ಮಂಗಳವಾರ, ಮೇ 11, 2021
24 °C

ಶ್ವೇತವಸ್ತ್ರಧಾರಿಗಳ ಮೊಗದಲ್ಲಿ ಚಿನ್ನದ ಸಂಭ್ರಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸೂರ್ಯ ಅದೇಕೋ ದಿನಕ್ಕಿಂತಲೂ ಕೊಂಚ ಹೆಚ್ಚೇ ಕೋಪಿಸಿಕೊಂಡಿದ್ದ! ಹೀಗಾಗಿ `ಶ್ವೇತವಸ್ತ್ರ~ಧಾರಿಗಳು ಅಕ್ಷರಶಃ ಬಸವಳಿದಿದ್ದರು. ಆದಾಗ್ಯೂ, ಎಲ್ಲರ ಮುಖದಲ್ಲೂ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ `ಶ್ವೇತವಸ್ತ್ರ~ಧಾರಿಗಳ ದಂಡೇ ಎದ್ದು ಕಾಣುತ್ತಿತ್ತು.-ಇವು ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಶನಿವಾರ ನಡೆದ 92ನೇ ಘಟಿಕೋತ್ಸವದಲ್ಲಿ ಕಂಡು ಬಂದ ದೃಶ್ಯಗಳು. ಚಿನ್ನದ ಪದಕ, ನಗದು ಬಹುಮಾನ ಹಾಗೂ ಪಿಎಚ್‌ಡಿ ಪದವಿ ಪಡೆಯಲು ಆಗಮಿಸಿದ್ದ ಅಭ್ಯರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.ಬಂಧು-ಬಾಂಧವರು, ಸ್ನೇಹಿತರು, ಹಿತೈಷಿಗಳೊಂದಿಗೆ ಕ್ರಾಫರ್ಡ್ ಭವನಕ್ಕೆ ಪದವಿ ಸ್ವೀಕರಿಸಲು ಬಂದಿದ್ದ ವಿದ್ಯಾರ್ಥಿಗಳು ಬಿಳಿ ಬಣ್ಣದ ಖಾದಿ ಬಟ್ಟೆಯಲ್ಲಿ ಗಮನ ಸೆಳೆದರು. ಪದಕಗಳನ್ನು ಮುಡಿಗೇರಿಕೊಂಡು ಫೋಟೋಗೆ ಪೋಸ್ ನೀಡಿ ಸಂಭ್ರಮಿಸಿದರು. ಆ ಮೂಲಕ ತಂದೆ-ತಾಯಿಗಳ ಕನಸನ್ನು ಸಾರ್ಥಕಗೊಳಿಸಿದರು.

`ಚಿನ್ನದ ಹುಡುಗಿ~ ಜೆ.ಮಾನಸಎಂ.ಎಸ್ಸಿ ರಸಾಯನಶಾಸ್ತ್ರ ವಿಭಾಗದ ಜೆ.ಮಾನಸ ಬರೋಬ್ಬರಿ 12 ಚಿನ್ನದ ಪದಕ ಹಾಗೂ 3 ನಗದು ಬಹುಮಾನ (ಒಟ್ಟು 15) ತಮ್ಮದಾಗಿಸಿಕೊಳ್ಳುವ ಮೂಲಕ `ಚಿನ್ನದ ಹುಡುಗಿ~ಯಾಗಿ ಹೊರಹೊಮ್ಮಿದರು. ಎಂ.ಎ ಜೈನಾಲಾಜಿ ಮತ್ತು ಪ್ರಾಕೃತ ವಿಭಾಗದ ಹೊಟಪೇಟಿ ಜೀವಂಧಾರ್ ಕುಮಾರ್ ಕುಬೇರಪ್ಪ 8 ಚಿನ್ನದ ಪದಕ ಪಡೆದು ಚಿನ್ನದ ವಿದ್ಯಾರ್ಥಿಯಾಗಿ ಗಮನ ಸೆಳೆದರು.ಸುಗುಣ ಸರವಣನ್ 7 ಚಿನ್ನದ ಪದಕ, 1 ಬಹುಮಾನ (ಎಂ.ಎ ಪತ್ರಿಕೋದ್ಯಮ), ಎಸ್.ಪ್ರವೀಣ್‌ಕುಮಾರ್ (ಎಂ.ಎ ಕನ್ನಡ) 7 ಚಿನ್ನದ ಪದಕ, 1 ಬಹುಮಾನ ಪಡೆದರು.ಉದ್ಯೋಗಾವಕಾಶ ಕಲ್ಪಿಸಬೇಕು

ಕನ್ನಡ ವಿಷಯದಲ್ಲಿ ಏಳು ಪದಕ ಬಂದಿರುವುದು ಸಹಜವಾಗಿ ಖುಷಿ ತಂದಿದೆ. ಬಡತನವೇ ಓದಿಗೆ ಪ್ರೇರಣೆ. ಅಣ್ಣ ಆಟೋ ಓಡಿಸಿ ನನ್ನನ್ನು ಓದಿಸಿದರು. ಸದ್ಯ ಪಿಎಚ್‌ಡಿ ಮಾಡುತ್ತಿದ್ದೇನೆ. ಸರ್ಕಾರ ಕನ್ನಡ, ಕನ್ನಡ ಎನ್ನುತ್ತಾ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಅದರ ಬದಲು ಕನ್ನಡದಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕನ್ನಡ ಮಾಧ್ಯಮದಲ್ಲಿ ಓದುವುದರಿಂದ `ಕೆಲಸ ಖಚಿತ~ ಎಂಬ ವಾತಾವರಣ ನಿರ್ಮಿಸಬೇಕು.

 -ಎಸ್.ಪ್ರವೀಣ್‌ಕುಮಾರ್, ಎಂ.ಎ ಕನ್ನಡನೀರು ಬೇಕು ನೀರು..!

ಕ್ರಾಫರ್ಡ್ ಭವನದಲ್ಲಿ ಸ್ಥಳಾವಕಾಶವಿರುವುದು 1700 ಮಂದಿಗೆ ಮಾತ್ರ. ಆದರೆ, ಪದಕ ಹಾಗೂ ಬಹುಮಾನ ವಿಜೇತ ಅಭ್ಯರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಎಲ್ಲರಿಗೂ ಪ್ರವೇಶ ನೀಡಲಾಗಿತ್ತು. ವಿವಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತಾದರೂ, ಬಹುತೇಕರು `ನೀರು ನೀರು ಬೇಕು~ ಎಂದು ಪರದಾಡಿದರು. ಆಚೆ ಹೋಗಿ ತರಬೇಕು ಎಂದರೆ ಪೊಲೀಸರು ಮತ್ತೆ ಒಳಗೆ ಬಿಡುವುದಿಲ್ಲ ಎಂಬ ಭಯ!ಎಲ್‌ಸಿಡಿ ಪರದೆ

ಕ್ರಾಫರ್ಡ್ ಭವನದ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ ಶಾಮಿಯಾನ ಹಾಕಿ 500 ಮಂದಿಗೆ ಕೂರಲು ಸ್ಥಳಾವಕಾಶ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು ಎಂಬ ನಿರೀಕ್ಷೆಯಿಂದ ವಿವಿ ಈ ವ್ಯವಸ್ಥೆ ಮಾಡಿತ್ತು. ಅಲ್ಲದೆ ಎಲ್‌ಸಿಡಿ ಪರದೆಯನ್ನು ಅಳವಡಿಸಿತ್ತು. ಕ್ರಾಫರ್ಡ್ ಭವನದ ಆವರಣದಲ್ಲೂ ಎಲ್‌ಸಿಡಿ ಪರದೆ ಅಳವಡಿಸಲಾಗಿತ್ತು.ಕ್ಲಿಕ್ ಕ್ಲಿಕ್

ಚಿನ್ನದ ಪದಕ, ನಗದು ಬಹುಮಾನ ಹಾಗೂ ಪಿಎಚ್‌ಡಿ ಪದವಿ ಪಡೆಯುವ ಅಭ್ಯರ್ಥಿಗಳಿಗೆ ವಿವಿ ಈ ಬಾರಿ ಖಾದಿ ಬಟ್ಟೆ ಧರಿಸುವಂತೆ ಸೂಚಿಸಿತ್ತು. ಅದರಂತೆ ಎಲ್ಲರೂ `ಶ್ವೇತಧಾರಿ~ಗಳಾಗಿಯೇ ಆಗಮಿಸಿದ್ದರು. ಆದರೆ, ಕ್ರಾಫರ್ಡ್ ಭವನದ ಮುಂಭಾಗ ಮಾತ್ರ ಕೆಲ ಛಾಯಾಚಿತ್ರಗಾರರು ತಾವೇ ಹಳೆ ಮಾದರಿ ಕಪ್ಪುಗೌನ್ ಕೊಟ್ಟು ಫೋಟೋ ಕ್ಲಿಕ್ಕಿಸುವಲ್ಲಿ ನಿರತರಾಗಿದ್ದರು.ಸಿಎಂ ಸ್ವಾಗತಿಸಿದ ಫ್ಲೆಕ್ಸ್!

ಪಾರಂಪರಿಕ ನಗರಿ ಮೈಸೂರಿನಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಪಾಲಿಕೆ ನಿಷೇಧಿಸಿದೆ. ಆದರೆ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಮೈಸೂರು ವಿಶ್ವವಿದ್ಯಾ ನಿಲಯದ 92ನೇ ಘಟಿಕೋತ್ಸವಕ್ಕೆ ಸ್ವಾಗತಿಸಲು ಕ್ರಾಫರ್ಡ್ ಭವನದ ಎದುರೇ ಫ್ಲೆಕ್ಸ್ ಅಳವಡಿಸಲಾಗಿತ್ತು! `ವಿಶ್ವವಿದ್ಯಾನಿಲಯದ ಅಧ್ಯಾಪಕೇತರ ಉದ್ಯೋಗಿಗಳ ಪರವಾಗಿ ಆದರದ ಸುಸ್ವಾಗತ~ ಎಂಬ ಕಟೌಟ್ ಕೆಲಹೊತ್ತು ಚರ್ಚೆಗೆ ಕಾರಣವಾಯಿತು.

ಶ್ರೀಲಂಕಾ ವಿದ್ಯಾರ್ಥಿನಿಯರ ಘಟಿಕೋತ್ಸವ ಸಂಭ್ರಮ

ಮೈಸೂರು: ನೆರೆಯ ರಾಷ್ಟ್ರವಾದ ಶ್ರೀಲಂಕಾದಿಂದ 12 ವಿದ್ಯಾರ್ಥಿನಿಯರು ಮೈಸೂರಿಗೆ ಆಗಮಿಸಿ ಕ್ರಾಫರ್ಡ್ ಭವನದಲ್ಲಿ ಶನಿವಾರ ನಡೆದ 92ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು!ಶ್ರೀಲಂಕಾದ ಕೊಲಂಬೋದಲ್ಲಿ ಮೈಸೂರು ವಿವಿ ಆರಂಭಿಸಿರುವ `ಔಟ್‌ರೀಚ್ ಕ್ಯಾಂಪಸ್~ನಿಂದ ಆಗಮಿಸಿದ್ದ ವಿದ್ಯಾರ್ಥಿನಿಯರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಕಾರಣ ಇವರೆಲ್ಲರೂ ಬಿ.ಎಸ್ಸಿ ಬಯೋಟೆಕ್ನಾಲಜಿ ಪದವಿ ಪಡೆದವರು.-ಹೌದು. ಮೊದಲ ಬ್ಯಾಚಿನ ವಿದ್ಯಾರ್ಥಿನಿಯರಾದ ಇವರು ಬಿ.ಎಸ್ಸಿ ಬಯೋಟೆಕ್ನಾಲಜಿ ಪದವಿ ಪಡೆದಿದ್ದಾರೆ. ಮೈಸೂರು ವಿವಿ ಪ್ರಾಧ್ಯಾಪಕರೇ ಶ್ರೀಲಂಕಾಕ್ಕೆ ಭೇಟಿ ನೀಡಿ ಇವರೆಲ್ಲರಿಗೂ ಪಾಠ ಮಾಡಿರುವುದು ವಿಶೇಷ. ಜೊತೆಗೆ ಅಲ್ಲಿನ ಉಪನ್ಯಾಸಕರೂ ಬೋಧನೆ ಮಾಡಿದ್ದಾರೆ. ಇದಕ್ಕೆ ವೇದಿಕೆ ಒದಗಿಸಿದ್ದು ಕೊಲಂಬೋದ `ಸ್ಪೆಕ್ಟ್ರಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ~ ಸಂಸ್ಥೆ. ಸದ್ಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.ಈ ಕುರಿತು ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಜಯಂಥನ್ ಕುಲಾಸಿಂಗಂ, `ಶ್ರೀಲಂಕಾದಲ್ಲಿ ಬಿ.ಎಸ್ಸಿ ಬಯೋಟೆಕ್ನಾಲಜಿ ಪದವಿಯನ್ನು ಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಮೈಸೂರು ವಿವಿಗೆ ಸಲ್ಲುತ್ತದೆ. ಉತ್ತಮ ಗುಣಮಟ್ಟದ ಶಿಕ್ಷಣ, ಕಡಿಮೆ ಪ್ರವೇಶ ಶುಲ್ಕ ಹಾಗೂ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ವಿವಿಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಓದುತ್ತಿರುವುದು ಹೆಮ್ಮೆಯ ವಿಷಯ. ಶ್ರೀಲಂಕಾದಲ್ಲೂ ಕ್ರಾಫರ್ಡ್ ಭವನ ಮಾದರಿಯಲ್ಲಿ ಕಾಲೇಜು ಆರಂಭಿಸಬೇಕು ಎಂಬ ಚಿಂತನೆ ನಡೆದಿದೆ. ಯುರೋಪ್, ಆಸ್ಟ್ರೇಲಿಯಾ, ಲಂಡನ್ ವಿವಿಗಳಿಗಿಂತಲೂ ಮೈಸೂರು ವಿವಿಯೇ ಉತ್ತಮವಾಗಿದೆ. ಮುಂಬರುವ ವರ್ಷಗಳಲ್ಲಿ ಕಂಪ್ಯೂಟರ್ ವಿಜ್ಞಾನ, ಮನಃಶಾಸ್ತ್ರ, ಪತ್ರಿಕೋದ್ಯಮ, ಇಂಗ್ಲಿಷ್ ಸಾಹಿತ್ಯ ಕೋರ್ಸುಗಳನ್ನು ಆರಂಭಿಸುತ್ತಿದ್ದೇವೆ~ ಎಂದು `ಪ್ರಜಾವಾಣಿ~ಗೆ ತಿಳಿಸಿದರು.ನೂತನ ವಿದ್ಯಾರ್ಥಿ ನಿಲಯ ಉದ್ಘಾಟನೆ

ಮೈಸೂರು: ಮೈಸೂರು ವಿವಿ ಮಾನಸಗಂಗೋತ್ರಿ ಆವರಣ ದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಜೀವವೈವಿಧ್ಯ, ಜೈವಿಕ ಅನ್ವೇಷಣೆ ಮತ್ತು ಸಮರ್ಥನೀಯ ಅಭಿವೃದ್ಧಿ ಉತ್ಕೃಷ್ಟ ಕೇಂದ್ರದ ಕಟ್ಟಡ ಕಾಮಗಾರಿಗೆ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವೆ ಡಿ.ಪುರಂದೇಶ್ವರಿ, ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶನಿವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸ್ನಾತಕಪೂರ್ವ ಪುರುಷ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿದರು.ಭಾರತ ಸರ್ಕಾರ ಮೈಸೂರು ವಿವಿಯನ್ನು ಉತ್ಕೃಷ್ಟ ಕೇಂದ್ರ (ಇನ್‌ಸ್ಟಿಟ್ಯೂಷನ್ ಆಫ್ ಎಕ್ಸಲೆನ್ಸ್) ಎಂದು ಗುರುತಿಸಿ 2009-10ನೇ ಸಾಲಿನ ಬಜೆಟ್‌ನಲ್ಲಿ (11ನೇ ಹಣಕಾಸು ಯೋಜನೆ) ರೂ. 100 ಕೋಟಿ ಅನುದಾನ ಮಂಜೂರು ಮಾಡಿದೆ.ಜೀವವೈವಿಧ್ಯ, ಜೈವಿಕ ಅನ್ವೇಷಣೆ ಮತ್ತು ಸಮರ್ಥ ನೀಯ ಅಭಿವೃದ್ಧಿ ಕೇಂದ್ರಕ್ಕೆ ರೂ. 50.37 ಕೋಟಿ ಹಾಗೂ ಬೋಧನಾ ಮತ್ತು ಕಲಿಕಾ ಮೂಲಸೌಕರ್ಯ ಬಲಪಡಿ ಸಲು ರೂ. 49.63 ಕೋಟಿ ಅನುದಾನ ನೀಡಿದೆ.ಜೀವವೈವಿಧ್ಯ, ಜೈವಿಕ ಅನ್ವೇಷಣೆ ಮತ್ತು ಸಮರ್ಥ ನೀಯ ಅಭಿವೃದ್ಧಿ ಉತ್ಕೃಷ್ಟ ಕೇಂದ್ರದ ಅಡಿಯಲ್ಲಿ ರೂ. 10.25 ಕೋಟಿ ಅಂದಾಜು ವೆಚ್ಚದಲ್ಲಿ ಸುಸಜ್ಜಿತವಾದ ಸಂಶೋಧನಾ ಪ್ರಯೋಗಾಲಯ, ಆಡಳಿತ ಮತ್ತು ಬೋಧನಾ ವಿಭಾಗ, ಸಂಶೋಧಕರ ಕೊಠಡಿ ಮತ್ತು ಸಭಾಂಗಣ ಒಳಗೊಂಡ 7460 ಚ.ಮೀ ಅಳತೆ ವಿಸ್ತೀರ್ಣದ ಕಟ್ಟಡ ಸಂಕೀರ್ಣ ನಿರ್ಮಿಸಲಾಗುತ್ತಿದೆ.ನೆಲಮಹಡಿ: ಈ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ, ಜೀವರಸಾಯನಶಾಸ್ತ್ರ, ಜನಪದ ಅಧ್ಯಯನ, ಮಾನವ ವಿಜ್ಞಾನ ವಿಭಾಗ, ಆಹಾರ ವಿಜ್ಞಾನ ಮತ್ತು ಪೌಷ್ಟಿಕ ಅಧ್ಯಯನ ಶಾಸ್ತ್ರ, ರೇಷ್ಮೆ ಅಧ್ಯಯನ, ಪರಿಸರ ಅಧ್ಯಯನ, ಜೀವಸೂಕ್ಷ್ಮಾಣುಶಾಸ್ತ್ರ ಅಧ್ಯಯನ, ಭೂವಿಜ್ಞಾನ, ಅರ್ಥಶಾಸ್ತ್ರ, ಸಹಕಾರ, ರಾಜ್ಯಶಾಸ್ತ್ರ ಮತ್ತು ಸಮಾಜವಿಜ್ಞಾನ ವಿಷಯಗಳ 16 ಸಂಶೋಧನಾಲಯ ನಿರ್ಮಿಸಲಾಗುತ್ತಿದೆ.ಮೊದಲ ಅಂತಸ್ತು: ಈ ವಿಭಾಗದಲ್ಲಿ ಮುಖ್ಯ ಪ್ರವೇಶ ದ್ವಾರ, 4 ಬೋಧನಾ ಕೊಠಡಿ, ಪ್ರಾಧ್ಯಾಪಕರ ಕೊಠಡಿ, ಬೋರ್ಡ್ ರೂಮ್, ಸಭಾಂಗಣ, ಕಚೇರಿ, ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ ನಿರ್ಮಿಸಲಾಗುತ್ತಿದೆ.

ಎರಡನೇ ಅಂತಸ್ತು: ಈ ವಿಭಾಗದಲ್ಲಿ 216 ಆಸನಗಳನ್ನು ಒಳಗೊಂಡ ಸುಸಜ್ಜಿತ ಸಭಾಂಗಣ, 8 ಸಂಶೋಧಕರ ಕೊಠಡಿ ನಿರ್ಮಿಸಲಾಗುತ್ತಿದೆ.ವಿದ್ಯಾರ್ಥಿ ನಿಲಯ: ಮಹಾರಾಜ ಕಾಲೇಜು ವಿದ್ಯಾರ್ಥಿ ನಿಲಯದ ಆವರಣದಲ್ಲಿ ರೂ. 3.80 ಕೋಟಿ ವೆಚ್ಚದಲ್ಲಿ ನೂತನ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದೆ. ಒಟ್ಟು 46 ಕೊಠಡಿಗಳಿದ್ದು, 276 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.