ಶುಕ್ರವಾರ, ನವೆಂಬರ್ 15, 2019
22 °C

ಶ್ರುತಿ ಸೇರಿದೆ...

Published:
Updated:

`ಗ್ಲಾಮರ್ ಅಂದ್ರೇನೆ ಭಯ ನಂಗೆ'.ಸಣ್ಣನೆ ನಕ್ಕರು ನಟಿ ಶ್ರುತಿ ಹರಿಹರನ್. `ಲೂಸಿಯಾ' ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಈ ಬೆಡಗಿ, ನಟಿಸಿರುವ ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೇ ಮತ್ತೆರಡು ಸಿನಿಮಾಗಳಲ್ಲಿ ಅವಕಾಶ ಪಡೆದ ಅದೃಷ್ಟವಂತೆ.`ಒಂದೆರಡು ದೃಶ್ಯಗಳಲ್ಲಿ ಕಾಣಿಸಿ, ಹಾಡುಗಳಲ್ಲಿ ಗ್ಲಾಮರಸ್ ಆಗಿ ಕುಣಿದು ಹೋಗುವ ನಾಯಕಿಯಾಗುವ ಆಸೆ ನನಗೆ ಖಂಡಿತಾ ಇಲ್ಲ. ಮೇಕಪ್ ಇಲ್ಲದೆ, ಅಭಿನಯವನ್ನೇ ನೆಚ್ಚಿಕೊಳ್ಳುವ ಸವಾಲಿನ ಪಾತ್ರಗಳಿದ್ದರೆ ಹೇಳಿ, ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುತ್ತೇನೆ. ಗ್ಲಾಮರಸ್ ಆಟಿಟ್ಯೂಡ್ ನನ್ನದಲ್ಲ.

ಅದಕ್ಕೆಂದೇ ಬೇರೆ ನಟಿಯರಿದ್ದಾರೆ' ಎಂಬ ಖಡಕ್ ಧೋರಣೆ ಅವರದು.ಕೊಂಕಣಾ ಸೆನ್, ವಿದ್ಯಾಬಾಲನ್, ನಂದಿತಾದಾಸ್‌ರಂಥ ಗ್ಲಾಮರ್ ನಂಬದೆ ನಟನೆಯನ್ನೇ ಉಸಿರಾಡುವ ನಟಿಯರಿದ್ದಾರೆ. ಅವರಂತೆ ನಾನಾಗಬೇಕು ಎಂಬ ಹಂಬಲ ಹಂಚಿಕೊಳ್ಳುವ ಶ್ರುತಿ ಬಯಸಿದಂತೆ ವೈವಿಧ್ಯಮಯ ಪಾತ್ರಗಳು ದೊರೆಯುತ್ತಿರುವುದರ ಸಂತಸದಲ್ಲಿದ್ದಾರೆ.ಕೇರಳ-ತಮಿಳುನಾಡು ಗಡಿಯ ಪಲಕ್ಕಾಡ್‌ನಲ್ಲಿ ಹುಟ್ಟಿದ ಶ್ರುತಿ ಹರಿಹರನ್, ಬೆಂಗಳೂರಿನಲ್ಲಿ ಬೆಳೆದವರು. ಮನೆ ಮಾತು ತಮಿಳು. ಬೆಂಗಳೂರಿನಲ್ಲಿಯೇ ಬಿಬಿಎಂ ಶಿಕ್ಷಣ ಪಡೆದ ಅವರು ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳನ್ನು ಅರಳು ಹುರಿದಂತೆ ಮಾತನಾಡಬಲ್ಲರು.ಅಂದಹಾಗೆ, ಅವರು ಬಣ್ಣದ ಬದುಕಿಗೆ ಕಾಲಿರಿಸಿದ್ದು ಮಲಯಾಳಂನ `ಸಿನಿಮಾ ಕಂಪೆನಿ' ಮೂಲಕ. ನಟಿಯಾಗಬೇಕೆಂಬ ಆಸೆ ಇಲ್ಲದಿದ್ದರೂ ಮನರಂಜನಾ ಮಾಧ್ಯಮದ ಸೆಳೆತ ಇದ್ದದ್ದು ನಿಜ ಎನ್ನುತ್ತಾರೆ ಅವರು. ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಶ್ರುತಿ ಮನೆಯಲ್ಲಿ ಸಂಸ್ಕೃತಿ ಮೌಲ್ಯಕ್ಕೆ ಆದ್ಯತೆ. ಅಮ್ಮ ಕರ್ನಾಟಕ ಶಾಸ್ತ್ರೀಯ ಹಾಡುಗಾರ್ತಿ. ಶ್ರುತಿ ಮೂರು ವರ್ಷದವರಿದ್ದಾಗಲೇ ಪೋಷಕರು ಭರತನಾಟ್ಯ ಶಾಲೆಗೆ ಸೇರಿಸಿದರು. ಅಲ್ಲಿ ಶುರುವಾದ ನೃತ್ಯದ ನಂಟಿನ ಬಗ್ಗೆ ಅವರಿಗೆ ಬಲುಪ್ರೀತಿ. ಶಾಲಾ ಕಾಲೇಜುಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಅವರನ್ನು ಸಹಜವಾಗಿಯೇ ರಂಗಭೂಮಿ ಆಕರ್ಷಿಸಿತು.

ನಾಟಕ, ನೃತ್ಯ ರೂಪಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರು ಸ್ನೇಹವಲಯ ಹುಟ್ಟುಹಾಕಿದ `ಟಾಬ ಕರ್ಮ' ನೃತ್ಯ ತಂಡದ ಮೂಲಕ ಅನೇಕ ಕಾರ್ಪೊರೇಟ್ ನೃತ್ಯ ಪ್ರದರ್ಶನಗಳನ್ನು ನೀಡಿದರು. ಸಿನಿಮಾ ನಂಟು ಬೆಸೆದದ್ದು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮೂಲಕ. ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾಗಲೂ ನಟಿಸುವ ಬಯಕೆ ಮೂಡಿರಲಿಲ್ಲ. ಮಲಯಾಳಂನ `ಸಿನಿಮಾ ಕಂಪೆನಿ' ಚಿತ್ರದ ಆಡಿಷನ್ ಜಾಹೀರಾತು ನೋಡಿ ಸುಮ್ಮನೆ ಒಂದು ಕೈ ನೋಡೋಣ ಎಂದು ಪ್ರಯತ್ನಿಸಿದ್ದಕ್ಕೆ ಸಿಕ್ಕಿದ್ದು ಮುಖ್ಯಪಾತ್ರದಲ್ಲಿ ನಟಿಸುವ ಅವಕಾಶ. ಕನ್ನಡದ ಯಾವ ಚಿತ್ರಕ್ಕೂ ಅವರು ಅವಕಾಶ ಅರಸಿ ಹೋಗಲಿಲ್ಲ. ಆಡಿಷನ್‌ಗಳಲ್ಲಿ ಭಾಗವಹಿಸಿದರು, ಆಯ್ಕೆಯೂ ಆದರು.`ಲೂಸಿಯಾ' ಬಿಡುಗಡೆಗೂ ಮುನ್ನವೇ ಗಡ್ಡ ವಿಜಿ ನಿರ್ದೇಶನದ `ಪಾಪಾಸು ಕಳ್ಳಿ' ಮತ್ತು ಎ.ಪಿ. ಅರ್ಜುನ್‌ರ `ರಾಟೆ'ಗಳಲ್ಲಿ ನಾಯಕಿಯಾಗುವ ಭಾಗ್ಯ. ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಪಾತ್ರಗಳೆಂದರೆ ಇಷ್ಟ ಎನ್ನುವ ಅವರಿಗೆ `ಸಿನಿಮಾ ಕಂಪೆನಿ'ಯ ಪಾತ್ರ ತಮ್ಮಂತೆಯೇ ಇದ್ದದ್ದು ಬೇಸರ ತಂದಿತ್ತು. ಎರಡು ಛಾಯೆಗಳಿರುವ ಲೂಸಿಯಾದಲ್ಲಿ ಮೇಕಪ್ ಇಲ್ಲದ ಹಳ್ಳಿ ಹುಡುಗಿ ಪಾತ್ರ ಮೆಚ್ಚುಗೆಯಾದರೆ, ದ್ವಿತೀಯಾರ್ಧದಲ್ಲಿ ತುಸು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮತ್ತೊಂದು ಛಾಯೆ ಕಷ್ಟವಾಯಿತು ಎನ್ನುತ್ತಾರೆ.`ರಾಟೆ'ಯ ಪಾತ್ರವೂ ಅವರಿಗೆ ಖುಷಿ ತಂದಿದೆ. `ಹಳ್ಳಿ ಹುಡುಗಿ ಪ್ಯಾಟೆಗ್ ಬಂದ್ಲು' ಎಂಬಂಥ ಪಾತ್ರ ತಮ್ಮದು ಎಂದು ನಗುಹರಿಸುತ್ತಾರೆ ಅವರು. ನಿರ್ದೇಶಕ ಪವನ್‌ರಿಂದ ಕಲಿತದ್ದು ಸಾಕಷ್ಟು ಎನ್ನುವ ಅವರು, ಅರ್ಜುನ್ ಸಿನಿಮಾ ಕಲೆಗಾರಿಕೆಯನ್ನೂ ಮೆಚ್ಚುತ್ತಾರೆ. `ಚಿಕ್ಕಂದಿನಿಂದಲೂ ನನ್ನನ್ನು ನಾನು ಅರಿತುಕೊಂಡಿದ್ದೇನೆ. ಮಹತ್ವಾಕಾಂಕ್ಷೆಯ, ಎಮೋಷನಲ್ ಸ್ವಭಾವ ನನ್ನದು. ಅದಕ್ಕೆ ವಿರುದ್ಧವಾದ ಪಾತ್ರಗಳ ಸವಾಲನ್ನು ಎದುರಿಸುವುದೇ ನಿಜವಾದ ನಟನೆ' ಎನ್ನುತ್ತಾರೆ ಅವರು.ಸಾಂಪ್ರದಾಯಿಕ ಕುಟುಂಬವಾದ್ದರಿಂದ ಶ್ರುತಿ ನೃತ್ಯ, ಸಿನಿಮಾ ಕಡೆ ವಾಲುವುದನ್ನು ನೋಡಿ ಹಲವರು ಪ್ರಶ್ನಿಸಿದ್ದರು. ಆರಂಭದಲ್ಲಿ ಹೆದರಿದ್ದರೂ ಅಮ್ಮ ತನ್ನ ಬೆಂಬಲಕ್ಕೆ ನಿಂತಿರುವುದು ಅವರ ಉತ್ಸಾಹ ಹೆಚ್ಚಿಸಿದೆ. `ಉಳಿದ ನಾಯಕಿಯರ ಅಮ್ಮಂದಿರಂತೆ, ನನ್ನಮ್ಮ ಚಿತ್ರೀಕರಣದ ಸ್ಥಳಕ್ಕೆ ಬರುವುದಿಲ್ಲ. ನನ್ನ ಮೇಲಿನ ನಂಬಿಕೆ ಅದು. ಕುಟುಂಬ ನಂಬಿರುವ ಮೌಲ್ಯವನ್ನು ಉಳಿಸುವ ಹೊಣೆ ನನ್ನದು. ಹೀಗಾಗಿ ಗ್ಲಾಮರ್ ಪಾತ್ರಗಳಿಂದ ದೂರ ದೂರ...' ಎನ್ನುವ ಶ್ರುತಿ, ಉತ್ತಮ ಕಥೆ ಮತ್ತು ನಟನೆಗೆ ಆದ್ಯತೆ ಇರುವ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರಂತೆ.ಐತಿಹಾಸಿಕ ಘಟನೆಗಳನ್ನಾಧರಿಸಿದ ಕೃತಿಗಳು ಮತ್ತು ಜೀವನಚರಿತ್ರೆಗಳನ್ನು ಓದುವುದು, ಜೊತೆಗೆ ಬರವಣಿಗೆ ಅವರ ನೆಚ್ಚಿನ ಹವ್ಯಾಸಗಳು. ಕನ್ನಡದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿರುವ ಅವರು ತಮಿಳು ಚಿತ್ರರಂಗದ ಮೇಲೂ ಕಣ್ಣಿಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)