ಶುಕ್ರವಾರ, ಜೂಲೈ 3, 2020
22 °C

ಶ್ರೀಶೈಲಕ್ಕೆ ಪಾದಯಾತ್ರೆ

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಶ್ರೀಶೈಲಕ್ಕೆ ಪಾದಯಾತ್ರೆ

ಕೈಯಲ್ಲೊಂದು ಕೋಲು; ಬೆನ್ನಿಗೊಂದು ಚೀಲ. ಮಲ್ಲಯ್ಯನ ಸ್ಮರಿಸುತ್ತ ನೆತ್ತಿ ಸುಡುವಂಥ ಉರಿಬಿಸಿಲು ಲೆಕ್ಕಿಸದೆ ಬರಿಗಾಲಲ್ಲಿ ಅವರೆಲ್ಲ ಹೆಜ್ಜೆ ಹಾಕುತ್ತಿದ್ದಾರೆ.ವಿಜಾಪುರ, ಬಾಗಲಕೋಟೆ ಜಿಲ್ಲೆಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈಗ ಈ ಭಾಗದ ಯಾವ ರಸ್ತೆಗಳಲ್ಲಿ ನೋಡಿದರೂ ಶ್ರೀಶೈಲಕ್ಕೆ ಹೊರಟ ಪಾದಯಾತ್ರಿಗಳ ದಂಡು ಕಂಡು ಬರುತ್ತದೆ.ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ. ಉತ್ತರ ಕರ್ನಾಟಕದ ಭಕ್ತರು ಪಾದಯಾತ್ರೆ ಮೂಲಕ ಈ ಜಾತ್ರೆ ಹೋಗುವುದು ಸಂಪ್ರದಾಯ. ಕೆಲವರು ತಮ್ಮೂರಿನಿಂದ ಒಂದು ತಿಂಗಳು ಮುಂಚಿತವಾಗಿ (500ರಿಂದ 650 ಕಿ.ಮೀ) ಪಾದಯಾತ್ರೆ ಆರಂಭಿಸುತ್ತಾರೆ. ಯಾತ್ರಿಗಳು ಆಂಧ್ರದ ಅನಂತಪುರದ ಮೂಲಕ ದಟ್ಟ ಕಾಡು ದಾರಿಯಲ್ಲಿ ನಡೆದು ಶ್ರೀಶೈಲ ತಲುಪುತ್ತಾರೆ.ಶ್ರೀಶೈಲ ಕರ್ನೂಲ್ ಜಿಲ್ಲೆಯಲ್ಲಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದು. ಇದು ಶಿವನ ವಾಸಸ್ಥಾನ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಮಲ್ಲಿಕಾರ್ಜುನ ದೇವಸ್ಥಾನ ಕೃಷ್ಣಾ ನದಿಯ ಬದಿಯ ‘ಸಿರಿಗಿರಿ’ ಬೆಟ್ಟದಲ್ಲಿದೆ. ಇಲ್ಲಿಗೆ ಬರುವ ಭಕ್ತರಲ್ಲಿ ಹೆಚ್ಚಿನವರು ಕರ್ನಾಟಕದವರು.ಅನಂತಪುರದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಸುಮಾರು 80 ಕಿ ಮೀ ಅಂತರದಲ್ಲಿದೆ. ಈ ದೂರ ಕ್ರಮಿಸಲು 18 ಗಂಟೆ ಬೇಕು. ದುರ್ಗಮ ದಾರಿಯಲ್ಲಿ ಪಾದಯಾತ್ರೆ ಮೂಲಕ ಭಕ್ತರು ಶ್ರೀಶೈಲಕ್ಕೆ ತೆರಳುತ್ತಾರೆ. ಪಾದಯಾತ್ರಿಗಳಿಗೆ ಮಾರ್ಗ ಮಧ್ಯದಲ್ಲಿ ಊಟ, ಉಪಹಾರ, ತಂಪು ಪಾನೀಯ, ಚಹಾ ವ್ಯವಸ್ಥೆ ಇರುತ್ತದೆ. ಉಚಿತ ವೈದ್ಯಕೀಯ ತಪಾಸಣೆ, ಔಷಧೋಪಚಾರವೂ ಇರುತ್ತದೆ.ಶ್ರೀಶೈಲಕ್ಕೂ ಉತ್ತರ ಕರ್ನಾಟಕಕ್ಕೂ ನಂಟು. ಮಹಾರಾಷ್ಟ್ರದ ಸೊಲ್ಲಾಪುರದ ಶ್ರೀಸಿದ್ಧೇಶ್ವರನು ಶ್ರೀಶೈಲ ಮಲ್ಲಿಕಾರ್ಜುನನ ಭಕ್ತ. ಶ್ರೀಶೈಲಕ್ಕೆ ತೆರಳಿದ್ದ ಸಿದ್ಧೇಶ್ವರನಿಗೆ ಮಲ್ಲಿಕಾರ್ಜುನನ ದರ್ಶನವಾಗಲಿಲ್ಲವಂತೆ. ಆಗ ಅವನು ಅಲ್ಲಿನ ಕೊಳ್ಳಕ್ಕೆ ಹಾರಲು ಮುಂದಾಗಿದ್ದ. ಆಗ ಮಲ್ಲಿಕಾರ್ಜುನನೇ ಬಂದು ಅವನನ್ನು ರಕ್ಷಿಸಿದ ಎಂಬ ಪ್ರತೀತಿ ಇದೆ.  ಶ್ರೀಶೈಲದಲ್ಲಿ ‘ಸಿದ್ಧಯ್ಯನ ಕೊಳ್ಳ’ ಸ್ಥಳ ಈಗಲೂ ಇದೆ.ಈ ಕಾರಣಕ್ಕೆ ಸೊಲ್ಲಾಪುರದ ಸಿದ್ಧೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಹಾಗೂ ನಂದಿಕೋಲು ತಲುಪಿದ ನಂತರವೇ ಯುಗಾದಿ ಸಂದರ್ಭದಲ್ಲಿ ಶ್ರೀಶೈಲದಲ್ಲಿ ಮಲ್ಲಿಕಾರ್ಜುನನಿಗೆ ಅಭಿಷೇಕ ಮತ್ತಿತರ ಧಾರ್ಮಿಕ  ಕಾರ್ಯಕ್ರಮ ಆರಂಭಿಸುವ ಪರಿಪಾಠ ರೂಢಿಯಲ್ಲಿದೆ. ಪಲ್ಲಕ್ಕಿ, ನಂದಿಕೋಲು ಹೊತ್ತು ಸೊಲ್ಲಾಪುರದ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಾರೆ.ಚಂದ್ರಮಾನ ಯುಗಾದಿಯ ದಿನ ಶ್ರೀಶೈಲದಲ್ಲಿ  ಜರುಗುವ ರಥೋತ್ಸವದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.