ಶ್ರೀ ಭತ್ತದ ಪದ್ಧತಿ ರಾಷ್ಟ್ರವ್ಯಾಪಿ ವಿಸ್ತರಣೆಗೆ ಚಿಂತನೆ

7

ಶ್ರೀ ಭತ್ತದ ಪದ್ಧತಿ ರಾಷ್ಟ್ರವ್ಯಾಪಿ ವಿಸ್ತರಣೆಗೆ ಚಿಂತನೆ

Published:
Updated:

ಹಾವೇರಿ: ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ನವೀನ ಕ್ರಮದಲ್ಲಿ ಭತ್ತದ ಬೇಸಾಯ ಮಾಡುವ ಪ್ರಯೋಗವಾದ ‘ಶ್ರೀ ಭತ್ತದ ಬೇಸಾಯ’ ಪದ್ಧತಿಯು ಜಾರಿಗೆ ತಂದ ಒಂದು ವರ್ಷದಲ್ಲಿ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಪದ್ಧತಿಯಾಗಿ ಹೊರಹೊಮ್ಮಿದೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ದೇಶದ ಆಹಾರ ಭದ್ರತೆ ಕಾಪಾಡಿಕೊಳ್ಳುವಲ್ಲಿ ಭತ್ತದ ಪಾತ್ರ ಮಹತ್ವದ್ದಾಗಿದ್ದು, ಅದಕ್ಕಾಗಿಯೇ ಭತ್ತದ ಬೇಸಾಯಕ್ಕೆ ಉತ್ತೇಜನ ನೀಡಲು ತಮ್ಮ ಸಂಸ್ಥೆ ಭತ್ತದ ಈ ನೂತನ ಪ್ರಯೋಗವನ್ನು ರಾಜ್ಯದ 10 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತಂದಿತ್ತು. ಎಲ್ಲ ಕಡೆಗಳಲ್ಲಿಯೂ ಉತ್ತಮ ಫಲಿತಾಂಶ ಬಂದಿದೆ ಎಂದರು.ಇನ್ನೂ ಪ್ರಾಯೋಗಿಕ ಹಂತದಲ್ಲಿರುವ ಈ ಪದ್ಧತಿಯನ್ನು ಮೂರು ವರ್ಷಗಳ ಸತತವಾಗಿ ಬೆಳೆದ ನಂತರ ಇದರ ಫಲಿತಾಂಶದ ನಿಖರತೆ ಗೊತ್ತಾಗಲಿದೆ. ಮುಂಬರುವ ದಿನಗಳಲ್ಲಿ ನಬಾರ್ಡ್ ಸಂಸ್ಥೆ ಸಹಕಾರದೊಂದಿಗೆ ಈ ಪದ್ಧತಿಯನ್ನು ದೇಶಾದ್ಯಂತ ವಿಸ್ತರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.2 ವರ್ಷದ ಸಾಧನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿ ಎರಡು ವರ್ಷಗಳು ಗತಿಸಿದವು. ಈ ಅಲ್ಪ ಅವಧಿಯಲ್ಲಿ ಸಂಸ್ಥೆ ಗ್ರಾಮೀಣ ಜನರ ಅಭಿವೃದ್ಧಿ ಹಾಗೂ ಅವರ ಜೀವನ ಮಟ್ಟ ಸುಧಾರಣೆಯಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ತಿಳಿಸಿದ ಅವರು, ಈಗಾಗಲೇ ಸಂಸ್ಥೆಯಡಿ ಜಿಲ್ಲೆಯಾದ್ಯಂತ 12,097 ಸ್ವಸಹಾಯ ಸಂಘಗಳನ್ನು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ 11,073 ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಿ ಆ ಮೂಲಕ 1,33,233 ಮಹಿಳೆಯರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಜ್ಞಾನ ವಿಕಾಸಕ್ಕೆ ಪ್ರೇರಣೆ ನೀಡಲಾಗಿದೆ. 1024 ರೈತರ ಸ್ವಸಹಾಯ ಸಂಘಗಳನ್ನು ರಚಿಸಿ 11,333 ಕೃಷಿಕರನ್ನು ಸಂಘಟಿಸಲಾಗಿದೆ ಎಂದರು.ಈ ಸ್ವಸಹಾಯ ಸಂಘಗಳ 1,44,013 ಸದಸ್ಯರು 90.46 ಕೋಟಿ ವ್ಯವಹಾರ ಮಾಡಿದ್ದು, ಅದರಲ್ಲಿ 11 ಕೋಟಿ ರೂ.ಉಳಿತಾಯ ಮಾಡಿದ್ದಾರೆ. ಸ್ವಉದ್ಯೋಗ ಯೋಜನೆಯಡಿ 12.2 ಕೋಟಿ ರೂ. ವಿನಿಯೋಗಿಸಿ 6,013 ಕುಟುಂಬಗಳಿಗೆ ಅಂಗಡಿ, ಟೈಲರಿಂಗ್, ಸಣ್ಣ ವ್ಯಾಪಾರ, ವಾಹನ, ಯಂತ್ರಗಳ ಖರೀದಿ, ಹೈನುಗಾರಿಕೆ, ಪಶು ಸಂಗೋಪನೆ, ಗುಡಿ ಕೈಗಾರಿಕೆಗಳನ್ನು ಆರಂಭಿಸಲು ಸಹಾಯಧನ ಮಾಡಲಾಗಿದೆ ಎಂದು ಹೇಳಿದರು.ಅದೇ ರೀತಿ ಕೃಷಿ, ತೋಟಗಾರಿಕೆ, ಒಣ ಕೃಷಿ, ಹೈನುಗಾರಿಕೆ ಸೇರಿದಂತೆ ಗ್ರಾಮೀಣ ಪ್ರದೇಶದ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆ, ಈವರೆಗೆ 2852 ಕೃಷಿ ಹಾಗೂ ಕೃಷಿ ಪೂರಕ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ 1.74 ಲಕ್ಷ ಕೃಷಿಕರಿಗೆ ತರಬೇತಿ ನೀಡಲಾಗಿದೆ ಎಂದ ಅವರು, ಜಿಲ್ಲೆಯ 6068 ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ಮನೆ ದುರಸ್ತಿಗೆ. 7368 ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಡೆಸ್ಕ್, ಬೋಧನಾ ಉಪಕರಣಕ್ಕಾಗಿ ಸಂಸ್ಥೆ 1.36 ಕೋಟಿ ರೂ. ವಿನಿಯೋಗಿಸಿದೆ ಎಂದು ತಿಳಿಸಿದರು.ಸ್ವಯಂ ನಿರ್ಮಾಣ ಯೋಜನೆಯಡಿ ನೆರೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮರು ಕೃಷಿಯಲ್ಲಿ ಬೀಜ ಖರೀದಿಗೆ ಹಾಗೂ 415 ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಒಟ್ಟು 91.92 ಲಕ್ಷ ಅನುದಾನ ನೀಡಲಾಗಿದೆ. ಇದಲ್ಲದೇ ಸಂಪೂರ್ಣ ವಿಮಾ ಯೋಜನೆಯಡಿ 26 ಸಾವಿರ ಕುಟುಂಬಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.130 ಹಾಲು ಉತ್ಪಾದಕರ ಸೋಸೈಟಿಗಳಿಗೆ ಮಿಲ್ಕೋ ಟೆಸ್ಟರ್‌ಗಳ, 90 ಸೋಸೈಟಿಗಳಿಗೆ 90 ತೂಕದ ಯಂತ್ರಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಜಿಲ್ಲಾ ನಿರ್ದೇಶಕಿ ಸವಿತಾ ಡಿಸೋಜಾ, ತಾಲ್ಲೂಕು ನಿರ್ದೇಶಕರಾದ ಚಂದ್ರಶೇಖರ, ಬಾಬುನಾಯಕ ಹಾಗೂ ಮಹೇಶ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry