ಭಾನುವಾರ, ಜನವರಿ 26, 2020
18 °C

ಸಂಕಷ್ಟಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ರಾಜ್ಯದ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಆದರೆ, ಅಧಿಕಾರದ ಕಿತ್ತಾಟದಲ್ಲಿ ಮಗ್ನರಾಗಿರುವ ರಾಜ್ಯ  ಸರ್ಕಾರದ  ಸಚಿವರು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಸಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆರೋಪಿಸಿದರು.



ಪಟ್ಟಣದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.



ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 20ಕ್ಕೂ ಹೆಚ್ಚು ಶಾಸಕರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ತೆಕ್ಕೆಗೆ ಸೆಳೆದು ಅನುಭವ ಇರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಈಗ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಕುರ್ಚಿಗೇ ಆಪರೇಷನ್ ಮಾಡಲು ಹೊರಟಿದ್ದಾರೆ. ಆಂತರಿಕ ಕಿತ್ತಾಟದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಯಾವುದೇ ಸಮಯದಲ್ಲಿ ಬಿದ್ದು ಹೋಗಬಹುದು ಎಂದು ಅವರು ಹೇಳಿದರು.



ಈ ಕ್ಷೇತ್ರ ಕಾಂಗ್ರೆಸ್‌ಗೆ ತವರು ಮನೆ ಇದ್ದಂತೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಸಂಘಟನೆಗಾಗಿ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು. ಟಿಕೆಟ್‌ಗಾಗಿ ಪೈಪೋಟಿ ಬೇಡ. ಪಕ್ಷದ ಹೈಕಮಾಂಡ್ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಕಾಂಗ್ರೆಸ್ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಲೆಳೆಯುವ ಸಂಸ್ಕೃತಿಯಿಂದ ಪಕ್ಷಕ್ಕೆ ಸೋಲಾಗಿದೆ ಎಂದರು.



ಕೆಪಿಸಿಸಿ ಸದಸ್ಯ ಅಸಗೋಡು ಜಯಸಿಂಹ ಮಾತನಾಡಿ, ದೇಶದಲ್ಲಿ ಇಂದಿರಾಗಾಂಧಿ ಅವರ ಕಾಲದಿಂದಲೂ ಬಡವರ ಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರೂಪಿಸಿದೆ. ಎಲ್ಲಾ ಧರ್ಮ, ಜಾತಿಗಳನ್ನು ಪೋಷಿಸಿದ ಕಾಂಗ್ರೆಸ್‌ಗೆ ತಾಲ್ಲೂಕು ಭದ್ರಕೋಟೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇಲ್ಲಿ ಜಯಭೇರಿ ಭಾರಿಸಬೇಕು. ಅದಕ್ಕಾಗಿ ಎಲ್ಲಾ ಕಾರ್ಯಕರ್ತರು, ಮುಖಂಡರು ಕೆಚ್ಚಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.



ಮುಖಂಡ ಎಚ್.ಪಿ. ರಾಜೇಶ್ ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರದ ಸಾಧನೆಗಳು ಎಂದು ಬಿಂಬಿಸುವ ಮೂಲಕ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಸಮಯದಲ್ಲಿ ಚುನಾವಣೆ ಎದುರಾಗಬಹುದು. ಟಿಕೆಟ್ ಯಾರಿಗೇ ಸಿಕ್ಕರೂ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಬರುವ ಫೆ. 4ರಂದು ಪಟ್ಟಣದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದರು.



`ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಮುಂದಿನ ಗುರಿ. ಹೈಕಮಾಂಡ್ ಯಾರಿಗೇ ಟಿಕೆಟ್ ಕೊಟ್ಟರೂ ನಾಯಕ ಜನಾಂಗದವರಿಗೆ ಕೊಡುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪಣ ತೊಡಬೇಕು ಎಂದು ವೈ. ದೇವೇಂದ್ರಪ್ಪ ಹೇಳಿದರು.



ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಯುವ ಘಟಕದ ಅಧ್ಯಕ್ಷ ಬಸವರಾಜ್ ಬಾಬು, ಮುಖಂಡರಾದ ಕೃಷ್ಣಮೂರ್ತಿ, ಜಯದೇವ ನಾಯ್ಕ, ಶಾಮರಾವ್, ಕಲ್ಲೇಶ್‌ರಾಜ್ ಪಟೇಲ್, ಎಸ್.ಕೆ. ರಾಮರೆಡ್ಡಿ, ಇಬ್ರಾಹಿಂ ಖಲೀಲ್, ಅಬ್ದುಲ್ ಲತೀಫ್ ಸಾಬ್, ಗಿರೀಶ್ ಒಡೆಯರ್, ಶಿವು ಅಸಗೋಡು, ವೆಂಕಟೇಶ ರೆಡ್ಡಿ, ಬೈರೇಶ್, ಶಂಭುಲಿಂಗಪ್ಪ, ಎ. ವೆಂಕಟೇಶ್ ಹಾಜರಿದ್ದರು. ಶೇಖರಪ್ಪ ಸ್ವಾಗತಿಸಿದರು. 

ಪ್ರತಿಕ್ರಿಯಿಸಿ (+)