ಸಂಕನೂರು: ನೀರಿಗೆ ಬರ

7

ಸಂಕನೂರು: ನೀರಿಗೆ ಬರ

Published:
Updated:

ಚಿತ್ತಾಪುರ: ಪ್ರತಿ ವರ್ಷ ಪೆಡಂಭೂತವಾಗಿ ಕಾಡುವ ನೀರಿನ ಸಮಸ್ಯೆ ಮತ್ತೆ ತಾಲ್ಲೂಕಿನ ಸಂಕನೂರು ಗ್ರಾಮಸ್ಥರನ್ನು ಭೀಕರವಾಗಿ ಕಾಡುತ್ತಿದೆ. ಇಡೀ ಗ್ರಾಮಕ್ಕೆ ಕುಡಿವ ನೀರಿನ ಮೂಲವಾಗಿದ್ದ ಏಕೈಕ ತೆರೆದ ಬಾವಿ ನೀರಿಲ್ಲದೆ ಸಂಪೂರ್ಣ ಬತ್ತಿದೆ. ಇರುವ ಎರಡು ಕೊಳವೆ ಬಾವಿಗಳು ಕೆಟ್ಟು ದುರಸ್ತಿ ಕಾಣದೆ ನಿಂತಿವೆ. ಹಗಲು ರಾತ್ರಿ ನೀರಿಗಾಗಿ ಜನರ ಹಾಹಾಕಾರ ಶುರುವಾಗಿದೆ.ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಅಂದಾಜು 3500 ಜನರು ವಾಸವಿದ್ದಾರೆ. ಆದರೆ, ಗ್ರಾಮದ ಜನರಿಗೆ ಕುಡಿವ ನೀರಿನ ಶಾಶ್ವತ ವ್ಯವಸ್ಥೆ ಮಾಡಲು ಸ್ಥಳೀಯ, ತಾಲ್ಲೂಕು ಮತ್ತು ಜಿಲ್ಲಾ ಆಡಳಿತಕ್ಕೆ ಇನ್ನೂವರೆಗೆ ಸಾಧ್ಯವಾಗಿಲ್ಲ. ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ಕಷ್ಟದ, ಯಾತನೆ ಜೀವನ ನಡೆಸುತ್ತಿದ್ದಾರೆ.ಇಡೀ ಗ್ರಾಮಕ್ಕೆ ಜೀವಸೆಲೆಯಾಗಿದ್ದ ತೆರೆದ ಬಾವಿ ಬತ್ತಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸುಡುವ ಬಿಸಿಲಿನಲ್ಲಿ ಕೊಡ ನೀರಿಗಾಗಿ ಮಹಿಳೆಯರು, ಮಕ್ಕಳು, ವಯೋವೃದ್ಧರು ಅಡವಿಯಲ್ಲಿ ಅಲೆದಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಜನರೊಂದಿಗೆ ಜಾನುವಾರುಗಳಿಗೂ ನೀರಿನ ಸಮಸ್ಯೆಯ ಬಿಸಿ ಜೋರಾಗಿ ತಟ್ಟಿದೆ. ಸ್ನಾನ ಮಾಡವುದಕ್ಕೆ ಲೆಕ್ಕ ಹಾಕಬೇಕಾದ ದಯನೀಯ ಸ್ಥಿತಿ ಉಂಟಾಗಿ ಆಡಳಿತದ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.ಗ್ರಾಮದ ಪಕ್ಕದ ಗುಡ್ಡದ ವಾರಿಯಲ್ಲಿ ಕೊರೆಯಲಾದ ಎರಡು ಕೊಳವೆ ಬಾವಿಗಳು ಕೆಟ್ಟು ದುರಸ್ತಿ ಕಾಣದೆ ನಿಂತು ನೀರಿನ ಸಮಸ್ಯೆ ದ್ವಿಗುಣಗೊಳಿಸಿದೆ. ದುರಸ್ತಿ ಮಾಡಿಸಿದರೆ ಒಂದೊಂದು ಕೊಳವೆ ಬಾವಿಯಿಂದ ದಿನಾಲೂ ಕನಿಷ್ಠವೆಂದರೂ 50 ರಿಂದ 60 ಕೊಡ ನೀರು ಲಭಿಸುತ್ತವೆ. ಆದರೆ, ಗ್ರಾಮ ಪಂಚಾಯಿತಿ ಆಡಳಿತ ಅವುಗಳ ದುರಸ್ತಿ ಕಡೆಗಣಿಸಿದೆ ಎಂದು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ಪ್ರಜಾವಾಣಿ ಮುಂದೆ ಗ್ರಾಮದ ಜನರು ಆರೋಪಿಸಿದ್ದಾರೆ.ಗ್ರಾಮದ ಜನರಿಗೆ ಕುಡಿವ ನೀರು ಸರಬರಾಜು ಮಾಡಲೆಂದು ಗ್ರಾಮಕ್ಕೆ ಹೊಂದಿಕೊಂಡು ಎರಡು ಮೇಲ್ಮಟ್ಟದ ಜಲ ಸಂಗ್ರಹಗಾರಗಳು ನಿರ್ಮಾಣ ಮಾಡಲಾಗಿದೆ. ಒಂದಂತೂ ನೀರು ಕಾಣದೆ ಸಂಪೂರ್ಣ ಶಿಥಿಲಗೊಂಡು ಧರೆಗುರುಳಲು ಸಿದ್ಧವಾಗಿದೆ. ಮತ್ತೊಂದು ನೂತನವಾಗಿ ನಿರ್ಮಾಣ ಮಾಡಿದರೂ ಕೊಡ ನೀರು ಗ್ರಾಮದಲ್ಲಿ ಸರಬರಾಜು ಮಾಡಿಲ್ಲ. ನೀರು ಸರಬರಾಜು ಮಾಡಲು ಗ್ರಾಮದಲ್ಲಿ ಇನ್ನೂವರೆಗೆ ಪೈಪ್‌ಲೈನ್ ವ್ಯವಸ್ಥೆ, ಸಾರ್ವಜನಿಕ ನಳದ ವ್ಯವಸ್ಥೆ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಸಂಪೂರ್ಣ ಬತ್ತಿದ ಬಾವಿ, ದುರಸ್ತಿ ಕಾಣದ ಕೊಳವೆ ಬಾವಿಯಿಂದ ಜನರು ತತ್ತರಿಸಿ ಗ್ರಾಮದಿಂದ 4 ಕಿ.ಮೀ. ದೂರದಲ್ಲಿರುವ ಗುಡ್ಡದ ವಾರಿಯಲ್ಲಿರುವ ನಡೆಯಲು ಬಾರದ ದಾರಿಯಲ್ಲಿ ಬೆಂಕಿಯಂತ  ಬಿಸಿಲಿನಲ್ಲಿ `ರಾಮಬಾವಿಗೆ~ ನಡೆದುಕೊಂಡು ಹೋಗಿ ನೀರು ತರುತ್ತಿದ್ದಾರೆ. ಒಂದು ಕುಟುಂಬದ ಇಬ್ಬರು ಹೋಗಿ ಅರ್ಧ ದಾರಿಗೊಬ್ಬರಂತೆ ಮನೆವರೆಗೆ ಕೊಡ ಹೊತ್ತುಕೊಂಡು ಬಂದು ನೀರಿನ ದಾಹ ತಣಿಸಿಕೊಳ್ಳುತ್ತಿದ್ದಾರೆ.ಗ್ರಾಮದ ಯುವ ಮುಖಂಡ ಹಣಮಂತ ಸೋಮನ್ ಅವರು ಗ್ರಾಮದ ಜನರು ನೀರಿಗಾಗಿ ಅನುಭವಿಸುತ್ತಿರುವ ತೊಂದರೆ. ಸಂಕಷ್ಟ, ಯಾತನೆ ಕಂಡು ಗ್ರಾಮ ಪಂಚಾಯಿತಿ ಆಡಳಿತದ ಗನಕ್ಕೆ ತಂದು ಸೋಮವಾರ ಬಾವಿಯಲ್ಲಿನ ಹೂಳು ತೆಗೆಸುತ್ತಿದ್ದಾರೆ. ಹೂಳು ತೆಗೆಸಿದರೆ ದಿನವೊಂದರಲ್ಲಿ ಕನಿಷ್ಟವೆಂದರೂ 12 ಬ್ಯಾರೆಲ್ ನೀರು ಸಿಗಬಹುದು ಎಂದು ಅವರು ನಿರೀಕ್ಷಿಸಿದ್ದಾರೆ.ಬಾವಿಯಲ್ಲಿ ಜಮಾವಣೆಯಾಗುವ ನೀರಿಗಾಗಿ ಕಾದು ಕುಳಿತು ಜನರು ನಿದ್ದೆಗೆಟ್ಟು ಮಧ್ಯರಾತ್ರಿಯಲ್ಲಿ ಸದ್ದುಗದ್ದಲ ಮಾಡದೆ ನೀರು ತರುತ್ತಿದ್ದಾರೆ. ನೀರಿಗಾಗಿ ಬೆಳಿಗ್ಗೆ ಬಾವಿಗೆ ಬರುವವರಿಗೆ ನೀರು ಸಿಗುವುದೇ ದುರ್ಲಭ. ಗ್ರಾಮದಿಂದ ಉತ್ತರಕ್ಕೆ ಒಂದು ಕಿ.ಮೀ ದೂರದಲ್ಲಿ ಗುಡ್ಡದ ವಾರಿಯಲ್ಲಿ ಹಳೆಯದಾದ ಬಾವಿಯಿದೆ. ಮಳೆಗಾಲದಲ್ಲಿ ನೀರು ಹರಿದು ಅದು ಈಗ ಸಂಪೂರ್ಣ ಹೂಳಿನಿಂದ ಮುಚ್ಚಿದೆ. ಅದರಲ್ಲಿನ ಹೂಳು ತೆಗೆಸಿ ಸ್ವಚ್ಛ ಮಾಡಿ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಂಡು, ವ್ಯವಸ್ಥೆ ಮಾಡಿದರೆ ನೀರಿನ ಸಮಸ್ಯೆ ನಿವಾರಣೆಯಾಗಬಹುದು ಎನ್ನುವುದು ಹಣಮಂತ ಸೋಮನ್ ಅವರ ಅಭಿಪ್ರಾಯವಾಗಿದೆ.ಗ್ರಾಮದ ಜನರು ಕುಡಿವ ನೀರಿನ ಗಂಭೀರ ಸಮಸ್ಯೆ ಎದುರಿಸಿ ಆತಂಕದ ಜೀವನ ನಡೆಸುತ್ತಿದ್ದರೂ ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಜನ ಪ್ರತಿನಿಧಿಗಳು ಗ್ರಾಮದತ್ತ ಸುಳಿದಿಲ್ಲ. ಜನರ ಸಮಸ್ಯೆಗೆ ಸ್ಪಂಧನೆ ಮಾಡಲು ಸಂಪೂರ್ಣ ವಿಫಲರಾಗಿ ನಿರ್ಲಕ್ಷಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry