ಬುಧವಾರ, ಅಕ್ಟೋಬರ್ 16, 2019
27 °C

ಸಂಕಷ್ಟದಲ್ಲಿ ಗೋಶಾಲೆ ಜಾನುವಾರು

Published:
Updated:

ಮೊಳಕಾಲ್ಮುರು: ಎದುರಾಗಿರುವ ಬರಸ್ಥಿತಿ ನಿಭಾಯಿಸಲು ಪೂರಕವಾಗಬೇಕಿದ್ದ ಸರ್ಕಾರದ ನಿಯಮಾವಳಿಗಳು ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆಯುತ್ತಿವೆ. ಭಾನುವಾರ ತಾಲ್ಲೂಕಿನ ರಾಯಾಪುರದ ರೇಷ್ಮೆಫಾರಂನಲ್ಲಿ ಸ್ಥಾಪಿಸಿರುವ ಗೋಶಾಲೆಯಲ್ಲಿ ನಡೆದ ಜಾನುವಾರುಗಳ ಮಾಲೀಕರು ಮೇವಿಗಾಗಿ ನಡೆಸಿದ ಹೋರಾಟ, ಪ್ರತಿಭಟನೆ ಸಮಸ್ಯೆಗೆ ಸಾಕ್ಷಿಯಾಯಿತು.ಗೋಶಾಲೆಯಲ್ಲಿ ಅಂದಾಜು 2,300- 2,500 ಜಾನುವಾರುಗಳಿವೆ. ಹಾಜರಾತಿ ಪುಸ್ತಕದಲ್ಲಿ 1,800 ಜಾನುವಾರು ನಮೂದಾಗಿವೆ. ಮೇವು ಸರಬರಾಜು ಅವಾಂತರದಿಂದಾಗಿ ಒಂದೆರೆಡು ಎತ್ತಿನ ಬಂಡಿಯಷ್ಟು ಬತ್ತದ ಹುಲ್ಲು ಮಾತ್ರ ಇದ್ದು, ಇದನ್ನು ಯಾವ ಜಾನುವಾರಿಗೆ ಹಾಕಬೇಕು ಎಂಬ ಗೊಂದಲಕ್ಕೆ ಒಳಗಾದ ಮಾಲೀಕರು ಪ್ರತಿಭಟನೆ ಹಾದಿ ತುಳಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವೆಂಕಟಪ್ಪ ಅವರಿಗೆ ಘೇರಾವ್ ಹಾಕಿದರು ಎಂದು ವರದಿಯಾಗಿದೆ.ಡಿ. 15ರಂದು ಇಲ್ಲಿ ಗೋಶಾಲೆ ಆರಂಭವಾಗಿದೆ. ಪಶುಇಲಾಖೆ ಪ್ರಕಾರ ಪ್ರತಿ ಜಾನುವಾರಿಗೆ ದಿನಕ್ಕೆ 5 ಕೆಜಿ ಮೇವು ನೀಡಬೇಕು, ಈ ಪ್ರಕಾರ ಪ್ರತಿದಿನ 3.5-4 ಲೋಡ್ ಮೇವು ಬೇಕಿದೆ. ಆದರೆ ದಿನಕ್ಕೆ ಬರುತ್ತಿರುವುದು 2-3 ಲೋಡ್ ಈಗ ಅದೂ ಸ್ಥಗಿತವಾಗಿದೆ. ಪರಿಣಾಮ ಭಾನುವಾರ ಜಾನುವಾರುಗಳು ಸಂಜೆ 6ಗಂಟೆಯಾದರೂ ಮೇವಿಗಾಗಿ ಕಾದು ಖಾಲಿ ಹೊಟ್ಟೆಯಲ್ಲಿ ವಾಪಾಸ್ ಆದುದು ನಿರ್ಲಕ್ಷ್ಯಕ್ಕೆ ಸೂಕ್ತ ಸಾಕ್ಷಿ ಎಂದು ಗ್ರಾ.ಪಂ. ಅಧ್ಯಕ್ಷ ಅಜ್ಜಪ್ಪ, ಮಾಜಿ ಅಧ್ಯಕ್ಷ ಜಿ.ಪಿ. ಸುರೇಶ್, ಕರವೇ ಅಧ್ಯಕ್ಷ ಬಸಣ್ಣ, ಬಸವರಾಜ್ ದೂರಿದರು.ಅನುದಾನ ಇಲ್ಲ: ಬರಪರಿಹಾರ ಯೋಜನೆಯಲ್ಲಿ ಕ್ರಮ ಕೈಗೊಳ್ಳಲು ತಾಲ್ಲೂಕು ಆಡಳಿತ ಬಳಿ ಅನುದಾನ ಖಾಲಿಯಾಗಿದೆ. ್ಙ 10 ಲಕ್ಷ ಬೇಕು ಎಂದು ಮನವಿ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.ಗೋಶಾಲೆಯಲ್ಲಿ ಸಗಣಿ ಎತ್ತುವ ಕಾರ್ಯ ಮಾಡುತ್ತಿರುವ 6 ಮಂದಿ ದಿನಗೂಲಿಗಳಿಗೆ ಈವರೆಗೆ ನಯಾಪೈಸೆ ಕೂಲಿ ನೀಡಿಲ್ಲ. ಹೆಚ್ಚು ನೌಕರರನ್ನು ತೆಗೆದುಕೊಳ್ಳಿ ಎಂಬ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ. ಉದ್ಯೋಗಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದ್ದರೂ ಗೋಶಾಲೆಯಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಸ್ಥಳೀಯ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳನ್ನು ವಿಚಾರಿಸಿದರೆ ಅವರು `ಜಿ.ಪಂ. ಸಿಇಒ ಅನುಮತಿ ನೀಡಿದಲ್ಲಿ ನಿರ್ಮಾಣ ಮಾಡುತ್ತೇವೆ~ ಎಂದು ಸಮಸ್ಯೆಯಿಂದ ಜಾರಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಹೀಗಿದೆ ಲೆಕ್ಕಾಚಾರ: ಮೇವು ತರುವ ನಿಯಮಾವಳಿಗಳನ್ನು ತಿದ್ದುಪಡಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೇವು ಸಿಗುವ ಸಾಧ್ಯತೆಗಳು ತೀರಾ ಕ್ಷೀಣ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಹೇಳುತ್ತಾರೆ.ಸರ್ಕಾರ ಪ್ರಸ್ತುತ ಒಂದು ಟನ್ ಭತ್ತದ ಹುಲ್ಲಿಗೆ  2500 ಹಾಗೂ ಸೆಪ್ಪೆಗೆ  2 ಸಾವಿರ, ಪ್ರತಿ ಲೋಡ್ ಸಾರಿಗೆ ವೆಚ್ಚಕ್ಕೆ ್ಙ 6 ಸಾವಿರ ನಿಗದಿ ಮಾಡಿದೆ. ಅದೂ ಸಾರಿಗೆ ದೂರ ಎರಡೂ ಕಡೆ ಸೇರಿ 150 ಕಿಮೀ ಮೀರುವಂತಿಲ್ಲ. ಈಗ ಸಿರುಗುಪ್ಪ ಪ್ರದೇಶದಿಂದ ಮೇವು ತರಲಾಗುತ್ತಿದೆ. ಪ್ರತಿ ಲೋಡ್‌ಗೆ  20 ಸಾವಿರ ಬೇಕಿದೆ, ಸರ್ಕಾರ ನೀಡುವುದು ಹೆಚ್ಚು ಎಂದರೆ  12 ಸಾವಿರ, ಉಳಿದಿದ್ದು ಹೇಗೆ ನಿಭಾಯಿಸಬೇಕು ಎಂದು ಹೇಳುತ್ತಾರೆ.ಮೇವು ತರುವ ಕಾರ್ಯಕ್ಕೆ ಒಬ್ಬರನ್ನು ಮಾತ್ರ ನಿಗದಿ ಮಾಡಲಾಗಿದೆ, ಮತ್ತೊಬ್ಬರನ್ನು ಹೊಣೆ ನೀಡಿ  ಎಂದರೆ ಕೇಳುತ್ತಿಲ್ಲ. ಯಾವುದೇ ಜನಪ್ರತಿನಿಧಿಗಳು ಇತ್ತ ತಲೆಹಾಕಿ ಸಮಸ್ಯೆ ಕೇಳುತ್ತಿಲ್ಲ, `ಜಾನುವಾರುಗಳು ಮತ ಹಾಕುವುದಿಲ್ಲ~ ಎಂಬ ಭಾವನೆ ಜನಪ್ರತಿನಿಧಿಗಳಿಗೆ ಇರಬಹುದು. ತಾಲ್ಲೂಕಿನ ಎಲ್ಲಾ ಗೋಶಾಲೆಗಳಲ್ಲಿಯೂ ಸಮಸ್ಯೆ ಸಮನಾಗಿದೆ, ಇದು ಮುಂದುವರಿದಲ್ಲಿ ಪ್ರತಿಭಟನೆ ಹಾದಿ ಅನಿವಾರ್ಯ ಆಗುತ್ತದೆ ಎಂದು ಜಾನುವಾರು ಮಾಲೀಕರು ಎಚ್ಚರಿಸಿದರು.

Post Comments (+)