ಶನಿವಾರ, ಮೇ 21, 2022
25 °C

ಶ್ವೇತಭವನದ ಪತ್ರಕರ್ತೆ ಹೆಲೆನ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕ ಪತ್ರಿಕಾರಂಗದ ದಂತಕಥೆಯಾಗಿದ್ದ ಹಿರಿಯ ಪತ್ರಕರ್ತೆ ಹೆಲೆನ್ ಥಾಮಸ್ ಶನಿವಾರ ನಿಧನರಾಗಿದ್ದಾರೆ.ಅವರಿಗೆ 92 ವರ್ಷ ವಯಸ್ಸಾಗಿತ್ತು. ಶ್ವೇತಭವನದಲ್ಲಿ ಸದಾ ಮುಂದಿನ ಸಾಲಿನಲ್ಲೇ ಗಮನ ಸೆಳೆಯುತ್ತಿದ್ದ ಹೆಲೆನ್ ಸುಮಾರು ಅರ್ಧ ಶತಮಾನಗಳ ಅವಧಿಯಲ್ಲಿ ಅಮೆರಿಕದ ಹತ್ತು ಅಧ್ಯಕ್ಷರ ಕಾರ್ಯಕ್ರಮಗಳನ್ನು ವರದಿ ಮಾಡಿದ್ದರು.ಶ್ವೇತಭವನದ ಸುದ್ದಿಗೋಷ್ಠಿಗಳನ್ನು ಅವರು ತಪ್ಪಿಸಿಕೊಂಡಿದ್ದ ನಿದರ್ಶನಗಳೇ ಇಲ್ಲ. ಪ್ರಶ್ನೆಗಳ ಬಾಣದಿಂದ ಸರ್ಕಾರಿ ವಕ್ತಾರರನ್ನು ತಿವಿಯುವುದರಲ್ಲಿ  ಅವರು ನಿಸ್ಸೀಮರಾಗಿದ್ದರು.ಒಬಾಮ ಸಂತಾಪ: ಹೆಲೆನ್ ನಿಧನಕ್ಕೆ ಅಧ್ಯಕ್ಷ ಬರಾಕ್ ಒಬಾಮ ಸಂತಾಪ ಸೂಚಿಸಿದ್ದಾರೆ.`ಹೆಲೆನ್ ಅವರು ಪತ್ರಕರ್ತೆಯರಿಗೆ ಮಾದರಿ. ಪತ್ರಿಕಾರಂಗ ಮಹಿಳೆಯರಿಗೆ ಹೇಳಿ ಮಾಡಿಸಿದ್ದಲ್ಲ ಎಂಬ ಮಿಥ್ಯೆಯನ್ನು ಮುರಿದ ಹೆಗ್ಗಳಿಕೆ ಅವರದ್ದು' ಎಂದು ಒಬಾಮ ಹೇಳಿದ್ದಾರೆ. `ಕೆನಡಿ ಅಧ್ಯಕ್ಷರಾಗಿದ್ದ ಕಾಲದಿಂದಲೂ ಅವರು ಶ್ವೇತಭವನದ ಪ್ರತಿಯೊಂದು ಕಾರ್ಯಕ್ರಮವನ್ನೂ ವರದಿ ಮಾಡುತ್ತಿದ್ದರು' ಎಂದು  ಹೆಲೆನ್ ವೃತ್ತಿನಿಷ್ಠೆಯನ್ನು  ಶ್ಲಾಘಿಸಿದ್ದಾರೆ.ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಅವರ ಪತ್ನಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಕೂಡ ಹೆಲೆನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ನೀತಿಗಳನ್ನು ಕಟುವಾಗಿ  ಟೀಕಿಸುತ್ತಿದ್ದ ಹೆಲೆನ್, `ಅಮೆರಿಕ ಕಂಡ ಪರಮ ನೀಚ ಅಧ್ಯಕ್ಷ ಬುಷ್' ಎಂದಿದ್ದರು.` ಅಮೆರಿಕದ ಮೇಲೆ ಉಗ್ರರ ದಾಳಿ ಸನ್ನಿಹಿತವಾಗುತ್ತಿದೆ ಎಂದು 9/11ರ ದಾಳಿಗೆ ಮುನ್ನ ಬುಷ್ ಆಡಳಿತದ ಅಧಿಕಾರಿಗಳಿಗೆ ಮಹತ್ವದ ಸೂಚನೆ ಸಿಕ್ಕಿತ್ತು. ಆದರೆ ಅಧಿಕಾರಿಗಳು ಅದನ್ನು ಕಡೆಗಣಿಸಿದ್ದರು' ಎಂದು ಹೆಲೆನ್ ಬರೆದಿದ್ದು ಅಮೆರಿಕದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.ಲೆಬನಾನ್ ವಲಸಿಗ ದಂಪತಿಯ ಮಗಳಾಗಿ ಹುಟ್ಟಿದ ಹೆಲೆನ್, 2010ರಲ್ಲಿ ಯಹೂದಿ ಜನರ ಬಗ್ಗೆ ಮಾಡಿದ ಟೀಕೆಯಿಂದ ತೀವ್ರ ವಿವಾದಕ್ಕೂ ಒಳಗಾಗಿದ್ದರು.ಇದಕ್ಕಾಗಿ ಅವರು ಕ್ಷಮೆ ಕೇಳಬೇಕಾಯಿತು. ಇದಾದ ಒಂದು ವಾರದ ಬಳಿಕ ಅವರು ನಿವೃತ್ತಿ ಘೋಷಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.