ಸಂಕಟ ನಿವಾರಕ ಪ್ರಣವ್ ಹೊಸ ಪಯಣ

ಬುಧವಾರ, ಜೂಲೈ 17, 2019
27 °C

ಸಂಕಟ ನಿವಾರಕ ಪ್ರಣವ್ ಹೊಸ ಪಯಣ

Published:
Updated:

 ನವದೆಹಲಿ (ಪಿಟಿಐ): ಎಪ್ಪತ್ತೇಳು ವರ್ಷದ ಹಿರಿಯ ಕಾಂಗ್ರೆಸ್ಸಿಗ ಪ್ರಣವ್ ಮುಖರ್ಜಿ ಈಗ ದೇಶದ ಅತ್ಯುನ್ನತ ಸಾಂವಿಧಾನಿಕ ಸ್ಥಾನ ಅಲಂಕರಿಸಲಿದ್ದಾರೆ. ಕಳೆದ ಎಂಟು ವರ್ಷಗಳಿಂದ ಯುಪಿಎ ಸರ್ಕಾರದಲ್ಲಿ `ಸಂಕಷ್ಟ ನಿವಾರಕ~ (ಟ್ರಬಲ್ ಶೂಟರ್)ನ ಜವಾಬ್ದಾರಿ ಹೊತ್ತಿದ್ದ, ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಸರ್ಕಾರದಲ್ಲಿ ಮಹತ್ವದ ಖಾತೆಗಳ ಚುಕ್ಕಾಣಿ ಹೊಂದಿದ್ದ ಪಶ್ಚಿಮ ಬಂಗಾಳದ `ಪ್ರಣವ್ ದಾ~ ಅವರ ಸುದೀರ್ಘ ರಾಜಕೀಯ ಸೇವೆಗೆ ಪ್ರತಿಫಲ ಎಂಬಂತೆ ರಾಷ್ಟ್ರಪತಿ ಸ್ಥಾನ ದೊರಕಿದೆ.45 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಅವರಿಗೆ ಈ ಹೊಸ ಹುದ್ದೆ ನಿಭಾಯಿಸುವುದು ಕಷ್ಟವಾಗಲಿಕ್ಕಿಲ್ಲ. ಏಕೆಂದರೆ ಹಿಂದಿನ ಯಾವ ರಾಷ್ಟ್ರಪತಿಗೂ ಇಲ್ಲದಷ್ಟು ಆಡಳಿತದ ಅಗಾಧ ಅನುಭವ, ಪಾಂಡಿತ್ಯ ಅವರಿಗಿದೆ.ಕಾನೂನು ಅಭ್ಯಾಸ ಮಾಡಿಯೂ ವಕೀಲ ವೃತ್ತಿಗೆ ಇಳಿಯದ ಪ್ರಣವ್ ಅವರನ್ನು ಸಂವಿಧಾನ ಹಾಗೂ ಆಡಳಿತ ವಿಚಾರದಲ್ಲಿ ತಜ್ಞರೆಂದೇ ಪರಿಗಣಿಸಲಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೆಲ್ಲ ಸರ್ಕಾರದಲ್ಲಿ ಪ್ರಧಾನಿ ನಂತರದ ನಂಬರ್ 2 ವ್ಯಕ್ತಿ ಎಂದು ಅವರನ್ನು ಗೌರವಿಸಲಾಗುತ್ತಿತ್ತು.ಇಂದಿರಾ ಗಾಂಧಿ ಅವರ ಕಾಲದಿಂದಲೂ ಪ್ರಣವ್ ಸರ್ಕಾರದಲ್ಲಿ ಬಹುಬೇಕಾದ ವ್ಯಕ್ತಿಯಾಗಿದ್ದರು. ತುರ್ತುಪರಿಸ್ಥಿತಿಯ ದಿನಗಳಲ್ಲಿ ಕಂದಾಯ ಖಾತೆ ನಿಭಾಯಿಸಿದ್ದರು. ಯುಪಿಎ ಸರ್ಕಾರಕ್ಕೆ ಆಧಾರಸ್ತಂಭದಂತಿದ್ದ ಪ್ರಣವ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಅವರ ಹೆಸರು ಸೂಚಿಸುವ ಮುನ್ನ ಕಾಂಗ್ರೆಸ್ ಪಕ್ಷ ದ್ವಂದ್ವಕ್ಕೆ ಸಿಲುಕಿತ್ತು.
ವೃತ್ತಿಯಿಂದ ಶಿಕ್ಷಕರು, ಪತ್ರಕರ್ತರು ಆಗಿದ್ದ ಪ್ರಣವ್ ಮುಖರ್ಜಿ ಕಾಂಗ್ರೆಸ್‌ಗೆ ಬಂದಿದ್ದು 1969ರಲ್ಲಿ. ಆ ವರ್ಷ ಮಿಡ್ನಾಪುರದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಕೃಷ್ಣ ಮೆನನ್ ಅವರ ಪರವಾಗಿ ವ್ಯಾಪಕವಾಗಿ ಪ್ರಚಾರ ನಡೆಸಿದ್ದರು.

 

ಪ್ರಣವ್ ಸಂಘಟನಾ ಚಾತುರ್ಯ ಗಮನಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅದೇ ವರ್ಷ ಅವರಿಗೆ ರಾಜ್ಯಸಭೆಯ ಟಿಕೆಟ್ ನೀಡಿದರು. ಇಂದಿರಾ ನಿಷ್ಠಾವಂತ ಎಂದು ಹೆಸರಾದ ಪ್ರಣವ್ ಪಕ್ಷದಲ್ಲಿ ಕ್ಷಿಪ್ರವಾಗಿ ಮೇಲಕ್ಕೇರಿದರು. 1980ರಿಂದ 1985ರವರೆಗೆ ಪ್ರಧಾನಿ ಅನುಪಸ್ಥಿತಿಯಲ್ಲಿ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದರು.ಪ್ರಣವ್ ವೃತ್ತಿಜೀವನದಲ್ಲಿ ಅಡೆತಡೆ ಇರಲಿಲ್ಲವೆಂದಲ್ಲ. 1985ರಿಂದ 1991ರವರೆಗೆ ಗ್ರಹಣ ಹಿಡಿದ ಸೂರ್ಯನಂತೆ ರಾಜಕೀಯ ಅಜ್ಞಾತವಾಸ ಅನುಭವಿಸಬೇಕಾಯಿತು. ಅದಕ್ಕೆ ಕಾರಣ ರಾಜೀವ್ ಜತೆಗಿನ ಮುನಿಸು. ಇಂದಿರಾ ಹತ್ಯೆಯ ನಂತರ ತಾವು ಪ್ರಧಾನಿಯಾಗಬೇಕೆಂಬ ಪರೋಕ್ಷ ಇಂಗಿತ ವ್ಯಕ್ತಪಡಿಸಿದ್ದರು.ಅದೇ ಅವರಿಗೆ ಮುಳುವಾಯ್ತು. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಅಂದಾಗ 1986ರಲ್ಲಿ ಕಾಂಗ್ರೆಸ್‌ನಿಂದ ಬೇರಾಗಿ ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಮೂರು ವರ್ಷಗಳ ನಂತರ ಮತ್ತೆ ತವರು ಪಕ್ಷಕ್ಕೆ ಮರಳಿದರು. ಪಿ.ವಿ. ನರಸಿಂಹರಾವ್ ಅವಧಿಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ಮತ್ತೆ ಅಧಿಪತ್ಯ ಗಳಿಸಿದರು.ರಾಜ್ಯಶಾಸ್ತ್ರ ಹಾಗೂ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಪ್ರಣವ್, ತಮ್ಮ ಸಹೋದ್ಯೋಗಿಗಳಲ್ಲಿ ಅಸೂಯೆ ಹುಟ್ಟಿಸುವಂತೆ ಇತಿಹಾಸ, ರಾಜಕೀಯಕ್ಕೆ ಸಂಬಂಧಿಸಿದ ಸಂಗತಿಗಳನ್ನು ಥಟ್ಟನೆ ನೆನಪಿಸಿಕೊಳ್ಳುತ್ತಿದ್ದರು.ರಾಜಕೀಯಕ್ಕೆ ಇಳಿಯುವ ಮುನ್ನ ಕಾಲೇಜು ಉಪನ್ಯಾಸಕರಾಗಿದ್ದ ಪ್ರಣವ್ ತಮ್ಮ ಹಳೆಯ ಅಭ್ಯಾಸ ಮರೆತಿರಲಿಲ್ಲ. ಸರಿಯಾಗಿ ಕೆಲಸ ಮಾಡಿಲ್ಲ ಅಂದಾಗ ತಮ್ಮ ಪಕ್ಷ ಅಥವಾ ವಿರೋಧ ಪಕ್ಷದಲ್ಲಿದ್ದ ಕಿರಿಯರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. 33 ಸಚಿವರ ಗುಂಪಿನ ನೇತೃತ್ವ ವಹಿಸಿದ್ದ ಅವರನ್ನು ರಾಜಕೀಯ ವಲಯದಲ್ಲಿ `ಜಿಒಎಂ ಮುಖರ್ಜಿ~ ಎಂದು ತಮಾಷೆಯಾಗಿ ಕರೆಯಲಾಗುತ್ತಿತ್ತು.ರಾಜಕೀಯ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಐದು ಪುಸ್ತಕ ಬರೆದಿದ್ದಾರೆ. ಅವರ ಸಂಪಾದಕೀಯತ್ವದಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸ ಕುರಿತ ಪುಸ್ತಕವೊಂದು ಹೊರಬಂದಿದೆ. ಅದರಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪಕ್ಷ ಮಿತಿಮೀರಿ ವರ್ತಿಸಿದ್ದನ್ನು ಒಪ್ಪಿಕೊಳ್ಳಲಾಗಿದೆ.1997ರಲ್ಲಿ ಅತ್ಯುತ್ತಮ ಸಂಸದೀಯ ಪಟು ಎಂಬ ಪ್ರಶಸ್ತಿಗೆ ಪಾತ್ರರಾದ ಪ್ರಣವ್, 2007ರಲ್ಲಿ ಪದ್ಮ ವಿಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry