ಶ್ವೇತಾ ಆಹಾರ ತತ್ವ

7

ಶ್ವೇತಾ ಆಹಾರ ತತ್ವ

Published:
Updated:

ಗಗನಸಖಿಯಾಗಿ ಆಕಾಶದಲ್ಲಿ ಹಾರಾಡಿದವರು ಶ್ವೇತಾ ಸಂಜೀವ್. ಬಣ್ಣದ ಲೋಕದಲ್ಲಿ ಸುತ್ತುವಾಸೆಯಿಂದ ಈಗ ಧರೆಗಿಳಿದು ಬಂದಿದ್ದಾರೆ. ಗಗನಸಖಿಯರಿಗೆ ಅರ್ಹವಾದ ಮೈಕಟ್ಟನ್ನು ಹೊಂದಿರುವ ಅವರು ಮಾಡೆಲಿಂಗ್ ಲೋಕದ ಪರಿಚಯ ಇರುವವರು.


 

ತಮ್ಮ ಮೈಕಟ್ಟು ನಿರ್ವಹಣೆ ಬಗ್ಗೆ ಕಾಳಜಿಯಿಂದ ಮಾತನಾಡುವ ಅವರಿಗೆ ಇದುವರೆಗೆ ಅದು ಕಷ್ಟ ಎನಿಸಿಲ್ಲ. ತಿನ್ನಬಾರದು ಎನಿಸಿದ್ದನ್ನು ತಿನ್ನದೇ ಉಳಿಯುವ ಅಭ್ಯಾಸ ಅವರಿಗೆ ರೂಢಿಯಾಗಿದೆ. ಹಾಗೆಂದು ಅತಿಯಾಗಿ ಮನಸ್ಸನ್ನು ನಿಯಂತ್ರಿಸಿ ಒತ್ತಡ ಅನುಭವಿಸಲೂ ಅವರ ಮನ ಒಪ್ಪದು. ಅದರಿಂದ ಮಿತವಾಗಿ ತಿನ್ನುವ ಅವರಿಗೆ ನಟಿಯಾದ ಮೇಲೆ ಮೈಕಟ್ಟು ನಿರ್ವಹಣೆ ಅತ್ಯಗತ್ಯ ಎಂಬುದು ಮನವರಿಕೆಯಾಗಿದೆ. 

 

ಊಟದ ವಿಚಾರವಾಗಿ ಮಾತಿಗೆ ಎಳೆದರೆ, `ನನಗೆ ಚಿಕನ್ ಅಂದ್ರೆ ತುಂಬಾ ಇಷ್ಟ. ಸಣ್ಣವಳಿರುವಾಗ ಒಮ್ಮೆ ಚಿಕನ್ ತರಲು ಅಂಗಡಿಗೆ ಹೋಗಿದ್ದೆ. ಅಲ್ಲಿ ಚಿಕನ್ ಕತ್ತರಿಸುವುದು, ಆ ಕೋಳಿ ಕೂಗಿಕೊಳ್ಳುವುದು, ರಕ್ತದ ದೃಶ್ಯಗಳನ್ನು ಕಂಡು ಪ್ರಾಣಿಗಳನ್ನು ತಿನ್ನುವುದು ಪಾಪ ಎನಿಸಿತು. ಅಲ್ಲಿಂದ ಆಚೆಗೆ ನಾನು ಸಸ್ಯಾಹಾರಿಯಾದೆ' ಎಂದು ಬಾಲ್ಯದ ನೆನಪನ್ನು ಹೆಕ್ಕುತ್ತಾರೆ ಶ್ವೇತಾ.

 

ಇನ್ನು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನದ ಅವರು ಕೊಬ್ಬಿನ ಅಂಶ ಇರುವ ಆಹಾರದಿಂದ ಮಾರುದೂರ. `ಜಂಕ್‌ಫುಡ್, ಕೇಕ್, ಚಾಕೊಲೇಟ್, ಚಿಪ್ಸ್ ಎಂದರೆ ತುಂಬಾ ಇಷ್ಟ. ಅದರಲ್ಲೂ ಚಾಕೊಲೇಟ್ ಎಂದರೆ ಪಂಚಪ್ರಾಣ. ಆದರೆ ಅದನ್ನು ತಿಂದರೆ ತೆರೆಯ ಮೇಲೆ ಚೆಂದ ಕಾಣುವುದಿಲ್ಲ ಎನಿಸಿ ಬಿಟ್ಟಿದ್ದೇನೆ' ಎಂದು ನಗುತ್ತಾರೆ.

 

ಶ್ರಾವಣ ಮಾಸದಲ್ಲಿ ಒಂದು ಹೊತ್ತು ಊಟ ಬಿಡುವ ಪದ್ಧತಿಯನ್ನು ರೂಢಿಸಿಕೊಂಡಿರುವ ಶ್ವೇತಾ, `ಉಪವಾಸ ಮಾಡುವುದು ದೇಹದಲ್ಲಿ ಇರುವ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ. ನಾನು ಶ್ರಾವಣ ಮಾಸದ ಉಪವಾಸವನ್ನು ಭಕ್ತಿಗಾಗಿ ಮತ್ತು ಮೈಕಟ್ಟು ನಿರ್ವಹಣೆಗಾಗಿ ಮಾಡುವೆ' ಎನ್ನುತ್ತಾರೆ.

 

5.6 ಅಡಿ ಎತ್ತರ ಇರುವ ಶ್ವೇತಾ ಆಂಧ್ರ ಮೂಲದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಅವರು ವಾಲಿಬಾಲ್, ಥ್ರೋಬಾಲ್ ಆಟಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅದರಿಂದಲೇ ಇರಬೇಕು ಅವರ ಮೈಕಟ್ಟು ಹೀಗಿರುವುದು. ಚಿತ್ರರಂಗಕ್ಕೆ ಬಂದಮೇಲೆ ಕೊಂಚ ಹೆಚ್ಚು ದೇಹದ ಕಡೆ ನಿಗಾ ವಹಿಸಿರುವ ಅವರು ನಿಯಮಿತ ವ್ಯಾಯಾಮಕ್ಕೆ ಅಂಟಿಕೊಂಡಿದ್ದಾರೆ.

 

`ವಾರಕ್ಕೆ ಮೂರು ಬಾರಿ ಜಿಮ್‌ಗೆ ಹೋಗ್ತೀನಿ. ಪ್ರತಿದಿನ ಥ್ರೆಡ್‌ಮಿಲ್ ಮೇಲೆ ಅರ್ಧಗಂಟೆ ಓಡ್ತೀನಿ. ಕೊಂಚ ವ್ಯಾಯಾಮ ಮಾಡ್ತೀನಿ' ಎನ್ನುವ ಶ್ವೇತಾ, ದೇಹವನ್ನು ಸದಾ ಗಮನಿಸುತ್ತಿರುತ್ತಾರಂತೆ. ಅದರಿಂದ ಊಟ ಮತ್ತು ವ್ಯಾಯಾಮದಲ್ಲಿ ಸಮತೋಲನ ಕಂಡುಕೊಳ್ಳುವುದು ಸಾಧ್ಯವಂತೆ.

 

ಅವರು ನಟಿಸಿದ ಮೊದಲ ಸಿನಿಮಾ `ಸೂಪರ್'. ಇದೀಗ `ಕೇಡಿಗಳು' ಚಿತ್ರದಲ್ಲಿ ನಾಯಕಿಯಾಗಿರುವ ಅವರು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇದರ ನಡುವೆ ತೆಲುಗು ಚಿತ್ರವೊಂದರಲ್ಲೂ ನಟಿಸಿ ಬಂದಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry