ಗುರುವಾರ , ಮೇ 6, 2021
33 °C

ಷೋಕಾಸ್ ನೋಟಿಸ್; ಅಧಿಕಾರಿಗಳಿಗೆ ನಡುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿಯಲ್ಲಿ ಆರೋಪಿಗಳ ಪಟ್ಟಿಯಲ್ಲಿ ಹೆಸರಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದ್ದು, ಈ ಪಟ್ಟಿಯಲ್ಲಿರುವ ಜಿಲ್ಲೆಯ 40ಕ್ಕೂ ಅಧಿಕಾರಿಗಳ ಹೆಸರಿದೆ ಎಂದು ತಿಳಿದು ಬಂದಿದೆ.ಅಕ್ರಮ ಗಣಿಗಾರಿಕೆಯಲ್ಲಿ ಶಾಮೀ ಲಾಗಿರುವ ಆರೋಪ ಎದುರಿಸುತ್ತಿ ರುವ ಅಧಿಕಾರಿಗಳಿಗೆ ಸರ್ಕಾರ ಜಾರಿ ಮಾಡಿರುವ ಷೋಕಾಸ್ ನೋಟಿಸ್ ಸದ್ಯದಲ್ಲೇ ಅವರ ಕೈ ಸೇರಲಿದೆ. ಮುಂಬರುವ ಅಪಾಯದಿಂದ ಪಾರಾಗಲು ಅಧಿಕಾರಿಗಳು ವಕೀಲರ ಸಲಹೆ ಕೇಳಲು ಕೋರ್ಟು, ಕಚೇರಿಗಳಿಗೆ ಅಲೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಲೋಕಾಯುಕ್ತರು 2006ರಿಂದ 2010ರ ಅವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ತನಿಖೆ ನಡೆಸಿ ವರದಿಯನ್ನು ಸರ್ಕಾರ ಸಲ್ಲಿಸಿದ್ದು, ಈ ಅವಧಿಯಲ್ಲಿ ಸೇವೆಯಲ್ಲಿದ್ದು ಈಗ ನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗೊತ್ತಾಗಿದೆ.ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳೂ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾರೆ.ಲೋಕಾಯುಕ್ತ ತನಿಖಾಧಿಕಾರಿಗಳು 2010ರ ಫೆ. 20ರಂದು ಅಂಕೋಲಾ ತಾಲ್ಲೂಕಿನ ಬೇಲೆಕೇರಿ ಬಂದರು ಪ್ರದೇಶದಲ್ಲಿ ಅದಿರು ರಫ್ತು ವಹಿವಾಟು ನಡೆಸುತ್ತಿರುವ ಮಲ್ಲಿಕಾರ್ಜುನ, ಅದಾನಿ, ಸಾಲಗಾಂವಕರ್, ರಾಜ್‌ಮಹಲ್ ಸಿಲ್ಕ್ಸ್ ಕಂಪೆನಿ ಕಚೇರಿಗಳ ಮೇಲೆ ದಾಳಿ ನಡೆಸಿ, ಹಾರ್ಡ್‌ಡಿಸ್ಕ್ ಮತ್ತು ಇತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಎಲ್ಲ ದಾಖಲೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹಣ ನೀಡುವ ಕುರಿತು ಮಾಹಿತಿಯಿತ್ತು ಎಂದು ಗೊತ್ತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.