ಷೇರು ಸೂಚ್ಯಂಕ ಏರಿಳಿತ: ಹೂಡಿಕೆದಾರರಿಗೆ ಮಾಹಿತಿ

7

ಷೇರು ಸೂಚ್ಯಂಕ ಏರಿಳಿತ: ಹೂಡಿಕೆದಾರರಿಗೆ ಮಾಹಿತಿ

Published:
Updated:

ನವದೆಹಲಿ (ಪಿಟಿಐ): ಷೇರುಪೇಟೆಯಲ್ಲಿ ವಹಿವಾಟು ನಡೆಸುವ  ಕಂಪೆನಿಗಳು, ತಮ್ಮ ಷೇರುಗಳ ಬೆಲೆಯಲ್ಲಿ ಹಠಾತ್ ಏರಿಕೆ, ವಹಿವಾಟಿನ ಗಾತ್ರದಲ್ಲಿ ದಿಢೀರ್ ಹೆಚ್ಚಳದಂತಹ  ಅಸಾಮಾನ್ಯ ಬೆಳವಣಿಗೆಗಳ ಬಗ್ಗೆ ಷೇರುಪೇಟೆಗೆ ನೀಡಿದ ಸಮಜಾಯಿಸಿಗಳನ್ನು ಇನ್ನು ಮುಂದೆ ಬಹಿರಂಗಗೊಳಿಸಲು ನಿರ್ಧರಿಸಲಾಗಿದೆ.ಷೇರುಗಳ ಖರೀದಿ ಮತ್ತು ಮಾರಾಟದಲ್ಲಿನ ತೀವ್ರ ಸ್ವರೂಪದ ಏರಿಳಿತಗಳಿಗೆ ಸಂಬಂಧಿಸಿದ ಬೆಳವಣಿಗೆಗಳನ್ನೆಲ್ಲ ಹೂಡಿಕೆದಾರರ ತಿಳಿವಳಿಕೆಗಾಗಿ ಬಹಿರಂಗಪಡಿಸಲಾಗುವುದು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಸಹಯೋಗದಲ್ಲಿ ಷೇರುಪೇಟೆಗಳು, ಷೇರುಗಳ ಬೆಲೆ ಏರಿಳಿತ ಮತ್ತು ವಹಿವಾಟಿನ ಗಾತ್ರದ ಮೇಲೆ ಹೆಚ್ಚಿನ ನಿಗಾ ಇಡಲು ನಿರ್ಧರಿಸಿವೆ.ನಿರ್ದಿಷ್ಟ ವ್ಯಕ್ತಿಗಳು, ಕೆಲವು ಸಂದರ್ಭಗಳಲ್ಲಿ ಸ್ವತಃ ಕಂಪೆನಿಗಳು ಅಥವಾ ಷೇರು ವಹಿವಾಟುದಾರರು ಷೇರು ಬೆಲೆಗಳಲ್ಲಿ ಕೈವಾಡ ನಡೆಸಿ  ವಂಚನೆ ಎಸಗುವ ಸಾಧ್ಯತೆಗಳು ಇರುತ್ತವೆ. ಇಂತಹ ಬೆಳವಣಿಗೆಗಳ ಬಗ್ಗೆ ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳು (ಎನ್‌ಎಸ್‌ಇ) ಈಗಾಗಲೇ ನಿಗಾ ಇಡಲು ಆರಂಭಿಸಿದ್ದು, ಈ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿವೆ.ಹೂಡಿಕೆದಾರರಿಗೆ ತಾಜಾ ಮಾಹಿತಿ ನೀಡಿದರೆ ಅದರಿಂದ ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಲು ಸಾಧ್ಯವಾಗುವುದು ಎಂದು ‘ಎನ್‌ಎಸ್‌ಇ’ ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry