ಸೋಮವಾರ, ಅಕ್ಟೋಬರ್ 21, 2019
25 °C

ಷಟ್ಪಥ ರಸ್ತೆ ಅಭಿವೃದ್ಧಿಗೆ ಸುರಂಗ ಮಾರ್ಗ

Published:
Updated:
ಷಟ್ಪಥ ರಸ್ತೆ ಅಭಿವೃದ್ಧಿಗೆ ಸುರಂಗ ಮಾರ್ಗ

ಬಳ್ಳಾರಿ: ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುತ್ತ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದ ಜಿಲ್ಲೆಯ ಹೊಸಪೇಟೆ ಹೊರವಲಯದ ತುಂಗಭದ್ರಾ ಜಲಾಶಯದ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿನ ಕಡಿದಾದ ಗುಡ್ಡದಲ್ಲಿ ಸುರಂಗ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಕೊನೆಗೊಳ್ಳಲಿದೆ.ಸುತ್ತಮುತ್ತಲಿನ ಗ್ರಾಮ, ಪಟ್ಟಣಗಳ ಜನತೆ ಹಾಗೂ ವಾಹನ ಸವಾರರು ಹತ್ತಾರು ವರ್ಷಗಳಿಂದ ಎದುರಿಸುತ್ತಿರುವ  ಸಂಚಾರ ದಟ್ಟಣೆಯ ಸಮಸ್ಯೆಗೆ ಇದೀಗ ಪರಿಹಾರ ದೊರೆಯಲಿದ್ದು, ಮರಿಯಮ್ಮನಹಳ್ಳಿ, ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ, ಹಾಗೂ ಬೆಂಗಳೂರು, ವಿಜಾಪುರಗಳತ್ತ ಸಾಗುವ ಭಾರಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯ ಭರದಿಂದ ನಡೆದಿದೆ.ದಕ್ಷಿಣ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಚಿತ್ರದುರ್ಗ ಮತ್ತು ಸೊಲ್ಲಾಪುರದ ನಡುವಿನ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಕಾರ್ಖಾನೆಗಳಿಂದ ಭಾರಿ ಪ್ರಮಾಣದ ವಸ್ತುಗಳನ್ನು ಹೊತ್ತು ಸಾಗುವ ಭಾರಿ ಸರಕು ಸಾಗಣೆ ವಾಹನಗಳಿಂದ ಕಿಕ್ಕಿರಿದಿರುತ್ತದೆ.ತುಂಗಭದ್ರಾ ಜಲಾಶಯದ ಹಿನ್ನೀರ ಬಳಿಯ ವೀರಭದ್ರ ದೇವರ ಕಣವಿಯ ಬಳಿ ಹಾದು ಹೋಗಿರುವ ಈರಸ್ತೆ ಅತ್ಯಂತ ಎತ್ತರದಲ್ಲಿದ್ದುದರಿಂದ ಗುಡ್ಡ ಏರಿ, ಸುತ್ತು ಹಾಕಿ ಬರುವುದರೊಳಗೆ ಭಾರಿ ವಾಹನಗಳ ಚಾಲಕರಿಗೆ ಸಾಕುಸಾಕಾಗಿ ಹೋಗುವ ಸ್ಥಿತಿ ಇದೆ.ಕಿರಿದಾದ ರಸ್ತೆಯ ಜತೆಗೆ ಗುಡ್ಡದ ಮೇಲೇ ರೈಲು ಮಾರ್ಗ ಹಾದು ಹೋಗಿರುವುದರಿಂದ ಮತ್ತಷ್ಟು ಸಮಸ್ಯೆಯನ್ನು ವಾಹನ ಸವಾರರು ಎದುರಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ನಿತ್ಯವೂ ಕನಿಷ್ಠ ಒಂದೆರಡು ಬಾರಿಯಾದರೂ ಸಂಚಾರ ದಟ್ಟಣೆ ಕಂಡುಬಂದು, ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಲ್ಲುವುದು ಸಾಮಾನ್ಯ ಸಂಗತಿಯಾಗಿದೆ.ಗುಡ್ಡದ ಬಳಿ ಅಪಘಾತಗಳು ಸಂಭವಿಸಿ, ಕೆಲವು ಬಾರಿ 48 ಗಂಟೆಗಳ ಕಾಲ ಒಂದೂ ವಾಹನ ಕದಲದೆ ಉಳಿದ ಉದಾಹರಣೆಗಳೂ ಇವೆ. ಈ ಸಮಸ್ತೆಯ ನಿವಾರಣೆಗಾಗಿ ಕೇಂದ್ರ ಭೂ ಸಾರಿಗೆ ಇಲಾಖೆ ಇದೀಗ ಗುಡ್ಡವನ್ನೇ ಕೊರೆದು ಸುರಂಗ ಮಾರ್ಗ ನಿರ್ಮಿಸಲು ಮುಂದಾಗಿದೆ.ಕಣವಿ ವೀರಭದ್ರ ದೇವಸ್ಥಾನದಿಂದ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಕ್ರಾಸ್‌ವರಗೆ ಆರು ಪಥದ ರಸ್ತೆ ಅಭಿವೃದ್ಧಿಪಡಿಸಲು ಜಿಎಂಆರ್ ಓರಿಯಂಟಲ್ ಕಂಪೆನಿಯು ಟೆಂಡರ್ ಪಡೆದಿದ್ದು, ಕಣವಿ ಬಳಿ 250 ಮತ್ತು 290 ಮೀಟರ್ ಉದ್ದದ ಹಾಗೂ 14 ಮೀಟರ್ ಅಗಲದ ಎರಡು ಸುರಂಗ ಮಾರ್ಗಗಳನ್ನು ಸಿದ್ಧಪಡಿಸಲಾಗುತ್ತಿದೆ.ಸುರಂಗ ನಿರ್ಮಾಣ ಕಾರ್ಯವನ್ನು ಸಿಮೆನ್ಸ್ ಇಂಡಿಯಾ ಕಂಪೆನಿಯು ಬೃಹತ್ ಯಂತ್ರಗಳು ಹಾಗೂ 80 ಜನ ನುರಿತ  ಸಿಬ್ಬಂದಿಯ ಜತೆ ಒಂದು ತಿಂಗಳಿಂದ ಕಾಮಗಾರಿ ನಡೆಸಿದೆ. ಈಗಾಗಲೇ 40 ಮೀಟರ್ ಸುರಂಗ ಕೊರೆದಿದ್ದು, ಪ್ರತಿದಿನ ಸರಾಸರಿ 2 ಮೀಟರ್‌ನಂತೆ ಸುರಂಗ ಕೊರೆಯಲಾಗುತ್ತಿದ್ದು 2012ರ ಡಿಸೆಂಬರ್ ಒಳಗೆ ಪೂರ್ಣ ಸುರಂಗ ಕೊರೆಯುವ ಮೂಲಕ ರಸ್ತೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.ಒಂದು ಮೇಲ್ಸೇತುವೆ ಹಾಗೂ ಒಂದು ಕೆಳಸೇತುವೆಯನ್ನೂ ನಿರ್ಮಿಸುವ ಮೂಲಕ ತುಂಗಭದ್ರಾ ಅಣೆಕಟ್ಟೆ ವೃತ್ತದಲ್ಲಿ ಎದುರಾಗುವ ಸಂಚಾರ ದಟ್ಟಣೆಯನ್ನೂ ಕಡಿಮೆ ಮಾಡಲಾಗುವುದು ಎಂದು ಕೇಂದ್ರ ಭೂಸಾರಿಗೆ ಇಲಾಖೆಯ  ಮೂಲಗಳು ತಿಳಿಸಿವೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)