ಶನಿವಾರ, ನವೆಂಬರ್ 23, 2019
23 °C

ಷೇರುಪೇಟೆಯಲ್ಲಿ ಉತ್ಸಾಹ ಸೂಚ್ಯಂಕ 153ಅಂಶ ಏರಿಕೆ

Published:
Updated:

ಮುಂಬೈ(ಪಿಟಿಐ): ಅತ್ತ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ ಮತ್ತೆ ಏರುಮುಖವಾಗಿದ್ದರೆ, ಇತ್ತ ದೇಶದ ಪ್ರಮುಖ ಷೇರುಪೇಟೆಯಲ್ಲೂ ಸಂವೇದಿ ಸೂಚ್ಯಂಕ ಮತ್ತೆ ಉತ್ಸಾಹದಲ್ಲಿ ಮೇಲ್ಮುಖವಾಗಿ ಪಯಣ ಮುಂದುವರಿಸಿತು.ಮುಂಬೈ ಷೇರು ವಿನಿಮಯ ಕೇಂದ್ರ  (ಬಿಎಸ್‌ಇ)ದಲ್ಲಿ ಸೋಮವಾರ ಸಂವೇದಿ ಸೂಚ್ಯಂಕ 153.37 ಅಂಶಗಳ ಏರಿಕೆ ದಾಖಲಿಸಿದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ `ನಿಫ್ಟಿ' ಸಹ 51.30 ಅಂಶಗಳ ವೃದ್ಧಿ ಕಂಡಿತು.4ನೇ ತ್ರೈಮಾಸಿಕ ಫಲಿತಾಂಶ ಹತ್ತಿರದಲ್ಲಿಯೇ ಇರುವ ಕಾರಣ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಸೋಮವಾರ ಭಾರಿ ಮೌಲ್ಯ ಪಡೆದುಕೊಂಡವು. ಜತೆಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರ ಕಡಿತ ಮಾಡುವುದು ಖಚಿತ ಎಂಬ ನಿರೀಕ್ಷೆಯೂ ಸೇರಿಕೊಂಡು ಪೇಟೆಯಲ್ಲಿ ಉತ್ಸಾಹ ಮೂಡಿಸಿತು. ಪರಿಣಾಮ ಸಂವೇದಿ ಸೂಚ್ಯಂಕ ಕಳೆದೊಂದು ತಿಂಗಳ ಗರಿಷ್ಠ ಮಟ್ಟವಾದ 19,169.83 ಅಂಶಗಳಿಗೆ ಏರಿತು. `ನಿಫ್ಟಿ' ಸಹ 5,834.40 ಅಂಶಗಳಿಗೆ ವೃದ್ಧಿ ಕಂಡಿತು.ಸೋಮವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ರಿಯಾಲ್ಟಿ ವಲಯದ ಷೇರುಗಳು ವೇಗವಾಗಿ ಮುನ್ನಡೆದವು. ಜತೆಗೆ ಗ್ರಾಹಕ ಬಳಕೆ ವಸ್ತು ಮತ್ತು ಲೋಹ ತಯಾರಿಕೆ ಕಂಪೆನಿಗಳು ಹಾಗೂ ಇಂಧನ ಕ್ಷೇತ್ರದ ಉದ್ಯಮಗಳ ಷೇರುಗಳಿಗೂ ಬೇಡಿಕೆ ಬಂದು ಹೆಚ್ಚು ವಹಿವಾಟು ನಡೆಸಿದವು.`ಹಣದುಬ್ಬರದಲ್ಲಿ ಸುಧಾರಣೆ, ದಿನಸಿ ಪದಾರ್ಥಗಳ ಧಾರಣೆ ತುಸು ಇಳಿಕೆ ಆಗಿರುವುದರಿಂದ ಆರ್‌ಬಿಐ ಬಡ್ಡಿದರ ಕಡಿತ ಮಾಡುವುದು ಖಚಿತ. ಜತೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ(ಎಫ್‌ಐಐ) ಕಡೆಯಿಂದಲೂ ದೊಡ್ಡ ಮೊತ್ತ ಬರಲಾರಂಭಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿದೆ. ಈ ಎಲ್ಲ ಸಕಾರಾತ್ಮಕ ಅಂಶಗಳೂ ಷೇರುಪೇಟೆಯಲ್ಲಿನ ಸದ್ಯದ ಬೆಳವಣಿಗೆಗೆ ಕಾರಣವಾಗಿವೆ' ಎಂದು ಷೇರುಪೇಟೆ ಅನುಭವಿ, `ಬೊನಾಂಜ ಪೋರ್ಟ್‌ಪೋಲಿಯೊ' ಹಿರಿಯ ಉಪಾಧ್ಯಕ್ಷ ರಾಕೇಶ್ ಗೋಯಲ್ ವಿಶ್ಲೇಷಿಸಿದ್ದಾರೆ.

ಪ್ರತಿಕ್ರಿಯಿಸಿ (+)