ಷೂ ಬದಲು ಪೂರಕ ಓದಿನ ಪುಸ್ತಕ ಕೊಡಿ

ಬುಧವಾರ, ಜೂಲೈ 24, 2019
28 °C

ಷೂ ಬದಲು ಪೂರಕ ಓದಿನ ಪುಸ್ತಕ ಕೊಡಿ

Published:
Updated:

ಹೊಸ ಶಿಕ್ಷಣ ಸಚಿವರು ಉತ್ಸಾಹಿಗಳು.  ಸಚಿವರಾದ ಒಂದೆರಡು ತಿಂಗಳುಗಳಲ್ಲೇ `ಮಾದರಿ ಶಾಲೆ' ಮುಂತಾದ ಆಲೋಚನೆಗಳಿಂದ, ನಮ್ಮಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಇವರು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಸಮವಸ್ತ್ರದೊಂದಿಗೆ ಬೂಟು ನೀಡುವ ಚಿಂತನೆ ಹೊಂದಿದ್ದಾರೆಂದು ಪತ್ರಿಕಾ ವರದಿಗಳಿಂದ ತಿಳಿದುಬಂದಿದೆ.ಮಕ್ಕಳ ಕಾಲಿಗೆ ತೊಡಿಸುವ ಬೂಟುಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಯಾವ ರೀತಿ ಸಹಾಯಕ ಎಂದು ಅರ್ಥವಾಗುತ್ತಿಲ್ಲವಲ್ಲ! ನಿಜಕ್ಕೂ ಮಕ್ಕಳ ಕಲಿಕಾ ಬೆಳವಣಿಗೆಗೆ ಬೂಟುಗಳು ಅನಿವಾರ್ಯವಲ್ಲ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಪ್ರಗತಿಗೆ ಬೇಕೇ ಬೇಕು ಪೂರಕ ಓದಿನ ಪುಸ್ತಕಗಳು. ಇವತ್ತಿನ ದೊಡ್ಡ ದುರಂತವೆಂದರೆ ಸಮಾಜದಲ್ಲಿ ಬಹುಪಾಲು ಅಂಕಗಳಿಗೆ ಹೊರತಾದ ಓದು ಕಾಣೆಯಾಗಿರುವುದು. ಮಕ್ಕಳಲ್ಲಿ ಎಳವೆಯಿಂದಲೇ ಓದಿನ ಆಕರ್ಷಣೆ ಬೆಳೆದು ಶಾಲೆಗೊಂದು ಗ್ರಂಥಾಲಯ, ತರಗತಿಗೊಂದು ಗ್ರಂಥ ಸಂಗ್ರಹ ಬೇಕೇ ಬೇಕು.ಪ್ರಾಥಮಿಕ ಶಾಲೆಗಳಿಗೆ ಎರಡು ವರ್ಷಗಳ ಮೊದಲು ಒಂದಿಷ್ಟು ಗ್ರಂಥಾಲಯ ಅನುದಾನ ಬಂದದ್ದು ಹೊರತುಪಡಿಸಿದರೆ ಮತ್ತೆ ಗ್ರಂಥಸಂಗ್ರಹದ ನವೀಕರಣಕ್ಕೆ ಅವಕಾಶವಾಗಿಲ್ಲ. ಬಹುತೇಕ ಪ್ರೌಢಶಾಲೆಗಳಲ್ಲಿ ಪ್ರತಿವರ್ಷ ಗ್ರಂಥಾಲಯಕ್ಕೆ ಒಂದಿಷ್ಟು ಖರೀದಿಯಾಗುತ್ತಿದ್ದರೂ, ಸಮರ್ಪಕ ವ್ಯವಸ್ಥೆಗೆ ವಿದ್ಯಾರ್ಥಿಗಳ ಓದಿಗೆ ಪುಸ್ತಕಗಳ ಒದಗಿಸುವಿಕೆಗೆ ಗ್ರಂಥಪಾಲಕರಿಲ್ಲ. ಇದು ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಲು ಹಿನ್ನಡೆಯಾಗಿದೆ.ಪಠ್ಯಪುಸ್ತಕಗಳು ಮಕ್ಕಳಿಗೆ ಯಾವತ್ತೂ ನೀರಸ. ಮಕ್ಕಳಲ್ಲಿ ಅಂಕಗಳ ಗೀಳು ಹೆಚ್ಚಿಸಬಲ್ಲವೇ ಹೊರತು ಓದಿನ ರುಚಿ ಹತ್ತಿಸಲಾರವು. ಓದಿನ ರುಚಿ ಮಕ್ಕಳಿಗೆ ಹತ್ತಲು ಆಕರ್ಷಕ ವೈವಿಧ್ಯ ಪುಸ್ತಕಗಳು ಶಾಲೆಗಳಲ್ಲಿ ಲಭ್ಯವಿರಬೇಕು. ತಮಗೆ ಇಷ್ಟವಾಗುವ ಪುಸ್ತಕಗಳನ್ನು ತಾವೇ ಆಯ್ಕೆ ಮಾಡಿ ಓದಲು ಅವಕಾಶವಿರಬೇಕು. ಪುಸ್ತಕಗಳನ್ನು ಮುಚ್ಚಿ ಅವುಗಳ ನುಣುಪನ್ನು ಹೊಳಪನ್ನು ಸವಿದು ಅವುಗಳಿಗೆ ಮಾರುಹೋಗಿ ಕೈಗೆತ್ತಿಕೊಳ್ಳುವ ವಿಪುಲ ಸಂಗ್ರಹದ ಅವಕಾಶವಿರಬೇಕು. ಆಗಲೇ ಜ್ಞಾನದಾಹ ಹೆಚ್ಚುವುದು.ಪುಸ್ತಕಗಳ ಓದೇ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು. ಪ್ರಜ್ಞಾವಂತ ನಾಗರಿಕರನ್ನು ಬೆಳೆಸುವುದು. ಪ್ರತಿ ಶಾಲೆಯಲ್ಲಿ ಮಕ್ಕಳ ಓದಿಗೆ ಪೂರಕವಾಗುವ ಪುಸ್ತಕಗಳು ಸುಲಭದಲ್ಲಿ ಸಾಕಷ್ಟು ಲಭ್ಯವಿರಬೇಕು, ಎಂದಾದಲ್ಲಿ ಶಾಲಾ ಗ್ರಂಥಾಲಯ, ತರಗತಿವಾರು ಗ್ರಂಥಸಂಗ್ರಹ ಪ್ರತಿವರ್ಷ ಹೊಸದುಗೊಳಿಸಲೇಬೇಕು.ಅದಕ್ಕಾಗಿ ಪ್ರತಿವರ್ಷವೂ ಗ್ರಂಥಾಲಯಕ್ಕೆಂದೇ ಪುಸ್ತಕಗಳ ಖರೀದಿಗೆಂದೇ ಅನುದಾನ ಲಭ್ಯವಿರಲೇಬೇಕು. ಆದ್ದರಿಂದ ಕಲಿಕೆಗೆ ಸಹಾಯಕವಾಗದ ಅಂಶಗಳಿಗೆ ಖರ್ಚು ಮಾಡುವುದಕ್ಕಿಂತ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರತಿವರ್ಷ ಪೂರಕ ಪುಸ್ತಕಗಳಿಗೆ ಅನುದಾನ ಒದಗಿಸುವರೇ ಶಿಕ್ಷಣ ಸಚಿವರು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry