ಗುರುವಾರ , ಜೂನ್ 17, 2021
22 °C
ಕ್ರಿಕೆಟ್‌: ತಿರಿಮಾನೆ ಶತಕ, ಮಾಲಿಂಗಗೆ ಐದು ವಿಕೆಟ್‌; ಪಾಕ್‌ಗೆ ನಿರಾಸೆ

ಶ್ರೀಲಂಕಾ ತಂಡಕ್ಕೆ ಏಷ್ಯಾಕಪ್‌ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ಶ್ರೀಲಂಕಾ ತಂಡದವರು ನಿರೀಕ್ಷೆ ಹುಸಿಗೊಳಿಸಲಿಲ್ಲ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಪಾಕಿಸ್ತಾನದ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತ ಸಿಂಹಳೀಯ ಬಳಗ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.ಷೇರ್‌ ಎ ಬಾಂಗ್ಲಾ ನ್ಯಾಷನಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 260 ರನ್ ಗಳಿಸಿತು. ಇದಕ್ಕುತ್ತರವಾಗಿ ಲಂಕಾ 46.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಅಷ್ಟು ಮಾತ್ರವಲ್ಲದೇ,  ಐದನೇ ಬಾರಿ ಏಷ್ಯಾ ಕ್ರಿಕೆಟ್‌ನ ಸಾಮ್ರಾಟ ಎಂಬ ಗೌರವ ಪಡೆಯಿತು. ಅದಕ್ಕಾಗಿ  ಲಂಕಾ ತಂಡ ರೂ 37.2 ಲಕ್ಷ ಬಹುಮಾನ ಪಡೆಯಿತು. ಹೋದ ಬಾರಿಯ ಚಾಂಪಿಯನ್‌ ಪಾಕ್‌ಗೆ ಬರೀ ನಿರಾಸೆ.ಮಾಲಿಂಗ ಪ್ರಭಾವಿ ದಾಳಿ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ಮುಂದಾದ ಪಾಕಿಸ್ತಾನ ತಂಡದವರು ಆರಂಭದಲ್ಲಿಯೇ ಆಘಾತಕ್ಕೊಳಗಾದರು. ಅದಕ್ಕೆ ಕಾರಣ ವೇಗಿ ಲಸಿತ್ ಮಾಲಿಂಗ ಅವರ ಪ್ರಭಾವಿ ಬೌಲಿಂಗ್‌ ದಾಳಿ.

ಮೊದಲ ಓವರ್‌ನಲ್ಲಿಯೇ ಶಾರ್ಜೀಲ್‌ ಖಾನ್‌ ಅವರ ವಿಕೆಟ್‌ ಕಬಳಿಸಿದ ಮಾಲಿಂಗ ಲಂಕಾ ತಂಡ ಮೇಲುಗೈ ಸಾಧಿಸಲು ಕಾರಣರಾದರು. ಆ ಸಂಭ್ರಮ ಅಷ್ಟಕ್ಕೇ ನಿಲ್ಲಲಿಲ್ಲ. ಈ ವೇಗಿಯ ಅಬ್ಬರಕ್ಕೆ ಸಿಲುಕಿದ ಪಾಕ್‌ 18 ರನ್‌ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.ಮಿಸ್ಬಾ, ಫವಾದ್‌ ಆಸರೆ: ಸಂಕಷ್ಟದ ಸಮಯದಲ್ಲಿ ಪಾಕ್‌ಗೆ ಆಪತ್ಬಾಂಧವರಾಗಿ ನಿಂತಿದ್ದು ನಾಯಕ ಮಿಸ್ಬಾ ಉಲ್‌ ಹಕ್‌ ಹಾಗೂ ಫವಾದ್‌ ಆಲಾಂ. ತಂಡವನ್ನು ಸಂಕಷ್ಟದ ಸುಳಿಯಿಂದ ಮೇಲೆತ್ತಿದ ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 122 ರನ್‌ ಸೇರಿಸಿದರು. ಆದರೆ ರನ್‌ ವೇಗಕ್ಕೆ ಕಡಿವಾಣ ಬಿತ್ತು. 98 ಎಸೆತ ಎದುರಿಸಿದ ಮಿಸ್ಬಾ 65 ರನ್‌ ಗಳಿಸಿದರು. ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾಗಿದ್ದು ಫವಾದ್‌ ಹಾಗೂ ಉಮರ್‌ ಅಕ್ಮಲ್‌. ಸುಂದರ ಇನಿಂಗ್ಸ್‌ ಕಟ್ಟಿದ ಫವಾದ್‌ ಚೊಚ್ಚಲ ಶತಕ ಗಳಿಸಿದರು. 134 ಎಸೆತ ಎದುರಿಸಿದ ಅವರು 8 ಬೌಂಡರಿ ಹಾಗೂ 3 ಸಿಕ್ಸರ್‌ ಸಮೇತ ಅಜೇಯ 114 ರನ್‌ ಗಳಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಉಮರ್‌ (59; 42 ಎ, 7 ಬೌಂ) ಬಿರುಸಿನ ಆಟವಾಡಿದರು. ಇವರಿಬ್ಬರು ಐದನೇ ವಿಕೆಟ್‌ಗೆ 115 ರನ್‌ ಸೇರಿಸಿದರು. ಲಂಕಾದ ಮಾಲಿಂಗ ಐದು ವಿಕೆಟ್‌ ಕಬಳಿಸಿ ಮಿಂಚಿದರು.ಉತ್ತಮ ಆರಂಭ: ಸವಾಲಿನ ಗುರಿ ಎದುರು ಲಂಕಾಕ್ಕೆ ಉತ್ತಮ ಆರಂಭವೇ ದೊರೆಯಿತು. ಕುಶಾಲ್‌ ಪೆರೇರಾ ಹಾಗೂ ಲಾಹಿರು ತಿರಿಮಾನೆ ಮೊದಲ ವಿಕೆಟ್‌ಗೆ 56 ರನ್‌ ಸೇರಿಸಿ ಸುಭದ್ರ ಅಡಿಪಾಯ ಹಾಕಿಕೊಟ್ಟರು. ಆದರೆ ಆಫ್‌ ಸ್ಪಿನ್ನರ್‌ ಸಯೀದ್‌ ಅಜ್ಮಲ್‌ ಈ ಹಂತದಲ್ಲಿ ಪೆರೇರಾ ಹಾಗೂ ಕುಮಾರ ಸಂಗಕ್ಕಾರ ವಿಕೆಟ್ ಪಡೆದು ಪಾಕ್‌ ತಂಡ ಮೇಲುಗೈ ಸಾಧಿಸಲು ಕಾರಣರಾದರು.ಆಗ ಜೊತೆಗೂಡಿದ್ದು ತಿರಿಮಾನೆ ಹಾಗೂ ಮಾಹೇಲ ಜಯವರ್ಧನೆ. ಈ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ವಿಫಲರಾಗಿದ್ದ ಜಯವರ್ಧನೆ (75; 93 ಎ, 9 ಬೌಂ,, 1ಸಿ) ಅವಶ್ಯ ಸಮಯದಲ್ಲಿ ಮಿಂಚು ಹರಿಸಿದರು. ಅಷ್ಟು ಮಾತ್ರವಲ್ಲದೇ, ಮೂರನೇ ವಿಕೆಟ್‌ಗೆ 156 ರನ್‌ ಸೇರಿಸಿದರು.ತಿಲಕರತ್ನೆ ದಿಲ್ಶಾನ್‌ ಗಾಯಗೊಂಡಿದ್ದ ಕಾರಣ ಸ್ಥಾನ ಗಿಟ್ಟಿಸಿದ್ದ ತಿರಿಮಾನೆ (101; 108 ಎ, 14 ಬೌಂ) ಈ ಟೂರ್ನಿಯಲ್ಲಿ ಎರಡನೇ ಶತಕ ಗಳಿಸಿದರು. ನಂತರ ನಾಯಕ ಏಂಜೆಲೊ ಮ್ಯಾಥ್ಯೂಸ್‌ ತಂಡವನ್ನು ಗೆಲುವಿನ ಗೆರೆ ಮುಟ್ಟಿಸಿದರು. ಪಾಕ್‌ ಪರ ಅಜ್ಮಲ್‌ (26ಕ್ಕೆ3) ಹೊರತುಪಡಿಸಿದರೆ ಉಳಿದವರು ಯಶ ಕಾಣಲಿಲ್ಲ.‘ಆರು ವರ್ಷಗಳ ಬಳಿಕ ನಾವು ಈ ಪ್ರಶಸ್ತಿ ಜಯಿಸಿದ್ದೇವೆ. ಸಹಜವಾಗಿಯೇ ಈ ಕ್ಷಣ ಸ್ಮರಣೀಯ’ ಎಂದು ಮ್ಯಾಥ್ಯೂಸ್‌ ಪ್ರತಿಕ್ರಿಯಿಸಿದ್ದಾರೆ.ಸ್ಕೋರ್ ವಿವರ

ಪಾಕಿಸ್ತಾನ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 260

ಶಾರ್ಜೀಲ್‌ ಖಾನ್‌ ಸಿ ತಿಸ್ಸಾರ ಪೆರೇರಾ ಬಿ ಮಾಲಿಂಗ  08

ಅಹ್ಮದ್ ಶೆಹ್ಜಾದ್‌ ಸಿ ಕುಮಾರ ಸಂಗಕ್ಕಾರ ಬಿ ಮಾಲಿಂಗ  05

ಮೊಹಮ್ಮದ್‌ ಹಫೀಜ್‌ ಸಿ ಕುಮಾರ ಸಂಗಕ್ಕಾರ ಬಿ ಮಾಲಿಂಗ  03

ಮಿಸ್ಬಾ ಉಲ್‌ ಹಕ್‌ ಸಿ ಕುಶಾಲ್‌ ಪೆರೇರಾ ಬಿ ಮಾಲಿಂಗ  65

ಫವಾದ್‌ ಆಲಾಂ ಔಟಾಗದೆ  114

ಉಮರ್‌ ಅಕ್ಮಲ್‌ ಸಿ ಆಶನ್‌ ಪ್ರಿಯಾಂಜನ್‌ ಬಿ ಲಸಿತ್‌ ಮಾಲಿಂಗ 59

ಶಾಹಿದ್‌ ಅಫ್ರಿದಿ ಔಟಾಗದೆ  00

ಇತರೆ (ಲೆಗ್‌ಬೈ–1,ವೈಡ್‌–5)  06

ವಿಕೆಟ್‌ ಪತನ: 1–8 (ಶಾರ್ಜೀಲ್‌; 0.6); 2–17 (ಶೆಹ್ಜಾದ್‌; 2.6); 3–18 (ಹಫೀಜ್‌; 4.3); 4–140 (ಮಿಸ್ಬಾ; 36.4); 5–255 (ಉಮರ್‌; 49.4)ಬೌಲಿಂಗ್‌: ಲಸಿತ್‌ ಮಾಲಿಂಗ 10–0–56–5, ಸುರಂಗ ಲಕ್ಮಲ್‌ 10–2–41–0 (ವೈಡ್‌–1), ಸಚಿತ್ರ ಸೇನನಾಯಕೆ 9–0–54–0, ತಿಸ್ಸಾರ ಪೆರೇರಾ 10–1–66–0 (ವೈಡ್‌–2), ಏಂಜೆಲೊ ಮ್ಯಾಥ್ಯೂಸ್‌ 7–1–23–0 (ವೈಡ್‌–1), ಚತುರಂಗ ಡಿಸಿಲ್ವಾ 4–0–19–0

ಶ್ರೀಲಂಕಾ 46.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 261

ಕುಶಾಲ್‌ ಪೆರೇರಾ ಸ್ಟಂಪ್ಡ್‌ ಉಮರ್‌ ಅಕ್ಮಲ್‌ ಬಿ ಅಜ್ಮಲ್‌  42

ಲಾಹಿರು ತಿರಿಮಾನೆ ಬಿ ಸಯೀದ್‌ ಅಜ್ಮಲ್‌  101

ಕುಮಾರ ಸಂಗಕ್ಕಾರ ಎಲ್‌ಬಿಡಬ್ಲ್ಯು ಬಿ ಸಯೀದ್‌ ಅಜ್ಮಲ್‌  00

ಯವರ್ಧನೆ ಸಿ ಶಾರ್ಜೀಲ್‌ ಖಾನ್‌ ಬಿ ಮೊಹಮ್ಮದ್‌ ತಲ್ಲಾ  75

ಆಶನ್‌ ಪ್ರಿಯಾಂಜನ್‌ ಸಿ ಉಮರ್ ಅಕ್ಮಲ್‌ ಬಿ ಜುನೈದ್ ಖಾನ್‌ 13

ಏಂಜೆಲೊ ಮ್ಯಾಥ್ಯೂಸ್‌ ಔಟಾಗದೆ  16

ಚತುರಂಗ ಡಿಸಿಲ್ವಾ ಔಟಾಗದೆ  06

ಇತರೆ (ಬೈ–1, ಲೆಗ್‌ಬೈ–1, ವೈಡ್‌–5, ನೋಬಾಲ್‌–1)  08

ವಿಕೆಟ್‌ ಪತನ: 1–56 (ಕುಶಾಲ್‌; 10.1); 2–56 (ಸಂಗಕ್ಕಾರ; 10.2); 3–212 (ಜಯವರ್ಧನೆ; 37.2); 4–233 (ಪ್ರಿಯಾಂಜನ್‌; 41.4); 5–247 (ತಿರಿಮಾನೆ; 44.1).

ಬೌಲಿಂಗ್‌: ಮೊಹಮ್ಮದ್‌ ಹಫೀಜ್‌ 9–0–42–0 (ವೈಡ್‌–1), ಉಮರ್‌ ಗುಲ್‌ 6–0–44–0 (ವೈಡ್‌–1), ಜುನೇದ್‌ ಖಾನ್‌ 9–0–56–1, ಸಯೀದ್‌ ಅಜ್ಮಲ್‌ 10–2–26–3 (ವೈಡ್‌–3). ಮೊಹಮ್ಮದ್‌ ತಲ್ಲಾ 6.2–0–56–1 (ನೋಬಾಲ್‌–1), ಶಾಹಿದ್‌ ಅಫ್ರಿದಿ 6–0–35–0ಫಲಿತಾಂಶ: ಶ್ರೀಲಂಕಾಕ್ಕೆ ಐದು ವಿಕೆಟ್‌ಗಳ ಜಯ ಹಾಗೂ ಏಷ್ಯಾಕಪ್‌ ಪ್ರಶಸ್ತಿ. ಪಂದ್ಯ ಶ್ರೇಷ್ಠ: ಲಸಿತ್‌ ಮಾಲಿಂಗ. ಸರಣಿ ಶ್ರೇಷ್ಠ: ಲಾಹಿರು ತಿರಿಮಾನೆ. ‘ಸೈಕಲ್‌ ಪ್ಯೂರ್‌ ಅಗರಬತ್ತಿ’ ಪ್ರಾಯೋಜಕತ್ವದ ಟೂರ್ನಿಯ ನಂಬಿಕಸ್ತ ಬ್ಯಾಟ್ಸ್‌ಮನ್‌: ಫವಾದ್‌ ಆಲಾಂ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.