವರು ಈ ಹಿಂದೆಯೂ ಬೆಂಗಳೂರಿನ ಮಸೀದಿಯೊಂದರ ಮುಂದೆ ಹಂದಿ ಮಾಂಸ ಹಾಕಿ ಗಲಭೆ ಸೃಷ್ಟಿಸಲು ಯತ್ನಿಸಿದ್ದರು. ಅಲ್ಲದೆ ರಾಜ್ಯದಲ್ಲಿ ವಿವಿಧ ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದರು.

 

ಬೆಂಗಳೂರು ವಿವಿ ದೂರಶಿಕ್ಷಣ ವಿಭಾಗದ ನಿರ್ದೇಶಕರ ಮೇಲೆ ಈ ಸಂಘಟನೆಗೆ ಸೇರಿದ ಪುಂಡರು ಹಲ್ಲೆ ನಡೆಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಹುಸಿ ದೇಶಪ್ರೇಮದ ಹೆಸರಿನಲ್ಲಿ ಯುವಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಆದ್ದರಿಂದ ಈ ಕೃತ್ಯದ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಅಲ್ಲದೇ ಈ ಪ್ರಕರಣದ ಹಿಂದಿರುವ ಸೂತ್ರಧಾರ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.ನಗರದ ಗಾಂಧಿವೃತ್ತದ ಬಳಿ ಸೇರಿ `ಮಾನವ ಸರಪಳಿ~ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಕಲ್ಲಹಳ್ಳಿ, ಕಾರ್ಯದರ್ಶಿ ಭರಮಪ್ಪ, ಎಚ್. ಶಶಿಧರ, ಹಾಲೇಶ್ ಕಮಲಾಪುರ, ಎಂ. ಕಾಮಯ್ಯ ಇತರರು ನೇತೃತ್ವ ವಹಿಸಿದ್ದರು.

Post Comments (+)