ಸಂಕಷ್ಟದ ಸ್ಥಿತಿಯಲ್ಲಿ ಅಮೃತ್‌ಮಹಲ್‌ ರಾಸು

7

ಸಂಕಷ್ಟದ ಸ್ಥಿತಿಯಲ್ಲಿ ಅಮೃತ್‌ಮಹಲ್‌ ರಾಸು

Published:
Updated:

ಚಿಕ್ಕಮಗಳೂರು: ದೇಶದ ಉತ್ಕೃಷ್ಟ ತಳಿಯ ಅಮೃತ್‌ಮಹಲ್‌ ರಾಸುಗಳು ಜಿಲ್ಲೆಯ ತರೀಕೆರೆ ಮತ್ತು ಕಡೂರು ತಾಲ್ಲೂಕಿನ ಅಮೃತ್‌ಮಹಲ್‌ ಕಾವಲುಗಳಲ್ಲಿ ಈಗ ಸರಿಯಾದ ಪೋಷಣೆ ಮತ್ತು ನಿರ್ವಹಣೆ ಇಲ್ಲದೆ ಅಳಿವನಂಚಿಗೆ ತಲುಪಿವೆ.ಕಾಯಂ ಸಿಬ್ಬಂದಿ ಕೊರತೆ­ಯಿಂದಾಗಿ ಈ ತಳಿ ಸಂವರ್ಧನಾ ಕೇಂದ್ರ­ಗಳು ಅನಾದರಕ್ಕೆ ತುತ್ತಾಗಿವೆ. ಕೊಟ್ಟಿಗೆಗಳಲ್ಲಿ ಸೆಗಣಿ ಬಾಚುವವರಿಲ್ಲ. ರಾಸುಗಳಿಗೆ ಕಾಲಕಾಲಕ್ಕೆ ಮೇವು ಒದಗಿ­ಸು­ತ್ತಿಲ್ಲ. ಕೊಟ್ಟಿಗೆಯಿಂದ ಹೊರ­ಗಟ್ಟಿಕೊಂಡು ಹೋಗಿ ಮೇಯಿಸಲು ಅಗತ್ಯ ಸಂಖ್ಯೆಯ ಗೋಪಾಲಕರು ಇಲ್ಲ. ರಾಶಿ ರಾಶಿಬಿದ್ದಿರುವ ಸೆಗಣಿ,ಗಂಜಲದ ತಿಪ್ಪೆಗುಂಡಿಯಲ್ಲಿ ರಾಸುಗಳು ಬಿದ್ದುಕೊಂಡಿವೆ.ತರೀಕೆರೆ ತಾಲ್ಲೂಕಿನ ಅಜ್ಜಂಪುರ­ದಲ್ಲಿರುವ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ರಾಸುಗಳ ಸಂವರ್ಧನೆಗಾಗಿ ಅಳವಡಿಸಿದ್ದ ಸೌಕರ್ಯಗಳು ಬಳಕೆಯಾಗುತ್ತಿಲ್ಲ. ಕೊಟ್ಟಿಗೆಗಳಲ್ಲಿ ಅಕ್ಷರಶಃ ತಿಪ್ಪೆಗುಂಡಿ ನಿರ್ಮಾಣವಾಗಿದ್ದು, ಅದರ ಮೇಲೆಯೇ ಮಲಗೇಳುವ ಶ್ವೇತ­ವರ್ಣದ ರಾಸುಗಳು ಬಣ್ಣ ಬದಲಿಸಿವೆ. ಕೊಚ್ಚೆಗುಂಡಿಯಲ್ಲಿ ನಿಲ್ಲುವುದರಿಂದ ರಾಸುಗಳ ಕಾಲಿನ ಗೊರಸುಗಳಲ್ಲಿ ಗಾಯಗಳು ಉಂಟಾಗಿವೆ.ಅಜ್ಜಂಪುರ, ಹಬ್ಬನಘಟ್ಟ, ಬಾಸೂರು, ಲಿಂಗದಹಳ್ಳಿ, ಚಿಕ್ಕ ಎಮ್ಮಿ­ಗನೂರು, ರಾಮಗಿರಿ, ಬೀರೂರು ಕಾವಲುಗಳಲ್ಲಿ ಸುಮಾರು 1,317 ಅಮೃತ್‌­ಮಹಲ್ ರಾಸುಗಳಷ್ಟೇ ಉಳಿದಿವೆ. ಬೀರೂರು ಕೇಂದ್ರದಲ್ಲಿರುವ 62 ಬೀಜದ ಹೋರಿಗಳು ತಳಿ ಅಭಿವೃದ್ಧಿಗೆ ಬಳಕೆಯಾಗುತ್ತಿವೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ  63 ಅಮೃತ್ ಮಹಲ್ ಕಾವಲುಗಳಿಗೆ ಅಜ್ಜಂಪುರದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ ಪ್ರಧಾನ ಕಚೇರಿ. ಅಧಿಕಾರಿಗಳ ಅನುಕೂಲಕ್ಕಾಗಿ ಅಜ್ಜಂಪುರ­ದಲ್ಲಿರುವ ಕೇಂದ್ರವನ್ನು ಬೀರೂರಿಗೆ ಸ್ಥಳಾಂತರಿಸುವ ಹುನ್ನಾರವೂ ನಡೆಯುತ್ತಿದೆ ಎನ್ನು­ತ್ತಾರೆ ಅಮೃತ ಮಹಲ್‌ ಕಾವಲುಗಳ ಮೇಲೆ ಅಧ್ಯಯನ ನಡೆಸುತ್ತಿರುವ ತಿಪಟೂರಿನ ಮನೋಹರ್‌.ಈ ರಾಸುಗಳನ್ನು ಕಾಯುವುದಕ್ಕೆ ಕಾಯಂ ನೌಕರರಿಲ್ಲ. 33 ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಗೋಪಾಲಕರಿಗೆ ನಾಲ್ಕೈದು ತಿಂಗಳಿಂದ ಸಂಬಳವೂ ಸಿಕ್ಕಿಲ್ಲ. ಪ್ರತಿದಿನ ಇಬ್ಬರು ಗೋಪಾಲಕರು ಕೆಲಸಕ್ಕೆ ಹಾಜರಾದರೆ ಹೆಚ್ಚು. ಹಾಜರಿ ಪುಸ್ತಕದಲ್ಲಿ ಮಾತ್ರ ಎಲ್ಲರೂ ಹಾಜರಿ! ಎಂದು ದೂರು­ತ್ತಾರೆ ಸ್ಥಳೀಯರು.ಕಳೆದ ಸರ್ಕಾರದ ಅವಧಿಯಲ್ಲಿ ಅಜ್ಜಂಪುರ ಕೇಂದ್ರ ಕಚೇರಿಗೆ 5 ಕೋಟಿ ಅನುದಾನ ಸಿಕ್ಕಿದೆ. ಕಾವಲು ನಿರ್ವಹಣೆಗೆ ಪ್ರತಿ ವರ್ಷ  ₨25 ಲಕ್ಷ  ಅನುದಾನ ಲಭಿಸುತ್ತಿದೆ. ಆದರೂ ಅಮೃತ್‌ಮಹಲ್ ರಾಸುಗಳಿಗೆ ಮಾತ್ರ ನರಕಯಾತನೆಯಿಂದ ಮುಕ್ತಿ ಸಿಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry