ಶನಿವಾರ, ಮಾರ್ಚ್ 6, 2021
20 °C

ಶ್‌! ಸುಮಂತ್‌ ಹೇಳಿಕೊಡ್ತಾರೆ ‘ವುಶು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್‌! ಸುಮಂತ್‌ ಹೇಳಿಕೊಡ್ತಾರೆ ‘ವುಶು’

‘ಲೀ’ ಚಿತ್ರದಲ್ಲಿ ಸುಮಂತ್‌ ಅವರದು ಸಾಹಸ ಕಲೆ ಹೇಳಿಕೊಡುವ ತರಬೇತುದಾರನ ಪಾತ್ರ. ಅವರ ಪಾತ್ರಕ್ಕೆ ಪ್ರೇಮಿ ಹಾಗೂ ಮಾನಸಿಕ ಅಸ್ವಸ್ಥನ ಛಾಯೆಯೂ ಇದೆಯಂತೆ.ಪ್ರೇಮಿಯಾಗಿಯೇ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಸುಮಂತ್ ‘ಬೆತ್ತನಗೆರೆ’ಯಲ್ಲಿ ರೌಡಿ ಆದರು. ಆ ಮೂಲಕ ಆ್ಯಕ್ಷನ್ ಹೀರೊ ಇಮೇಜ್‌ಗೆ ಪಾತ್ರರಾಗಿದ್ದ ಅವರು ಮತ್ತೊಮ್ಮೆ ಹೊಡೆದಾಟದ ಪಾತ್ರಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಆ್ಯಕ್ಷನ್ ಜೋರಾಗಿರಲಿದೆ. ಆ್ಯಕ್ಷನ್ ಹೊರತಾಗಿ ಇನ್ನೂ ಎರಡು ಶೇಡ್‌ಗಳಲ್ಲಿ ಮಿಂಚಲಿದ್ದಾರೆ. ಚಿತ್ರಕ್ಕೆ ‘ಲೀ’ ಎಂದು ನಾಮಕರಣ ಮಾಡಲಾಗಿದೆ.ಎಚ್.ಎಂ. ಶ್ರೀನಂದನ್‌ ನಿರ್ದೇಶನದ ಎರಡನೇ ಚಿತ್ರ ‘ಲೀ’. ಈ ಮೊದಲು ‘ಪ್ರೊಡಕ್ಷನ್ ನಂ.1’ ಎಂದು ಚಿತ್ರವನ್ನು ಘೋಷಣೆ ಮಾಡಲಾಗಿತ್ತು. ಕಳೆದ ವಾರ ಕಂಠೀರವ ಸ್ಟುಡಿಯೊದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ‘ಲೀ’ ಎಂದು ಶೀರ್ಷಿಕೆ ಇಡಲಾಗಿದೆ. ಕಥೆ ಮತ್ತು ನಾಯಕನಿಗೆ ಸೂಕ್ತವಾಗುವ ಶೀರ್ಷಿಕೆ ಬೇಕೆಂಬ ಹುಡುಕಾಟದಲ್ಲಿ ‘ಲೀ’ ಶೀರ್ಷಿಕೆಯನ್ನು ಆಯ್ದುಕೊಂಡಿದ್ದಾರೆ ನಿರ್ದೇಶಕರು. ‘ನನ್ನಲೀ ಮೊದಲು... ನಿನ್ನಲೀ ಕೊನೆ...’ ಎಂಬ ಟಿಪ್ಪಣಿಯೂ ಶೀರ್ಷಿಕೆಯೊಂದಿಗೆ ಇದೆ.ಹೊಸ ರೀತಿಯ ಕಥಾಹಂದರ ಚಿತ್ರದ್ದು ಎಂಬುದು ನಿರ್ದೇಶಕರ ಮಾತು. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹದಿನಾರಾಣೆ ಮನರಂಜನೆ ನೀಡುವುದು ನಿರ್ದೇಶಕರ ಉದ್ದೇಶ.ಸುಮಂತ್ ಅವರ ಈ ಹಿಂದಿನ ಪಾತ್ರಗಳಿಂತ ಭಿನ್ನವಾದ ಪಾತ್ರ ಇಲ್ಲಿದೆ. ಚಿತ್ರಕ್ಕಾಗಿ ಸುಮಂತ್ ‘ವುಶು’ ಎಂಬ ಸಾಹಸ ಕಲೆಯನ್ನೂ ಅಭ್ಯಾಸ ಮಾಡಿದ್ದಾರೆ. ಮೂರು ತಿಂಗಳಿನಿಂದ ಬೆಂಗಳೂರಲ್ಲಿ ತರಬೇತಿ ಪಡೆಯುತ್ತಿದ್ದ ಅವರು ಮೈಸೂರಿಗೆ ತೆರಳಿ ಹೆಚ್ಚಿನ ಸಿದ್ಧತೆಯನ್ನೂ ನಡೆಸಿದ್ದಾರೆ. ಚಿತ್ರದಲ್ಲಿ ಅವರು ‘ವುಶು’ ಕಲೆಯನ್ನು ಹೇಳಿಕೊಡುವ ತರಬೇತುದಾರ. ಮಾರ್ಷಲ್ ಆರ್ಟ್ಸ್‌ನ ಏಳು ಕಲೆಗಳನ್ನು ಒಳಗೊಂಡ ಸಾಹಸ ಕಲೆ ‘ವುಶು’.ಆ್ಯಕ್ಷನ್ ಇದ್ದರೂ ಸುಮಂತ್ ಪಾತ್ರಕ್ಕೆ ಪ್ರೇಮಿ ಮತ್ತು ಮಾನಸಿಕ ಅಸ್ವಸ್ಥನ ಛಾಯೆಯೂ ಇದೆಯಂತೆ. ನಭಾ ನಟೇಶ್ ಅವರಿಗೆ ಜೋಡಿಯಾಗಿದ್ದಾರೆ. ಗುರುಕಿರಣ್ ಹಿನ್ನೆಲೆ ಸಂಗೀತ, ಆನಂದ್ ರಾಜವಿಕ್ರಮ್ ಸಂಗೀತ ಮತ್ತು ಎಂ.ಯು. ನಂದಕುಮಾರ್ ಛಾಯಾಗ್ರಹಣ ಚಿತ್ರಕ್ಕಿದ್ದು, ಶೈಲೇಂದ್ರ ಬಾಬು ನಿರ್ಮಾಣ ಮಾಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.