ಬುಧವಾರ, ಮೇ 12, 2021
17 °C

ಶ್ರೀಲಂಕಾ: ಯುದ್ಧದಲ್ಲಿ ಮಡಿದವರ ಪತ್ನಿಯರಿಗೆ ನೆರವು:ಉದ್ಯೋಗ ಕೌಶಲ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಶ್ರೀಲಂಕಾದ ಆಂತರಿಕ ಯುದ್ಧದಲ್ಲಿ ಮಡಿದವರ ವಿಧವಾ ಪತ್ನಿಯರಿಗೆ ಉದ್ಯೋಗ ಕೌಶಲ ತರಬೇತಿ ನೀಡಲು ಕರ್ನಾಟಕವೂ ಸೇರಿದಂತೆ ಮೂರು ರಾಜ್ಯಗಳು ಮುಂದಾಗಿವೆ.ಪ್ರತ್ಯೇಕತಾವಾದಿ ತಮಿಳು ವ್ಯಾಘ್ರರ ಜತೆಯ ಯುದ್ಧ ಕೊನೆಗೊಂಡು 3 ವರ್ಷಗಳೇ ಸಂದಿದ್ದು, ಸುಮಾರು 35 ಸಾವಿರ ಮಹಿಳೆಯರು ಈ ಆಂತರಿಕ ಯುದ್ಧದಿಂದ ವಿಧವೆಯರಾಗಿದ್ದಾರೆ.ಶ್ರೀಲಂಕಾದ ಪೂರ್ವ ಭಾಗದ ಬಟ್ಟಿಕೊಲಾ ಪ್ರದೇಶದಲ್ಲಿ ಹೆಚ್ಚಾಗಿ ಇರುವ ಈ ವಿಧವೆಯರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು ಸ್ವಂತ ಕಾಲ ಮೇಲೆ ನಿಂತು ಜೀವನ ನಡೆಸಲು ಅನುಕೂಲವಾಗಲೆಂದು ವಿವಿಧ ಉದ್ಯೋಗಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.35 ಸಾವಿರ ವಿಧವೆಯರ ಪೈಕಿ 13 ಸಾವಿರ ವಿಧವೆಯರ ವಯಸ್ಸು 23 ವರ್ಷಕ್ಕಿಂತ ಕಡಿಮೆ. ಇದೊಂದು ಭಾರಿ ವಿಷಾದದ ಸಂಗತಿ ಎಂದು ಇತ್ತೀಚೆಗೆ ಶ್ರೀಲಂಕಾದ ವಿವಿಧ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿದ್ದ ಭಾರತದ ಸಂಸದರ ನಿಯೋಗದಲ್ಲಿ ಇದ್ದ ಸಿಪಿಐ ಸಂಸದ ಟಿ. ಕೆ. ರಂಗರಾಜನ್ ತಿಳಿಸಿದ್ದಾರೆ.ಈ ವಿಧವೆಯರು ಸ್ವತಂತ್ರವಾಗಿ ಬದುಕು ನಡೆಸಲು ನೆರವಾಗುವ ಉದ್ದೇಶದಿಂದ ಭಾರತ ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಆರಂಭದಲ್ಲಿ 800 ವಿಧವೆಯರಿಗೆ ವಿವಿಧ ಉದ್ಯೋಗಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಈ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ತರಬೇತಿಗೆ ಆಯ್ಕೆಯಾದ ಮಹಿಳೆಯರಿಗೆ ಕಂಪ್ಯೂಟರ್, ಆಹಾರ ಸಂಸ್ಕರಣೆ ಮತ್ತು ಕಸೂತಿ ಹಾಕುವುದು ಇವೇ ಮೊದಲಾದ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ರಂಗರಾಜನ್ ತಿಳಿಸಿದ್ದಾರೆ.ತರಬೇತಿ ಪಡೆದು ಹಿಂತಿರುಗಿದ ನಂತರ ಶ್ರೀಲಂಕಾದಲ್ಲಿ ಸ್ವಲ್ಪ ಕಾಲ ಇದ್ದು ಮಾರ್ಗದರ್ಶನ ಮಾಡಲು ಗುಜರಾತ್‌ನ ಮಹಿಳೆಯರ ತಂಡವೊಂದು ಅಲ್ಲಿಗೆ ತೆರಳಲಿದೆ.ಪುನರ್ವಸತಿ ಪ್ರದೇಶಗಳಲ್ಲಿ ಈಗ ಪುರುಷರು ಕೆಲಸಗಳಿಗೆ ಹೋಗುತ್ತಿದ್ದು ಪರಿಸ್ಥತಿ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.ನಾಗರಿಕ ಪ್ರದೇಶದಲ್ಲಿ ನಿಯೋಜಿಸಲಾಗಿರುವ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳಬೇಕು ಎಂದು ನಮ್ಮ ನಿಯೋಗವು ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಒತ್ತಾಯಿಸಿದೆ ಎಂದು ಹೇಳಿದ್ದಾರೆ.

ಅಲ್ಲಿಯ ತಮಿಳು ರಾಜಕೀಯ ಪಕ್ಷಗಳ ಸಂಸತ್ತರು ಮತ್ತು ಇತರ ಧುರೀಣರ ಜತೆ ಮಾತನಾಡಿದಾಗ ಪ್ರತ್ಯೇಕ ತಮಿಳು ರಾಜ್ಯ ಬೇಕು ಎಂದು ಯಾರೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.