ಭಾನುವಾರ, ಡಿಸೆಂಬರ್ 8, 2019
21 °C
ಐಪಿಎಲ್‌ ಬೆಟ್ಟಿಂಗ್‌: ಪಟ್ಟು ಬಿಡದ ಶ್ರೀನಿವಾಸನ್

ಸಂಕಷ್ಟದಲ್ಲಿ ಮೇಯಪ್ಪನ್

Published:
Updated:
ಸಂಕಷ್ಟದಲ್ಲಿ ಮೇಯಪ್ಪನ್

ಮುಂಬೈ (ಪಿಟಿಐ/ಐಎಎನ್‌ಎಸ್‌): ಐಪಿಎಲ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿ ವೇಳೆ ನಡೆದಿದ್ದ ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆ  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ (ಬಿಸಿಸಿಐ) ಎನ್‌. ಶ್ರೀನಿವಾಸನ್‌ ಅಳಿಯ ಗುರುನಾಥ್‌ ಮೇಯಪ್ಪನ್‌ ವಿರುದ್ಧ ಮುಂಬೈ ಪೊಲೀಸರು ಶನಿವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ.ಕ್ರೈಬ್ರಾಂಚ್‌ ಪೊಲೀಸರು ಇಲ್ಲಿನ ನ್ಯಾಯಾಲಯದಲ್ಲಿ ಸಲ್ಲಿಸಿದ 11,609 ಪುಟಗಳ ಆರೋಪಪಟ್ಟಿಯಲ್ಲಿ ನಟ ವಿಂದೂ ದಾರಾಸಿಂಗ್‌ ಮತ್ತು ಪಾಕಿಸ್ತಾನದ ಆಂಪೈರ್‌ ಅಸದ್‌ ರವೂಫ್‌ ಹೆಸರೂ ಸೇರಿದೆ.ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಸಿಇಒ ಮೇಯಪ್ಪನ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ 415, 420 ಮತ್ತು 417 ಕಲಂ ಪ್ರಕಾರ (ಮೋಸ, ಜೂಜಾಟ, ಪಿತೂರಿ ಹಾಗೂ ನಕಲಿ ಸಹಿ) ಆರೋಪ ದಾಖಲಿಸಲಾಗಿದೆ.ಆರೋಪಪಟ್ಟಿಯಲ್ಲಿ ಮೇಯಪ್ಪನ್‌ ಹೆಸರು ಕಾಣಿಸಿಕೊಂಡಿದ್ದು, ಎನ್‌. ಶ್ರೀನಿವಾಸನ್‌ಗೆ ದೊಡ್ಡ ಆಘಾತ ವಾಗಿ ಪರಿಣಮಿಸಿದೆ. ಆದರೆ ಪಟ್ಟುಬಿಡಲು ಸಿದ್ಧರಿಲ್ಲದ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವುದಾಗಿ ಪುನರುಚ್ಚರಿಸಿದ್ದಾರೆ. ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆ ಸೆ. 29 ರಂದು ಚೆನ್ನೈನಲ್ಲಿ ನಡೆಯಲಿದೆ.‘ಇದು ಗುರುನಾಥ್‌ಗೆ ಸಂಬಂಧಿಸಿದ ವಿಚಾರ. ನನಗೆ ಈ ವಿಷಯದ ಜೊತೆ ಯಾವುದೇ ಸಂಬಂಧವಿಲ್ಲ. ನಾನು ಏಕೆ ರಾಜೀನಾಮೆ ನೀಡಬೇಕು? ನಾನು ಅನರ್ಹಗೊಂಡಿಲ್ಲ.  ನಿಮಗೆ ನನ್ನನ್ನು ಬಲವಂತವಾಗಿ ಹೊರದಬ್ಬಲು ಸಾಧ್ಯವಿಲ್ಲ. ಇನ್ನೊಂದು ಅವಧಿಗೆ ಅಧ್ಯಕ್ಷನಾಗಲು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ಎಂದಿದ್ದಾರೆ.ಮೇಯಪ್ಪನ್‌, ವಿಂದೂ ಹಾಗೂ ರವೂಫ್‌ ವಿರುದ್ಧ ಬೆಟ್ಟಿಂಗ್‌ ಪ್ರಕರಣಕ್ಕೆ ಮಾತ್ರ ಆರೋಪಪಟ್ಟಿ ಸಲ್ಲಿಸಲಾಗಿದೆ. ಇವರು ‘ಸ್ಪಾಟ್‌ ಫಿಕ್ಸಿಂಗ್‌’ನಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್‌ 21ಕ್ಕೆ ನಡೆಯಲಿದೆ.‘ಮೇಯಪ್ಪನ್‌ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಇತರರಿಗೆ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವಷ್ಟು ಸಾಕ್ಷ್ಯಗಳು ತನಿಖಾ ಅಧಿಕಾರಿಗಳಿಗೆ ದೊರೆತಿವೆ. ತಂಡದ ಯೋಜನೆ, ಪಿಚ್‌ನ ಪರಿಸ್ಥಿತಿ, ಅಂತಿಮ ಹನ್ನೊಂದರ ಬಳಗದ ವಿವರ ಹಾಗೂ ಬ್ಯಾಟಿಂಗ್‌ ಕ್ರಮಾಂಕಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅವರು ನೀಡಿದ್ದಾರೆ’ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.ಮೇಯಪ್ಪನ್‌ ತಂಡದ ಮಾಹಿತಿಗಳನ್ನು ವಿಂದೂಗೆ ನೀಡಿದ್ದು, ಅವರು ಅದನ್ನು ಬುಕ್ಕಿಗಳಾದ  ಪವನ್‌ ಜೈಪುರ, ಸಂಜಯ್‌ ಜೈಪುರ ಹಾಗೂ ಜುಪಿಟರ್‌ಗೆ ನೀಡಿದ್ದಾರೆ. ಮೇಯಪ್ಪನ್‌ ಅವರನ್ನು ಮೇ 25 ರಂದು ಬಂಧಿಸಲಾಗಿತ್ತು. ಜೂನ್‌ 3 ರಂದು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.ವಿಂದೂ ಹಾಗೂ ಮೇಯಪ್ಪನ್‌ ನಡುವಿನ ದೂರವಾಣಿ ಸಂಭಾಷಣೆಯ ವಿವರಗಳು ತನಿಖಾ ಅಧಿಕಾರಿಗಳಿಗೆ ದೊರೆತಿದೆ. ವಿಂದು ನೆರವಿನಿಂದ ಮೇಯಪ್ಪನ್‌ ಹೇಗೆ ಬೆಟ್ಟಿಂಗ್‌ ನಡೆಸುತ್ತಿದ್ದರು ಎಂಬುದನ್ನೂ ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.ಆರೋಪಿಗಳು ನಕಲಿ ದಾಖಲೆಗಳನ್ನು ನೀಡಿ 40 ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳನ್ನು ಖರೀದಿಸಿರುವುದು ತನಿಖೆಯ ವೇಳೆ ಕಂಡುಬಂದಿದೆ ಎಂದು ಮುಂಬೈ ಪೊಲೀಸ್‌ ಜಂಟಿ ಆಯುಕ್ತ ಹಿಮಾನ್ಶು ರಾಯ್‌ ಸುದ್ದಿಗಾರರಿಗೆ ತಿಳಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ 205 ಸಾಕ್ಷಿಗಳಿಂದ ಮಾಹಿತಿ ಪಡೆಯಲಾಗಿದ್ದು, 150 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ದೂರವಾಣಿ ಕರೆಗಳ ವಿವರ, ಸಿಸಿಟಿವಿ ದೃಶ್ಯಾವಳಿ, ಸಿಮ್‌ ಕಾರ್ಡ್‌ ವಿವರ ಹಾಗೂ ಇತರ ಸಾಕ್ಷ್ಯಗಳನ್ನು ಪೊಲೀಸರು ಒದಗಿಸಿದ್ದಾರೆ.ಬುಕ್ಕಿಗಳಾದ ಸಂಜಯ್‌ ಹಾಗೂ ಪವನ್‌ ಸಹೋದರರು ಪಾಕ್‌ ಅಂಪೈರ್‌ ರವೂಫ್‌ಗೆ ಉಡುಗೊರೆಗಳನ್ನು ನೀಡಿರು ವುದು ಕೂಡಾ ತನಿಖೆಯ ವೇಳೆ ಬಯಲಾಗಿದೆ.ಐಪಿಎಲ್‌ ಪಂದ್ಯಗಳ ವೇಳೆ ಮೇಯಪ್ಪನ್‌ ಕ್ರೀಡಾಂಗಣದಿಂದ ನೀಡುತ್ತಿದ್ದ ಮಾಹಿತಿಗಳನ್ನು ವಿಂದೂ ಬುಕ್ಕಿಗಳಿಗೆ ರವಾನಿಸುತ್ತಿದ್ದರು.

2013ರ ಮೇ 12 ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ತಾನ ರಾಯಲ್ಸ್‌ ನಡುವಿನ ಪಂದ್ಯದ ವೇಳೆ ನಡೆದ ಬೆಟ್ಟಿಂಗ್‌ನ ವಿವರ ಪೊಲೀಸರಿಗೆ ದೊರೆತಿದೆ. ಈ ಪಂದ್ಯಕ್ಕೆ ಮುನ್ನ ವಿಂದೂಗೆ ಕರೆ ಮಾಡಿದ್ದ ಮೇಯಪ್ಪನ್‌ ‘ನನ್ನ ತಂಡ ಈ ಪಂದ್ಯದಲ್ಲಿ 130 ರಿಂದ 140 ರನ್‌ ಗಳಿಸುತ್ತದೆ’ ಎಂದಿದ್ದರು ಎನ್ನಲಾಗಿದೆ. ಈ ಪಂದ್ಯದಲ್ಲಿ ಸೂಪರ್‌ ಕಿಂಗ್ಸ್‌ ತಂಡ ಸೋಲು ಅನುಭವಿಸಿತ್ತು.ಮೇ 15 ರಂದು ಸಂಜೆ 4.00 ಗಂಟೆಗೆ ವಿಂದೂ, ಜೈಪುರ ಸಹೋದರರಿಗೆ ಕರೆ ಮಾಡಿ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಜೊತೆಗಿನ ಪಂದ್ಯದ ಕುರಿತು ಮಾತನಾಡಿದ್ದಾರೆ. ಈ ಪಂದ್ಯದಲ್ಲಿ ನೈಟ್‌ ರೈಡರ್ಸ್‌ ಗೆಲುವು ಪಡೆಯುತ್ತದೆ ಎಂದು ಮೇಯಪ್ಪನ್‌ ನುಡಿದಿದ್ದು, ಅವರು ಹೇಳಿದ್ದು ನಿಜವಾಗಿದೆ ಎಂಬ ವಿವರ ಆರೋಪಪಟ್ಟಿಯಲ್ಲಿದೆ.ಏಪ್ರಿಲ್‌ 12 ಹಾಗೂ ಮೇ 13ರ ನಡುವಿನ ಅವಧಿಯಲ್ಲಿ ವಿಂದೂ ಮತ್ತು ರವೂಫ್‌ ಕನಿಷ್ಠ 80 ಕ್ಕೂ ಅಧಿಕ ಸಲ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದು ಕೂಡಾ ತನಿಖೆಯ ವೇಳೆ ಕಂಡುಬಂದಿದೆ.‘ನಾನು ತಪ್ಪು ಮಾಡಿಲ್ಲ’

ಕರಾಚಿ (ಪಿಟಿಐ):
ಬುಕ್ಕಿಗಳ ಜೊತೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದಿರುವ ಪಾಕಿಸ್ತಾನದ ಅಂಪೈರ್‌ ಅಸದ್‌ ರವೂಫ್‌, ‘ನಾನು ತಪ್ಪು ಮಾಡಿಲ್ಲ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)