ಬುಧವಾರ, ನವೆಂಬರ್ 13, 2019
23 °C

ಸಂಕೋಚದ ಹುಡುಗಿ ಅನುಷ್ಕಾ

Published:
Updated:

ನಟಿ ಅನುಷ್ಕಾ ಶರ್ಮಾ ನಿಜ ಜೀವನದಲ್ಲಿ ತುಂಬಾ ಸಂಕೋಚದ ಹುಡುಗಿಯಂತೆ. `ನೀವು ಸಿನಿಮಾಗಳಲ್ಲಿ ನೋಡುವ ಅನುಷ್ಕಾಗೂ, ನಿಜ ಜೀವನದಲ್ಲಿನ ನನ್ನ ವ್ಯಕ್ತಿತ್ವಕ್ಕೂ ಅಜಗಜಾಂತರ.  ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವ ತುಂಬು ಆತ್ಮವಿಶ್ವಾಸದ ಹುಡುಗಿಯಂತೆ ನಾನು ನಿಜ ಜೀವನದಲ್ಲೂ ಇರಬೇಕು ಎಂಬುದು ನನ್ನ ಬಯಕೆ' ಎಂದು ಅನುಷ್ಕಾ ಅವರೇ ಹೇಳಿಕೊಂಡಿದ್ದಾರೆ.ಬೆಳ್ಳಿತೆರೆ ಮೇಲೆ ಬಿಂದಾಸ್ ಹುಡುಗಿ ಪಾತ್ರದಲ್ಲಿ, ಆತ್ಮವಿಶ್ವಾಸ ತುಂಬಿದ ಗಮ್ಮತ್ತಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅನುಷ್ಕಾ ನಿಜ ಜೀವನದಲ್ಲಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿದ್ದಾರಂತೆ. `ನಾನು ತುಂಬಾ ಸಂಕೋಚದ ಹುಡುಗಿ. ಆತ್ಮವಿಶ್ವಾಸದ ಕೊರತೆ ಸದಾ ನನ್ನನ್ನು ಕಾಡುತ್ತಿದೆ. ಬೆಳ್ಳಿತೆರೆಯಲ್ಲಿ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಾನು ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ನಾನು ನಿರ್ವಹಿಸಿದ ಪಾತ್ರಗಳಂತೆ ನನ್ನ ನಿಜ ಜೀವನದಲ್ಲೂ ತುಂಬು ಆತ್ಮವಿಶ್ವಾಸದಿಂದ ಬದುಕಬೇಕು ಎಂಬುದು ನನ್ನ ಬಯಕೆ. ಆದರೆ, ಅದು ನನ್ನಿಂದ ಆಗುತ್ತಿಲ್ಲ. ಯಾಕೆಂದರೆ ನಾನು ಮುಜುಗರ ಸ್ವಭಾವದ ಹುಡುಗಿ' ಎಂದಿದ್ದಾರೆ ಈ ಬೆಡಗಿ.`ರಬ್ ದೇ ಬನಾದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದ ಅನುಷ್ಕಾ, ಆ ಚಿತ್ರದಲ್ಲಿ ಉತ್ಸಾಹದ ಬುಗ್ಗೆಯಂತಿದ್ದ ತಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆನಂತರ `ಬ್ಯಾಂಡ್ ಬಾಜಾ ಬಾರಾತ್', `ಜಬ್ ತಕ್ ಹೈ ಜಾನ್' ಚಿತ್ರಗಳಿಗೂ ಬಣ್ಣ ಹಚ್ಚಿದ್ದರು. ಈಚೆಗೆ ತೆರೆಕಂಡ `ಮಟ್ರೂ ಕಿ ಬಿಜಿಲಿ ಕಾ ಮಂಡೋಲಾ' ಚಿತ್ರಕ್ಕೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ನಾಲ್ಕು ವರ್ಷಗಳಿಂದ ಬಾಲಿವುಡ್‌ನ ನಿರಂತರ ಸಂಪರ್ಕದಲ್ಲಿದ್ದರೂ ಅವರಲ್ಲಿನ ಸಂಕೋಚ ಸ್ವಭಾವ ಮಾತ್ರ ಇದುವರೆಗೂ ಕಡಿಮೆಯಾಗಿಲ್ಲವಂತೆ.

 

ಪ್ರತಿಕ್ರಿಯಿಸಿ (+)