ಸೋಮವಾರ, ಜೂನ್ 21, 2021
30 °C

ಸಂಕಟವೂ... ಸ್ವಪ್ನವೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದು ಬೆಳಕಿನ ಜಗ. ಬಣ್ಣದ ಜಗ. ಬಣ್ಣ ಬೆಳಕು ಎರಡೂ ಕಲೆತು ಕಂಡದ್ದೆಲ್ಲ ಝಗಮಗ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ `ಬ್ರೇಕಿಂಗ್ ನ್ಯೂಸ್~ ಸಿನಿಮಾದ ದನಿಮುದ್ರಿಕೆ ಬಿಡುಗಡೆಯಾಗಿದ್ದು ಇಂಥ ಸ್ವಪ್ನ ಸ್ಥಳದಲ್ಲಿ.`ಭಯ, ಸಂಕಟ, ಆತಂಕ ಏಕಕಾಲಕ್ಕೆ ಆಗುತ್ತಿದೆ~ ಎಂದರು ನಾಗತಿಹಳ್ಳಿ. ಚಿತ್ರದ ಕೊನೆಯ ಶಾಟ್ ಅದೇ ದಿನ ಪೂರ್ಣಗೊಂಡಿತ್ತು. ಒಂದೆಡೆ ಹಾಡಿನ ದೃಶ್ಯಗಳ ಸಂಕಲನವೂ ಮುಗಿದಿತ್ತು. ಇಂಥ ಸಮಯದಲ್ಲಿ ಏಕೆ ಆತಂಕ? ಚಿತ್ರೀಕರಣ ಪೂರ್ಣಗೊಂಡ ಬಗ್ಗೆ ಅವರು ನಿಟ್ಟುಸಿರೇನೋ ಬಿಟ್ಟರು. ಆದರೆ ಮುಂದೆ ಇರುವುದು ಅಗ್ನಿಪರೀಕ್ಷೆ. ಪ್ರೇಕ್ಷಕನೆಂಬ ಪರೀಕ್ಷೆಯನ್ನು ಎದುರಿಸಬೇಕಾದ ಪ್ರಶ್ನೆ. ಇದು ಅವರ ಸಂಕಟಕ್ಕೆ ಕಾರಣ.ಕಳವಳಕ್ಕೂ ಬ್ರೇಕ್ ಬಿತ್ತು. ಎವೆ ಮುಚ್ಚಿ ತೆರೆಯುವುದರೊಳಗೆ ಅಲ್ಲೊಂದು ಕಿನ್ನರಲೋಕ. ಕಿವಿ ತುಂಬಿಕೊಳ್ಳುತ್ತಿದ್ದ `ರಿದಂ~ ಬಳಿಸಾರಿ ಬರುತ್ತಿದ್ದ `ತದೀಂ~. ಮಿಂಚಿನ ಬಳ್ಳಿಗಳ ಬೆಕ್ಕಿನ ನಡಿಗೆ, ಕಣ್ಣು ಕುಕ್ಕುವ ಸೊಬಗಿನ ಉಡುಗೆ. ಸಿನಿಮಾದ ಹಾಡು ರೂಪದರ್ಶಿಯರ ನಡೆದಾಟಕ್ಕೆ ತಾಳ ಹಾಕುತ್ತಿತ್ತು.ಅದು ಚಿತ್ರದ ಸಂಗೀತ ನಿರ್ದೇಶಕ ಸ್ಟೀಫನ್ ಪ್ರಯೋಗ್ ಅವರ ಪ್ರಯೋಗ. ರೂಪದರ್ಶಿಯರ ಜತೆಗೆ ಚಿತ್ರದ ನಾಯಕಿ ರಾಧಿಕಾ ಪಂಡಿತ್ ಹೆಜ್ಜೆ ಇಟ್ಟರು. ಅಚ್ಚ ಬಿಳಿ ಉಡುಗೆಯುಟ್ಟಿದ್ದ ಆಕೆ ಅಂದು ಶ್ವೇತ ಗುಲಾಬಿ!ಹಾಡಿಗೂ ಬ್ರೇಕ್ ಹಾಕುವ ಕಾಲ ಬಂತು. ಇನ್ನೊಂದು ಒಸಗೆ ಸಜ್ಜಾಗಿ ಕುಳಿತಿತ್ತು. ಅಂದು ರಾಧಿಕಾರ ಹುಟ್ಟು ಹಬ್ಬ. ಜೋಕರ್ ವೇಷ ತೊಟ್ಟಿದ್ದ ನಟ ಅರುಣ್ ಸಾಗರ್ ಹೂ ಕೊಟ್ಟು ಶುಭ ಕೋರಿದರು.ಹಂಸಲೇಖಾರಿಂದ `ಬ್ರೇಕಿಂಗ್ ನ್ಯೂಸ್~ಗೆ ಶುಭಾಶಯ. ನಾಗತಿಹಳ್ಳಿಯವರ ಸಾಹಿತ್ಯದ ಪ್ರೀತಿ, ಸಾಮಾಜಿಕ ಆಸಕ್ತಿ, ಕತೆಗಾರನಾಗಿ ಬೆಳೆದ ಪರಿಯನ್ನು ಜಯಂತ ಕಾಯ್ಕಿಣಿ ಸ್ಮರಿಸಿದರು. ಹಾಡೊಂದರಲ್ಲಿ ಬರುವ ಭೂಮಿಗೂ ಆಕಾಶಕ್ಕೂ ಮಾಧ್ಯಮ ಮಳೆ ಎಂಬರ್ಥದ ಸಾಲು ಅವರನ್ನು ಬಹಳ ಕಾಡಿತ್ತು.

 

`ಮಾಧ್ಯಮವನ್ನು ಕುರಿತಾದ ಚಿತ್ರದಲ್ಲಿ ಈ ಪದಪುಂಜ ಮಾಧ್ಯಮದ ಮಹತ್ವವನ್ನು ಸಾರುತ್ತದೆ~ ಎಂದರು.`ಸಿನಿಮಾ ಎಂದರೆ ಹೀಗಿರಬೇಕು ಎಂಬ ಮೇಲ್ಪಂಕ್ತಿ ಹಾಕಿದವರು ಅವರು. ಅವರನ್ನು ಮೇಷ್ಟ್ರು ಎಂದು ಕರೆಯುವುದು ಧ್ವನಿಪೂರ್ಣವಾಗಿದೆ. ಸಿನಿಮಾಕ್ಕೆ ವೈವಿಧ್ಯತೆಯನ್ನು ಪರಿಚಯಿಸಿದವರು ಅವರು~ ಎನ್ನುವುದು ಸಂಗೀತ ನಿರ್ದೇಶಕ ಗುರುಕಿರಣ್ ಮಾತಿನ ಸಾರ. ಸ್ಟೀಫನ್ ಸಂಗೀತವನ್ನೂ ಅವರು ಹೊಗಳಿದರು.“ಅಮೆರಿಕ ಅಮೆರಿಕ~, `ಅಮೃತಧಾರೆ~ಯಂತಹ ಚಿತ್ರಗಳನ್ನು ಮರೆಯುವಂತೆಯೇ ಇಲ್ಲ. ಅವರ ಹಾಡುಗಳಲ್ಲಿ ಬರುವ ಸ್ವಾತಂತ್ರ್ಯ, ಬಂಡಾಯ ಎಂಬ ಒಂದೊಂದೇ ಪದಕ್ಕೂ ಹಲವು ಅರ್ಥಗಳಿವೆ. ಅವೆಲ್ಲಕ್ಕೂ ದೊಡ್ಡ ಹಿನ್ನೆಲೆಯಿದೆ” ಎಂದದ್ದು ಗೀತ ರಚನೆಕಾರ ಕವಿರಾಜ್.ದನಿಮುದ್ರಿಕೆ ಬಿಡುಗಡೆ ಮಾಡಿದ ನಟ ದರ್ಶನ್, ಮೋಹನ್ ಬಿ ಕೆರೆಯವರ ಕಲಾನಿರ್ದೇಶನಕ್ಕೆ ಮನಸೋತಿದ್ದರು. `ಕಸದಿಂದಲೂ ರಸ ಮಾಡುವುದು ಅವರಿಗೆ ಗೊತ್ತಿದೆ. ಮೇಷ್ಟ್ರು ಏನೇ ಮಾಡಿದರೂ ಅನನ್ಯತೆ ಇರುತ್ತದೆ.ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲಿ~ ಎಂಬ ಹಾರೈಕೆ ಅವರಿಂದ. ಸಾಹಿತಿ ನಾ.ದಾಮೋದರ ಶೆಟ್ಟಿ, ನಿರ್ದೇಶಕ ಯೋಗರಾಜ್ ಭಟ್ ಚಿತ್ರಕ್ಕಾಗಿ ತಲಾ ಒಂದು ಹಾಡು ಬರೆದಿದ್ದಾರೆ.ನಟ ಶ್ರೀನಗರ ಕಿಟ್ಟಿ, ಆನಂದ್ ಆಡಿಯೊ ಮುಖ್ಯಸ್ಥ ಮೋಹನ್, ಜಂಟಿ ನಿರ್ಮಾಪಕ ರಾಜ್‌ಕುಮಾರ್ ಮತ್ತಿತರರು ಮಾತನಾಡಿದರು. ಚಿತ್ರದ ನಾಯಕ ಅಜಯ್‌ರಾವ್ ಹಾಗೂ ಸಂಗೀತ ನಿರ್ದೇಶಕ ಸ್ಟೀಫನ್ ಪ್ರಯೋಗ್ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.