ಗುರುವಾರ , ಜುಲೈ 29, 2021
21 °C

ಷರತ್ತಿಲ್ಲದೇ ಭತ್ತ ಖರೀದಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಭತ್ತ ಖರೀದಿ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭತ್ತ ಬೆಳೆಗಾರರ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಲೇ ಬಂದಿವೆ. ಈ ಬಾರಿ ಷರತ್ತು ಇಲ್ಲದೇ ಭತ್ತವನ್ನು ರೈತರ ಹಿತಕ್ಕೆ ಪೂರಕವಾದ ದರದಲ್ಲಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.ಈ ಬೇಡಿಕೆ ಈಡೇರಿಸಲು ಆಗ್ರಹಿಸಿ ಇದೇ 4ರಂದು ಮಾನ್ವಿ ತಾಲ್ಲೂಕು ಪೋತ್ನಾಳದಲ್ಲಿ ರಸ್ತೆಯಲ್ಲಿ ಭತ್ತದ ಚೀಲಗಳನ್ನು ಇಟ್ಟು ಪ್ರತಿಭಟನೆ ನಡೆಸಲಾಗುವುದು. ಆ ದಿನ ಜಿಲ್ಲಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು. ಶರತ್ತುಗಳಿಲ್ಲದೇ ಈ ಬಾರಿ ಭತ್ತ ಖರೀದಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಪ್ರತಿಭಟನೆ ಮೂಲಕ ಆಗ್ರಹಿಸಲಾಗುವುದು ಎಂದು ಹೇಳಿದರು.ಅವೈಜ್ಞಾನಿಕ ಮತ್ತು ರೈತರ ಹಿತಕ್ಕೆ ಮಾರಕವಾದ ನೀತಿಗಳನ್ನು ಭತ್ತ ಖರೀದಿ ಕೇಂದ್ರ ಹೊಂದಿದ್ದರಿಂದ ಈ ಕೇಂದ್ರಕ್ಕೆ ಭತ್ತ ತಂದು ಮಾರಾಟ ಮಾಡಲು ರೈತರು ಮುಂದೆ ಬರುತ್ತಿಲ್ಲ. ಹೀಗಾಗಿ ಯಾವುದೇ ಶರತ್ತುಗಳಿಲ್ಲದೇ ರೈತರು ಬೆಳೆದ ಭತ್ತ ಖರೀದಿಸಬೇಕು. ತೇವಾಂಶವಿರುವ ಭತ್ತವನ್ನು ರೈತರು ಈ ಖರೀದಿ ಕೇಂದ್ರ ತಂದು ಮಾರಾಟ ಮಾಡುವುದಿಲ್ಲ. ಇದೊಂದು ಹೊರತುಪಡಿಸಿ ಮಿಕ್ಕ ಎಲ್ಲ ಷರತ್ತು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.ಒತ್ತಾಯ: ಬೇಸಿಗೆ ಕಾಲವಾಗಿರುವುದರಿಂದ ಕೆಲ ಕಡೆ ಭತ್ತ ನುಚ್ಚಾಗಬಹುದು. ಇದನ್ನು ಜಿಲ್ಲಾಡಳಿತ ರೈತರ ಹಿತ ದೃಷ್ಟಿಯಿಂದ ಗಮನಿಸಬೇಕು. ರೈತರಿಗೆ ಯಾವುದೇ ರೀತಿ ಆರ್ಥಿಕ ನಷ್ಟ ಉಂಟಾಗದಂತೆ  ಭತ್ತ ಖರೀದಿ ಮಾಡಲು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.ಈಚೆಗೆ ಜಿಲ್ಲಾಧಿಕಾರಿ ಖರೀದಿ ಕೇಂದ್ರ ಸ್ಥಾಪನೆ ಬಗ್ಗೆ ಸಭೆ ನಡೆಸಿದರೂ ರಾಜ್ಯ ರೈತ ಸಂಘದ ಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ತಮ್ಮದೇ ಆದ ಧೋರಣೆಯಲ್ಲಿ ಸಭೆ ನಡೆಸಿದರೆ ರೈತರಿಗೆ ಉಪಯುಕ್ತ ಆಗುವುದಿಲ್ಲ. ರೈತ ಸಮಸ್ಯೆಗಳನ್ನು ಸಂಘಟನೆಗಳ ಮೂಲಕ ಜಿಲ್ಲಾಧಿಕಾರಿಗಳು ಆಲಿಸಬೇಕಾಗುತ್ತದೆ. ಅದನ್ನು ಅವರು ಮಾಡಿಲ್ಲ. 4ರಂದು ನಡೆಸುವ ಪ್ರತಿಭಟನಾ ಸ್ಥಳಕ್ಕೆ ಅವರು ಆಗಮಿಸಬೇಕು ಎಂದು ಆಗ್ರಹಿಸಿದರು.ಮಣ್ಣಿನ ಮಕ್ಕಳಿಗೆ ಕಾಳಜಿ ಇಲ್ಲ: ರಾಜ್ಯದ ಮಣ್ಣಿನ ಮಕ್ಕಳು ತಾವೇ ಎಂದು ಕರೆದುಕೊಳ್ಳುವ ಮಾಜಿ ಪ್ರಧಾನಿ ದೇವೇಗೌಡ, ಸಂಸದ ಕುಮಾರಸ್ವಾಮಿ ಅವರಿಗೆ ಈ ರಾಜ್ಯದ ರೈತರು, ರೈತರ ಸಮಸ್ಯೆ ಮರೆತು ಹೋಗಿವೆ. ಬರೀ ಯಡಿಯೂರಪ್ಪ ಬಗ್ಗೆ ರಾಜಕೀಯ ಟೀಕೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿರುವುದು ವಿಪರ್ಯಾಸ ಎಂದು ಟೀಕಿಸಿದರು.ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ಇತರ ಮುಖಂಡರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.