ಬುಧವಾರ, ಡಿಸೆಂಬರ್ 11, 2019
25 °C

ಶ್ರೀ ಅಭಯಸ್ತಂಭದ ಲಕ್ಷ್ಮಿನರಸಿಂಹ

Published:
Updated:
ಶ್ರೀ ಅಭಯಸ್ತಂಭದ ಲಕ್ಷ್ಮಿನರಸಿಂಹ

ಬೆಂಗಳೂರಿನ ತ್ಯಾಗರಾಜನಗರ 3ನೇ ಬ್ಲಾಕ್, 6ನೇ ಮೇನ್, 7ನೇ ಕ್ರಾಸ್‌ನಲ್ಲಿನ ಶ್ರಿ ಅಭಯ ಲಕ್ಷ್ಮಿನರಸಿಂಹ ಸನ್ನಿಧಿ ಒಂದು ವಿಶಿಷ್ಟ ದೇವಾಲಯ. ಮಹಾದ್ವಾರದಿಂದ ಒಳಗೆ ಪ್ರವೇಶಿಸಿದರೆ  ಧ್ವಜಸ್ತಂಭ, ನಾಗದೇವತೆಗಳು, ಅದರ ಪಕ್ಕ ನವಗ್ರಹಗಳಿವೆ.ಮುಖ್ಯದ್ವಾರದ ಮೇಲೆ ಮುಖ್ಯಪ್ರಾಣ, ಅಲ್ಲಿಂದ ಒಳಗೆ ಬಲಬದಿಗೆ ಬಲಮುರಿ ಗಣಪತಿ ಮತ್ತು ಅರ್ಕ ಗಣಪತಿ, ಎಡಭಾಗದಲ್ಲಿ `ಶ್ರಿ ನರಸಿಂಹ ಸ್ತಂಭ~, ಅದರ ಎದುರಿಗೆ ಎರಡು ಪುಟ್ಟ ಪ್ರಾಣದೇವರು. ಗರ್ಭಗುಡಿಯಲ್ಲಿ ವಿರಾಜಮಾನನಾದ `ಶ್ರಿ ಅಭಯ ಲಕ್ಷ್ಮಿನರಸಿಂಹ ಮತ್ತು ಶ್ರಿ ಪಟ್ಟಾಭಿರಾಮ~. ಪಕ್ಕದಲ್ಲಿ ಶ್ರಿ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಹಾಗೂ ಲಕ್ಷ್ಮಿ ಹಯಗ್ರೀವ ದೇವರು, ಸಂಕಷ್ಟಹರ ಹನುಮಂತ, ರಾಮನಾಥೇಶ್ವರ, ಅಪ್ರಮೇಯ ಅಂಬೆಗಾಲು ಕೃಷ್ಣ. ಹೀಗೆ ಬಹು ದೇವತೆಗಳ ತಾಣ ಇದು.ಇಲ್ಲಿನ ಇನ್ನೊಂದು ವಿಶೇಷವೆಂದರೆ, ಎಲ್ಲ ನರಸಿಂಹ ಕ್ಷೇತ್ರದಲ್ಲಿ ನರಸಿಂಹ ಸ್ತಂಭಗಳಿರುತ್ತವೆ. ಅಲ್ಲಿ ಕೇವಲ ಪೂಜೆ ನಡೆಯುತ್ತದೆ. ಆದರೆ ಇಲ್ಲಿನ ಸ್ತಂಭ ಅಷ್ಟಮೂಲೆಯದ್ದು. ಆದ್ದರಿಂದ ಇದಕ್ಕೆ ಪ್ರದಕ್ಷಿಣೆ ಬಂದರೆ ಅಷ್ಟದಿಗ್ಬಂಧನದ ದೋಷ ಪರಿಹಾರವಾಗುತ್ತದೆ, ಆರೋಗ್ಯ ಭಾಗ್ಯ ವೃದ್ಧಿಯಾಗುತ್ತದೆ ಎನ್ನುತ್ತಾರೆ ಅರ್ಚಕ ಮತ್ತು ವ್ಯವಸ್ಥಾಪಕರಾದ ಎಸ್.ಆರ್. ವಾದಿರಾಜಾಚಾರ್ಯ ಅವರು.ಈ ಸ್ತಂಭಕ್ಕೆ ಇಷ್ಟೆಲ್ಲ ಮಹಿಮೆ ಪ್ರಾಪ್ತವಾಗಲು ಕಾರಣವೂ ಇದೆ. ನೂರಾ ಎಂಟು ಶ್ರೇಷ್ಠ ಸಾಲಿಗ್ರಾಮ, ಪ್ರಾಚೀನ ಪ್ರತಿಮಾದಿಗಳು, ತರತಮ ದೇವತೆಗಳು, ಫಲಕಾರಿ ಯಂತ್ರಗಳು, ಪುರಾತನ ಲೋಹಾದಿಗಳ ಚಕ್ರಗಳು, ರಕ್ಷಾಕವಚಗಳನ್ನು ಇದರಲ್ಲಿ ಅಳವಡಿಸಿ ಸಾಗರ ತೀರ್ಥ ಹಾಗೂ ಗಂಗೆ ಸೇರಿ ವಿವಿಧ ಪವಿತ್ರ ನದಿಗಳ ತೀರ್ಥಗಳನ್ನು ಪ್ರೋಕ್ಷಿಸಿ ಇದನ್ನು ಪ್ರತಿಷ್ಠಾಪಿಸಲಾಗಿದೆ. ಸ್ತಂಭಕ್ಕೆ ಪ್ರದಕ್ಷಿಣೆ ಬರುವ ಪದ್ಧತಿಯೂ ಭಿನ್ನ. ಮೊದಲು ಮೂರು ಸುತ್ತು ಬಂದು ಸ್ತಂಭದ ಪೀಠದ ಬಳಿ ಒರಗಿಕೊಂಡು ನರಸಿಂಹ ದೇವರ ಪ್ರಾರ್ಥನೆ ಮಾಡುತ್ತಾರೆ. ಮನದಿಂಗಿತ ಹೇಳಿಕೊಳ್ಳುತ್ತಾರೆ.

 ಸೇವೆಗಳು

ಪ್ರತಿ ಪೌರ್ಣಮಿ ದಿನ ಸಂಜೆ 7 ರಿಂದ 8.30ರ ಒಳಗೆ ಸ್ತಂಭಕ್ಕೆ ಭೂತರಾಜರ ಪೂಜೆ, ಪ್ರತಿ ಅಮಾವಾಸ್ಯೆ ಸಂಜೆ 7 ರಿಂದ 8.30 ರವರೆಗೆ ದುರ್ಗಾ ನಮಸ್ಕಾರ ಪೂಜೆ, ಪ್ರತಿ ಶುಕ್ರವಾರ ರಾತ್ರೆ 8 ರಿಂದ 8.25 ರವರೆಗೆ ಪ್ರಾಕಾರೋತ್ಸವ ಮತ್ತು ಬಾಳೆಹಣ್ಣಿನ ರಸಾಯನ ನೈವೇದ್ಯ ನಡೆಯುತ್ತದೆ. ಮಾಹಿತಿಗೆ: 94488 50552.

ಪ್ರತಿಕ್ರಿಯಿಸಿ (+)