ಬುಧವಾರ, ಅಕ್ಟೋಬರ್ 23, 2019
27 °C

ಸಂಕ್ರಾಂತಿಯಲ್ಲಿ ನಾಗಾರಾಧನೆ

Published:
Updated:

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ತಿನ್ನುಣ್ಣುವ, ಬದುಕುವ ಮತ್ತು ಅವರಾಡುವ ಭಾಷೆಯ ಬನಿ ವಿಶಿಷ್ಟ. ಇಲ್ಲಿ ಅವರದ್ದೇ ಆದ ಆಚಾರ-ವಿಚಾರಗಳಿವೆ, ಸಂಸ್ಕೃತಿ- ಸಂಪ್ರದಾಯಗಳಿವೆ.ಉತ್ತರಾಯಣ ಪುಣ್ಯಕಾಲ ಕಾಲಿಟ್ಟ ಬೆನ್ನಲ್ಲೇ ಉಡುಪಿ, ದಕ್ಷಿಣ ಕನ್ನಡದ ಕರಾವಳಿಯ ಉದ್ದಕ್ಕೂ ನಡೆಯುವ ರಥೋತ್ಸವ, ಜಾತ್ರೆ, ಯಕ್ಷಗಾನ, ನಾಗಾರಾಧನೆ, ಕೋಲ- ಗೆಂಡದ ಹಬ್ಬ ಮುಂತಾದ ಆಚರಣೆ, ಊರೊಟ್ಟಿನ ಸಡಗರ-ಸಂಭ್ರಮಗಳನ್ನು ನೋಡಿಯೇ ಸವಿಯಬೇಕು. ಇದರಲ್ಲಿ ವಿಶೇಷವಾದದ್ದು ನಾಗರಾಧನೆ.ಇದು ಪರಶುರಾಮ ಕ್ಷೇತ್ರ. ಹೀಗಾಗಿ ಇದು ನಾಗದೇವತೆಗಳ ಹಕ್ಕಿನ ಪ್ರದೇಶವೆಂದೂ, ಅದನ್ನು ಅನುಭವಿಸುತ್ತಿರುವ ಇಲ್ಲಿನ ಜನ ನಾಗದೇವತೆಗಳ ಋಣದಲ್ಲಿ ಬದುಕಿದಂತೆ ಎಂಬುದು ಜನಜನಿತ ನಂಬುಗೆ. ಆ ಋಣ ತೀರಿಸಲೋಸುಗ ಇಲ್ಲೆಲ್ಲ ಸರ್ಪವನ್ನು ಕೊಲ್ಲುವುದು ವಿರಳ. ಅಕಸ್ಮಾತ್ ಸತ್ತ ನಾಗರಹಾವನ್ನು ಕಂಡರೆ ಕುಲಬಾಂಧವರು ಸತ್ತಂತೆ ಎಂದು ಭಾವಿಸಿ, ಮನುಷ್ಯರಿಗೆ ಮಾಡುವ ಎಲ್ಲ ಕ್ರಿಯೆ- ಕರ್ಮಾದಿಗಳನ್ನು ಅದಕ್ಕೂ ಮಾಡಿಸುವ ರೂಢಿ ಇದೆ.ಮೇಲ್ನೋಟಕ್ಕೆ ಇದು ಕಂದಾಚಾರ ಎಂದು ಕಂಡರೂ ಆಳವಾಗಿ ಆಲೋಚಿಸಿದರೆ ಇದರ ಹಿಂದೆ ಕೃತಜ್ಞತೆ, ಜೀವಿ ರಕ್ಷಣೆಯ ಉದ್ದೇಶ ಇರುವುದು ಗೋಚರಿಸುತ್ತದೆ.

ಏಕೆಂದರೆ ಹಾವುಗಳು ರೈತನ ಮಿತ್ರ. ಆದರೆ ಹಾವೆಂದರೆ ಭಯಬಿದ್ದು ಕೊಲ್ಲುವವರೆ ಹೆಚ್ಚು. ಸರ್ಪ ನಾಶದಿಂದ ಇಲಿಗಳ ಸಂತತಿ ಹೆಚ್ಚಿ, ಮನುಷ್ಯನ ಆಹಾರ ಸರಪಳಿಗೆ ಸಂಚಕಾರ ಖಂಡಿತ. ರೈತರಲ್ಲಿ ಅವಿದ್ಯಾವಂತರೇ ಹೆಚ್ಚಾಗಿದ್ದ ಆ ಕಾಲದಲ್ಲಿ ದೈವೀ ಕಲ್ಪನೆಯ ಭಯವನ್ನು ಜನರಲ್ಲಿಟ್ಟರೆ ಆ ಕಾರಣದಿಂದಾದರೂ ಸರ್ಪ ಸಂಕುಲ ಉಳಿಸಬಹುದು; ಪ್ರಕೃತಿ ಸಮತೋಲನ ಕಾಪಾಡಬಹುದು ಎಂಬ ಸದಾಶಯವಿರಬೇಕು.ಅದಕ್ಕೆ ಪೂರಕವಾಗಿ ನಾಗಬನಗಳನ್ನು ಕರಾವಳಿಯ ತುಂಬೆಲ್ಲ ಕಾಣಬಹುದಾಗಿದೆ.ಅದರ ಮುಂದುವರಿದ ಭಾಗವಾಗಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ, ನಾಗಶಿಲೆ ಪ್ರತಿಷ್ಠಾಪನೆ ಮತ್ತು ಅನುಕೂಲಸ್ಥರಿಂದ ನಾಗಮಂಡಲ ಸೇವೆ ನಡೆಯುತ್ತದೆ.ಅಹೋರಾತ್ರಿ ನಡೆಯುವ ನಾಗಮಂಡಲದಲ್ಲಿ ಜನ ಸಮುದಾಯದ ಭಯ ಭಕ್ತಿಯ ಪರಾಕಾಷ್ಠೆ ನಿಜಕ್ಕೂ ರೋಚಕ. ಇಲ್ಲಿ ಪೂಜೆ ನಡೆಸುವ ವ್ಯಕ್ತಿಯಲ್ಲಿ ಅಹಂಕಾರ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕಾಗಿ ಸಾರ್ವಜನಿಕರಿಂದ ಹೊರೆ ಕಾಣಿಕೆ ಸ್ವೀಕರಿಸುವುದು ಮಂಡಲೋತ್ಸವದ ಒಂದು ಭಾಗ. ನಾಗಮಂಡಲ ನಡೆಯುವ ಹಿಂದಿನ ದಿನವೆ ಊರವರು ತಮ್ಮ ಕೈಲಾದ ಮಟ್ಟಿಗೆ ಹಣ, ಅಕ್ಕಿ, ಸಕ್ಕರೆ, ತರಕಾರಿ, ಹೊತ್ತು ತಂದು ಒಪ್ಪಿಸುವಲ್ಲಿ ಸ್ವಹಿತ, ಸಮಷ್ಟಿ ಹಿತ ಅಡಗಿದೆ ಎಂದು ವ್ಯಾಖ್ಯಾನಿಸುತ್ತಾರೆ ಕೋಟದ ಗಣೇಶ ಭಟ್ಟ.ಸಂಕಲ್ಪ ಕುಳಿತ ವ್ಯಕ್ತಿ ಬೆಳಗಿನ ಐದು ಗಂಟೆಗೆ ಆಶ್ಲೇಷ ಬಲಿಗಾಗಿ ಉದ್ಯಾಪನೆ, ಮತ್ತು ಗಣಹೋಮ ನೆರವೇರಿಸುವು ದರೊಂದಿಗೆ ನಾಗಮಂಡಲಕ್ಕೆ ಚಾಲನೆ ದೊರಕುತ್ತದೆ. ಇದಕ್ಕೆ ಸುತ್ತಮುತ್ತಲ ಗ್ರಾಮಗಳ ಜನರೂ ಒತ್ತಾಸೆಯಾಗಿ ನಿಲ್ಲುತ್ತಾರೆ. ಎಂಟು ದಿಕ್ಕುಗಳಲ್ಲಿ ನಾಗಕುಲಕ್ಕೆ ಸಂಬಂಧಪಟ್ಟ 39 ನಾಗದೇವತೆಗಳನ್ನು ಹೆಸರಿಸಿ ಅವುಗಳಿಗೆ ಪಿಂಡ ಪ್ರದಾನ ಮಾಡಲಾಗುತ್ತದೆ.ಒಂದೆಡೆ ಹರಕೆಯ ರಂಗಪೂಜೆ, ಇನ್ನೊಂದೆಡೆ ಮಂಡಲ ಸೇವೆ ಪ್ರಾರಂಭಗೊಳ್ಳುತ್ತದೆ. ಅದಕ್ಕಾಗಿಯೇ ಅಡಿಕೆ, ತೆಂಗು, ಹಣ್ಣು-ಹೂಗಳಿಂದ ಶೃಂಗಾರಗೊಂಡ ವಿಶೇಷ ವೇದಿಕೆ ನಿರ್ಮಿಸುತ್ತಾರೆ.ನಾಗ ನಾಗತಿಯರು ವಿಶಿಷ್ಟವಾಗಿ ಪ್ರದಕ್ಷಿಣೆ ಮಾಡುವಾಗ  ಪವಿತ್ರ ಗಂಟು ಹಾಕಿ ಅದನ್ನು ಬಿಡಿಸುವ ಪ್ರಕ್ರಿಯೆಯೇ ನಾಗಮಂಡಲದ ಪ್ರಮುಖ ಆಚರಣೆ. ಇದು ಬೆಳಗಿನತನಕ ನಡೆಯುತ್ತದೆ. ಅದಕ್ಕಾಗಿ ಸಾವಿರಾರು ಸಿಂಗಾರ ಹೂವಿನ ಕೊನೆಗಳನ್ನು ಬಳಸಲಾಗುವುದು. ಪಾರಂಪರಿಕ ವೇಷಭೂಷಣಗಳೊಂದಿಗೆ `ದಕ್ಕೆ~ ಬಡಿಯುತ್ತ ಹಾಡುವ ಜಾನಪದ ಕಾವ್ಯ ಜನರನ್ನು ರಂಜಿಸುತ್ತದೆ. ಅದು ಲೈಂಗಿಕ ಮಾಹಿತಿಗಳ ಆಗರವೂ ಆಗಿರುವುದು ಒಂದು ವಿಶೇಷ.ಬೆಳಿಗ್ಗೆ ನಾಗಪಾತ್ರಿಗಳಿಂದ ನಾಗದರ್ಶನ, ನಂತರ ಅನ್ನದ ಬೃಹತ್ ರಾಶಿಗೆ ಪಲ್ಲವ ಪೂಜೆ ನೆರವೇರುತ್ತದೆ. ಈ ರಾಶಿಯನ್ನು ಬಗೆಯುವುದರೊಂದಿಗೆ ಅನ್ನದಾಸೋಹಕ್ಕೆ ಚಾಲನೆ. ಏಕೆಂದರೆ ಶಾಸ್ತ್ರಗಳ ಪ್ರಕಾರ ಮಹಾ ಅನ್ನ ಸಂತರ್ಪಣೆಯಿಂದ ನಾಗನಿಗೆ ಸಂತೃಪ್ತಿ. ಯಾವುದೆ ಜಾತಿಮತ ಬೇಧವಿಲ್ಲದೆ ನಡೆಯುವ ಈ ಮಹಾಪ್ರಸಾದ ವಿನಿಯೋಗವು ನಾಗಮಂಡಲದ ಮುಖ್ಯ ಅಂಗವೂ ಹೌದು.ಹೀಗೆ ನಾಗಪೂಜೆ ನೆಪದಲ್ಲಿ ಊರಿಗೆ ಊರೆ ಒಟ್ಟಿಗೆ ಸೇರುವುದು ಸೌಹಾರ್ದ, ಸಮನ್ವಯಕ್ಕೆ ಒಂದು ನಿದರ್ಶನ.

 

 

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)