ಶನಿವಾರ, ಜೂನ್ 6, 2020
27 °C

ಸಂಕೇತಿಗಳ ಹಿರಿಮೆ ಬೆಳೆಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕೇತಿಗಳ ಹಿರಿಮೆ ಬೆಳೆಸಲು ಸಲಹೆ

ಶಿವಮೊಗ್ಗ: ಕೇವಲ ಐವತ್ತು ವರ್ಷಗಳ ಹಿಂದಷ್ಟೇ ಉಚ್ಛ್ರಾಯ ಸ್ಥಾನದಲ್ಲಿದ್ದ ಸಂಕೇತಿ ಸಮುದಾಯ ಇಂದು ದುಃಸ್ಥಿತಿ ತಲುಪಿರುವುದು ನಮ್ಮ ದೌರ್ಭಾಗ್ಯ ಎಂದು ಉದ್ಯಮಿ ಬಿ.ಎನ್.ವಿ. ಸುಬ್ರಹ್ಮಣ್ಯ ವಿಷಾದ ವ್ಯಕ್ತಪಡಿಸಿದರು.ಇಲ್ಲಿಗೆ ಸಮೀಪದ ಮತ್ತೂರಿನಲ್ಲಿ ಹಮ್ಮಿಕೊಂಡ ಮೂರು ದಿನಗಳ ವಿಶ್ವ ಸಂಕೇತಿ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಬದುಕು ಕಟ್ಟಿಕೊಳ್ಳಲು ಹರಿದು ಹಂಚಿಹೋದ ನಮ್ಮಲ್ಲಿ ಸಂಸ್ಕೃತಿ, ವೇದ, ಆಚರಣೆಯ ಮೂಲದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಭಾಷೆ ಮತ್ತು ನಿತ್ಯದ ಬದುಕಿನಲ್ಲಷ್ಟೇ ಬದಲಾವಣೆಗಳಾಗಿವೆ. ಆದರೂ ಪಾಶ್ಚಿಮಾತ್ಯ ಅನುಕರಣೆಯಿಂದ ಇಂತಹ ದುಃಸ್ಥಿತಿ ತಲುಪಿದ್ದೇವೆ ಎಂದು ಸೂಚ್ಯವಾಗಿ ಹೇಳಿದರು.ಮುಂದಿನ ಜನಾಂಗ, ‘ನಮಗಾಗಿ ಏನು ಉಳಿಸಿದ್ದೀರಿ?’ ಎಂದು ಕೇಳಿದರೆ ನಮಲ್ಲಿ ಉತ್ತರವಿಲ್ಲ. ಆದ್ದರಿಂದ ವೇದ-ಉಪನಿಷತ್‌ಗಳಲ್ಲಿ ಸಾಕಷ್ಟು ಕೊಡುಗೆ ನೀಡಿದ ಸಮುದಾಯದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಸಂಕೇತಿಗಳ ಮೇಲಿದೆ ಎಂದು ಹೇಳಿದರು.ಕೇವಲ ಐದು ಸಾವಿರ ಕುಟುಂಬಗಳು ಇರುವ ಸಮುದಾಯದಲ್ಲಿ ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಹಣ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಕಾರಣ ಎಂದ ಬೇಸರ ವ್ಯಕ್ತಪಡಿಸಿದ ಅವರು, ಬೇರೆ ಬೇರೆ ಇರುವುದು ನಮ್ಮ ಸಂಸ್ಕೃತಿ ಅಲ್ಲ. ಭೇದ-ಭಾವವಿಲ್ಲದೇ, ಒಂದಾಗಿರುವುದು ಸಮುದಾಯದ ಪ್ರತೀಕ ಇದನ್ನು ಯುವ ಜನಾಂಗ ಅರಿಯಬೇಕು ಎಂದು ತಿಳಿಸಿದರು.ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾಭವನದ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಮಾತನಾಡಿ, ಬದುಕಿಗಾಗಿ ಎಲ್ಲರೂ ಒಟ್ಟಾಗಿಯೇ ವಲಸೆ ಬಂದಿದ್ದೇವೆ. ನೆಲೆ ಕಂಡುಕೊಳ್ಳುವಾಗಲೂ ಜತೆಗಿದ್ದೆವು. ಆದರೆ, ಈಗ ಯಾಕೆ ಈ ಭಿನ್ನತೆ? ಎಂದು ಪ್ರಶ್ನಿಸಿದರು.ಸಂಕೇತಿಗಳಿಗೆಂದು ಗುರುತಿಸಿಕೊಳ್ಳಲು ಇರುವುದು ನಮ್ಮ ಭಾಷೆ ಮಾತ್ರ. ಹಾಗಾಗಿ, ಲಿಪಿ ಇಲ್ಲದ ಭಾಷೆಯಾದರೂ ಅದು ಅಳಿದುಹೋಗಲು ಬಿಡುವುದಿಲ್ಲ. ಎಂತಹ ಆಧುನಿಕತೆ ಅಲೆಯಲ್ಲಿಯೂ ನಾವು ತೇಲಿ ಹೋಗುವುದಿಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಆಚಾರ-ವಿಚಾರಗಳನ್ನು ಯುವಪೀಳಿಗೆಗೆ ಅರ್ಥಪೂರ್ಣವಾಗಿ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.ನೀತಾ ಸುಬ್ರಹ್ಮಣ್ಯ, ಗೌರವಾಧ್ಯಕ್ಷ ಮಾರ್ಕಂಡೇಯ ಅವಧಾನಿ ದಂಪತಿ, ನಾಸಾ ಅಧ್ಯಕ್ಷ ಕೇಶವಕುಮಾರ್ ದಂಪತಿ, ಗಮಕ ಕಲಾವಿದ ವಿದ್ವಾನ್ ಕೇಶವಮೂರ್ತಿ, ಸಮ್ಮೇಳನದ ಕಾರ್ಯಾಧ್ಯಕ್ಷ ಹೊಸಹಳ್ಳಿ ವೆಂಕಟರಾಮ್, ಸಮುದಾಯ ಅಧ್ಯಯನ ಕೇಂದ್ರದ ಡಾ.ಪ್ರಣತಾರ್ತಿ ಹರನ್ ಮತ್ತಿತರರು ಉಪಸ್ಥಿತರಿದ್ದರು. ಸಮ್ಮೇಳನದ ಪ್ರಧಾನ ಸಂಚಾಲಕ ಎಂ.ಬಿ. ಭಾನುಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.