ಸಂಕಷ್ಟದಲ್ಲಿಯೂ ಗೆಲುವಿನ ವಿಶ್ವಾಸ

7

ಸಂಕಷ್ಟದಲ್ಲಿಯೂ ಗೆಲುವಿನ ವಿಶ್ವಾಸ

Published:
Updated:
ಸಂಕಷ್ಟದಲ್ಲಿಯೂ ಗೆಲುವಿನ ವಿಶ್ವಾಸ

ಬೆಂಗಳೂರು: ಸೋಲು, ಗೆಲುವು... ಮತ್ತೆ ಸೋಲು... ಹೀಗೆ ಏರಿಳಿತದ ಹಾದಿಯಲ್ಲಿ ಸಾಗುತ್ತಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಆದರೆ, ಇನ್ನುಳಿದ ಪಂದ್ಯಗಳಲ್ಲಿ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಬೇಕಾದ ಒತ್ತಡ. ಇಲ್ಲವಾದರೆ, ಐಪಿಎಲ್ ಐದನೇ ಆವೃತ್ತಿಯಿಂದ `ಔಟ್~ ಆಗುವ ಆತಂಕ. ಈ ಸಂಕಷ್ಟದಲ್ಲಿಯೂ ಆತಿಥೇಯ ತಂಡ ಗೆಲುವಿನ ವಿಶ್ವಾಸ ಹೊಂದಿದೆ.ಈ ಆತಂಕ, ಹಿಂದಿನ ಎರಡೂ ಪಂದ್ಯಗಳಲ್ಲಿನ ಸೋಲು ಆರ್‌ಸಿಬಿ ತಂಡದ ಬೇಸರಕ್ಕೆ ಕಾರಣಗಳು. ಅದರಲ್ಲೂ ನಾಲ್ಕು ದಿನಗಳ ಹಿಂದೆ ಕಿಂಗ್ಸ್ ಇಲೆವೆನ್ ವಿರುದ್ಧ ಎದುರಾದ ನಿರಾಸೆ ಆತಿಥೇಯ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಅಷ್ಟೇ ಅಲ್ಲ ಬೌಲಿಂಗ್ ವಿಭಾಗದ ದೌರ್ಬಲ್ಯವನ್ನೂ ಇದು ಬಯಲು ಮಾಡಿದೆ.ಈ ಎಲ್ಲಾ ಸಂಕಷ್ಟವನ್ನು ಮೆಟ್ಟಿ ನಿಂತು ಆರ್‌ಸಿಬಿ ಭಾನುವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಆಡಬೇಕಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚಾರ್ಜರ್ಸ್ ವಿರುದ್ಧ ಗೆಲುವು ಸಾಧ್ಯವಾದರೆ, ಅದು ಆತಿಥೇಯ ತಂಡದ ವಿಶ್ವಾಸ ಹೆಚ್ಚಿಸಲಿದೆ.ಹಿಂದಿನ ಸೋಲನ್ನೂ ಮರೆಯಲು ವೇದಿಕೆಯಾಗಲಿದೆ. ಅಷ್ಟೇ ಅಲ್ಲ, ಅಗ್ರಸ್ಥಾನದಲ್ಲಿರುವ ಡೇರ್‌ಡೆವಿಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಅಂತಹ ಬಲಿಷ್ಠ ತಂಡಗಳ ಎದುರು ಮುಂಬರುವ ಪಂದ್ಯಗಳಲ್ಲಿ ಹೋರಾಡಲೂ ಆಟಗಾರರ ಮನೋಬಲ ಹೆಚ್ಚಾಗಲಿದೆ.ಐಪಿಎಲ್ ಐದನೇ ಆವೃತ್ತಿ ಈಗಾಗಲೇ ಅರ್ಧಕ್ಕೂ ಹೆಚ್ಚು ಹಾದಿ ಕ್ರಮಿಸಿದೆ. ಪ್ಲೇ ಆಫ್ ಪಂದ್ಯಗಳಲ್ಲಿ ಯಾವ ತಂಡಗಳು ಸೆಣಸಲಿವೆ ಎನ್ನುವ ಲೆಕ್ಕಾಚಾರವೂ ಶುರುವಾಗಿದೆ. ಆದ್ದರಿಂದ ಪ್ರತಿ ಪಂದ್ಯದ ಸೋಲು ಗೆಲುವಿನ ಲೆಕ್ಕಾಚಾರ ಮುಖ್ಯವಾಗಿದೆ. ಪ್ರತಿ ಸೋಲಿಗೂ ಭಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಆದ್ದರಿಂದ ಆರ್‌ಸಿಬಿ ಗೆಲುವಿನ ಹಾದಿಗೆ ಮರಳುವುದು ಅನಿವಾರ್ಯ.ಆತಿಥೇಯ ತಂಡದ ಬ್ಯಾಟಿಂಗ್‌ನಲ್ಲಿ ಒಬ್ಬರು ಕೈಕೊಟ್ಟರೆ ಇನ್ನೊಬ್ಬರು ಆಸರೆಯಾಗುತ್ತಲೇ ಬಂದಿದ್ದಾರೆ. ಎಲ್ಲಾ ಪಂದ್ಯಗಳಲ್ಲಿಯೂ ಅಬ್ಬರಿಸುತ್ತಿರುವ ಕ್ರಿಸ್ ಗೇಲ್ ಈ ತಂಡದ ಬಲಿಷ್ಠ ಶಕ್ತಿ. ಸೌರಭ್ ತಿವಾರಿ, ವಿರಾಟ್ ಕೊಹ್ಲಿ, ಮಯಾಂಕ್ ಅಗರ್‌ವಾಲ್, ಎ.ಬಿ. ಡಿವಿಲಿಯರ್ಸ್ ಸಹ ಇದ್ದಾರೆ.ತವರಿನ ತಂಡಕ್ಕೆ ಬೌಲಿಂಗ್ ವಿಭಾಗದ ಸಮಸ್ಯೆ ದೊಡ್ಡದಾಗಿದೆ. ವೇಗಿ ಜಹೀರ್ ಖಾನ್, ಕನ್ನಡಿಗ ವಿನಯ್ ಕುಮಾರ್ ಇದೇ ಕ್ರೀಡಾಂಗಣದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರು. ಆದ್ದರಿಂದ ಸ್ಪಿನ್ ಮೋಡಿಗಾರ ಮುತ್ತಯ್ಯ ಮುರಳೀಧರನ್ (ನಾಲ್ಕು ಪಂದ್ಯಗಳಿಂದ ಎಂಟು ವಿಕೆಟ್) ಅವರಿಗೆ ಅಂತಿಮ ಹನ್ನೊಂದರಲ್ಲಿ ಸ್ಥಾನ ಲಭಿಸುವ ಅವಕಾಶ ಹೆಚ್ಚಿದೆ. ಎರಡೂ ತಂಡಗಳು ಈ ಸಲದ ಐಪಿಎಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು ಎನ್ನುವುದೂ ವಿಶೇಷ.ಚಾರ್ಜರ್ಸ್ ಸುಲಭದ ತುತ್ತಲ್ಲ: `ಟೂರ್ನಿಯ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡುತ್ತಿರುವ ಡೆಕ್ಕನ್ ಚಾರ್ಜರ್ಸ್ ಆರ್‌ಸಿಬಿಗೆ ಸುಲಭದ ತುತ್ತು~ ಎಂದು ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಈ ತಂಡ ಬಲಿಷ್ಠ ತಂಡಗಳ ಎದುರು (ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್) ಗೆಲುವು ಸಾಧಿಸಿದಾಗ, ಮಾತಿನ ದಿಕ್ಕೇ ಬದಲಾಗಿದೆ. `ಟಿಕೆಟ್ ಸೋಲ್ಡ್ ಔಟ್~ ಎನ್ನುವ ಫಲಕ ಚಿನ್ನಸ್ವಾಮಿ ಕ್ರೀಡಾಂಗಣದ ಎದುರು ಶನಿವಾರ ಕಾಣಿಸಿದ್ದೇ ಇದಕ್ಕೆ ಸಾಕ್ಷಿ.`ಪ್ರಬಲ~ ಆರ್‌ಸಿಬಿ ಎದುರು ಚಾರ್ಜರ್ಸ್ ದೊಡ್ಡ ಸವಾಲು ಅಲ್ಲ ಅಂದವರೇ ಹೆಚ್ಚು. ಆದರೆ, ಈ ತಂಡ ಯಾವುದೇ ಸಂದರ್ಭದಲ್ಲೂ ಪುಟಿದೇಳುವ ಸಾಮರ್ಥ್ಯ ಹೊಂದಿದೆ. ಕ್ಯಾಮರೂನ್ ವೈಟ್, ನಾಯಕ ಕುಮಾರ ಸಂಗಕ್ಕಾರ ಹಾಗೂ ಶಿಖರ್ ಧವನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಗಾಯಗೊಂಡಿದ್ದ ಜೆ.ಪಿ. ಡುಮಿನಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry