ಶ್ರೇಷ್ಠ ನಗರಪಾಲಿಕೆ ಪ್ರಶಸ್ತಿ: ಮೇಯರ್ ಹರ್ಷ

7

ಶ್ರೇಷ್ಠ ನಗರಪಾಲಿಕೆ ಪ್ರಶಸ್ತಿ: ಮೇಯರ್ ಹರ್ಷ

Published:
Updated:

ಮೈಸೂರು: ‘ರಾಜ್ಯ ಸರ್ಕಾರವು ಮೈಸೂರು ಮಹಾನಗರ ಪಾಲಿಕೆಯ ಕಾರ್ಯ ವೈಖರಿಯನ್ನು ಗುರುತಿಸಿ ಅತ್ಯುತ್ತಮ ಸ್ಥಳೀಯ ಸಂಸ್ಥೆ ಪ್ರಶಸ್ತಿಯನ್ನು ನೀಡಿರುವುದು ಸಂತಸ ತಂದಿದೆ’ ಎಂದು ಮೇಯರ್ ಸಂದೇಶ್‌ಸ್ವಾಮಿ ಹರ್ಷ ವ್ಯಕ್ತಪಡಿಸಿದರು. ‘ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯ ಬೆಂಗಳೂರಿನಲ್ಲಿ ಫೆ.1ರ ಮಂಗಳವಾರ ಏರ್ಪಡಿಸಿದ್ದ ಮುನಿಸಿಪಾಲಿಕಾ ಸಮಾವೇಶದಲ್ಲಿ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಪ್ರಶಸ್ತಿ ಪತ್ರವನ್ನು ನೀಡಿದ್ದಾರೆ. ಪ್ರಶಸ್ತಿಯು ರೂ.10 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು  ಒಳಗೊಂಡಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಉತ್ತಮ ಸ್ಥಳೀಯ ಸಂಸ್ಥೆಗಳ ಆಯ್ಕೆ ಪ್ರಕ್ರಿಯೆಯಲ್ಲಿ 168 ಸ್ಥಳೀಯ ಸಂಸ್ಥೆಗಳು ಭಾಗವಹಿಸಿದ್ದವು. ಎಲ್ಲ ಸಂಸ್ಥೆಗಳ ಕಾರ್ಯನಿರ್ವಹಣಾ ವರದಿಯನ್ನು ಕ್ರೋಢೀಕರಿಸಿ ಆಯ್ಕೆ ಮಾಡುವ ಹೊಣೆಯನ್ನು ಸರ್ಕಾರವು  ಸೀ ಮ್ಯಾಕ್ ಸಂಸ್ಥೆಗೆ ವಹಿಸಿತ್ತು. ಒಟ್ಟು 42 ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ’ ಎಂದು ಹೇಳಿದರು. ‘ಕುಡಿಯುವ ನೀರು, ಒಳಚರಂಡಿ, ಬೀದಿ ದೀಪ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ರಸ್ತೆ, ಕಾಲುವೆ ಮತ್ತು  ಸೇತುವೆಗಳ ನಿರ್ವಹಣೆ ಹಾಗೂ ಉದ್ಯಾನವನ ನಿರ್ವಹಣೆಗೆ ಸಂಬಂಧಿಸಿದ 6 ಅಂಶಗಳನ್ನು ಪರಿಗಣಿಸಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಮತ್ತೊಂದು ಪ್ರಶಸ್ತಿಯನ್ನು ಪಾಲಿಕೆ ಪಡೆದುಕೊಂಡಿದೆ. ಈ ಪ್ರಶಸ್ತಿಯು ರೂ.3 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ’ ಎಂದರು.‘ಮುನಿಸಿಪಾಲಿಕಾ ಸಮ್ಮೇಳನದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನದಲ್ಲಿ ಪಾಲಿಕೆ  ನಿರ್ಮಿಸಿದ್ದ ಮಳಿಗೆ ಹಾಗೂ ಪ್ರಸ್ತುತ ಪಡಿಸಿದ ಪ್ರಾತ್ಯಕ್ಷಿಕೆಗೆ ಅತ್ಯುತ್ತಮ ಮಳಿಗೆ ಎಂಬ ಬಹುಮಾನ ಬಂದಿದೆ’ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಆಯುಕ್ತ ಕೆ.ಎಸ್.ರಾಯ್ಕರ್, ಉಪ ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ಆರ್.ಲಿಂಗಪ್ಪ, ಶ್ರೀಕಂಠಯ್ಯ, ಕೆ.ವಿ.ಮಲ್ಲೇಶ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry