ಬುಧವಾರ, ಮಾರ್ಚ್ 3, 2021
19 °C
ಜೆ.ಪಿ. ನಗರದಲ್ಲಿ ಗೋಧೂಳಿ ರಂಗು, ದೇವಸ್ಥಾನಗಳಲ್ಲಿ ಭಕ್ತರ ಸಾಲು, ಎಳ್ಳು– ಬೆಲ್ಲ ವಿನಿಮಯ

ಸಂಕ್ರಾಂತಿ ಬಂತು; ಸಡಗರದ ಸಿರಿ ತಂತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕ್ರಾಂತಿ ಬಂತು; ಸಡಗರದ ಸಿರಿ ತಂತು

ಮೈಸೂರು: ಊರೂರಿನ ಗುಡಿ ಮನೆ ತುಂಬಿ ಜನ ತುಂಬಿ, ಸಂಕ್ರಾಂತಿ ಬಂತು ಸಿರಿ ತುಂಬಿ... ಇದು ನಮ್ಮ ಜನಪದರು ಸಂಕ್ರಾಂತಿಯನ್ನು ಕಂಡ ಬಗೆ. ಇದೇ ಬಗೆಯಲ್ಲಿ ಮೈಸೂರಿನಲ್ಲಿ ಶುಕ್ರವಾರ ಸಂಕ್ರಾಂತಿ ಜನ, ಮನಗಳನ್ನು ತುಂಬಿ ಬಂದು, ಸಂಭ್ರಮ ಮೂಡಿಸಿತ್ತು.ಬೆಳಂಬೆಳಿಗ್ಗೆಯೇ ಬಹುತೇಕ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳು ಹೂನಗೆ ಚೆಲ್ಲಿದ್ದವು. ಅಕ್ಕಪಕ್ಕದ ಮನೆಯ ಗೆಳತಿಯರ ನಡುವೆ ರಂಗೋಲಿ ವಿನ್ಯಾಸದಲ್ಲಿ ಮುಗಂ ಆದ ಸ್ಪರ್ಧೆ ಮೂಡಿತ್ತು. ಹಿಂದಿನ ದಿನವೇ ಬಹುತೇಕರು ಮನೆಗಳಲ್ಲಿ ಎಳ್ಳು– ಬೆಲ್ಲವನ್ನು ಸಿದ್ಧಪಡಿಸಿಕೊಂಡಿದ್ದರು.ಗುರುವಾರ ಸಂಜೆಯಂತೂ ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಅಗ್ರಹಾರ, ನಂಜುಮಳಿಗೆಯಲ್ಲಿ ‘ಕಾಲಿಡಲು ತೆರಪಿಲ್ಲ’ದಷ್ಟು ಜನಸಂದಣಿ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಕೆಲವರು ಶುಕ್ರವಾರ ಬೆಳಿಗ್ಗೆಯೂ ಎಳ್ಳು, ಬೆಲ್ಲದ ಪೊಟ್ಟಣ ಖರೀದಿಯಲ್ಲಿ ಮಗ್ನರಾಗಿದ್ದರು.ಬೆಳಗಿನ ಪೂಜೆ, ತಿಂಡಿ ಮುಗಿಸಿದ ಬಳಿಕ ಕೆಲವರು ಬೆಳಿಗ್ಗೆಯಿಂದಲೇ ದೂರದ ಬಡಾವಣೆಗಳಲ್ಲಿರುವ ತಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಎಳ್ಳು ಬೀರಲು ಹೊರಟರು. ಮತ್ತೆ ಹಲವರು ಮಧ್ಯಾಹ್ನದ ಹೊತ್ತಿಗೆ ಎಳ್ಳು ಬೀರಲು ಹೊರಟರು. ಮಧ್ಯಾಹ್ನದ ನಂತರ ವಂತೂ ಬಿಕೋ ಎನ್ನುತ್ತಿದ್ದ ರಸ್ತೆಗಳೆಲ್ಲ ಅಲಂಕೃತ ಗೃಹಿಣಿಯರು, ಮಹಿಳೆಯರು, ಯುವತಿಯರನ್ನು ಹೊಂದಿದ ದ್ವಿಚಕ್ರವಾಹನಗಳಿಂದ ತುಂಬಿ ಹೋದವು. ಸಡಗರದಿಂದ ಎಳ್ಳು, ಬೆಲ್ಲ, ಕಬ್ಬು, ಬಾಳೆಹಣ್ಣು, ಹೂಗಳನ್ನು ವಿನಿಮಯ ಮಾಡಿಕೊಂಡರು.ರಾಸುಗಳಿಗೆ ಆಹಾರವಾದ ಕಬ್ಬಿನ ಜಲ್ಲೆಗಳು: ಸಂಕ್ರಾಂತಿಗೆಂದೇ ತಮಿಳುನಾಡಿನಿಂದ ಬಂದಿದ್ದ ಕಪ್ಪು ಬಣ್ಣದ ಕಬ್ಬಿನ ಜಲ್ಲೆಗಳು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಬಹುತೇಕ ಕಡೆ ಬಿಡಾಡಿ ದನಗಳಿಗೆ ಮೇವಾದವು. ಅಗ್ರಹಾರ, ನಂಜುಮಳಿಗೆ ವೃತ್ತಗಳಲ್ಲಿ ಕಳೆದೆರಡು ದಿನಗಳಿಂದ ಭರ್ಜರಿ ವ್ಯಾಪಾರ ಕಂಡಿದ್ದ ಕಬ್ಬು ಶುಕ್ರವಾರ ನೀರಸವಾಗಿತ್ತು.ಇದಕ್ಕೆ ಪಾಲಿಕೆಯ ತಂಡವು ಅಲ್ಲಲ್ಲಿ ಪಾದಚಾರಿ ಮಾರ್ಗಗಳನ್ನ ಅತಿಕ್ರಮಿಸಿಕೊಂಡಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಿದ್ದೂ ಕಾರಣವಾಯಿತು. ನಂಜುಮಳಿಗೆ ವೃತ್ತದಲ್ಲಿ ಪಾಲಿಕೆಯ ‘ಅಭಯ’ ತಂಡವು ಕಸ ವಿಲೇವಾರಿಗೆ ಸಹಕರಿಸಿತು. ವ್ಯಾಪಾರವಾಗದೆ ಅಳಿದುಳಿದ ಕಬ್ಬು ಹಸುಗಳಿಗೆ ಆಹಾರವಾಯಿತು.ದೇಗುಲಗಳಲ್ಲಿ ಉದ್ದನೆಯ ಸಾಲುಗಳು: ನಗರದ ಎಲ್ಲಾ ದೇಗಲಗಳಲ್ಲೂ ಉದ್ದನೆಯ ಸಾಲುಗಳು ಕಂಡು ಬಂದವು. ಅದರಲ್ಲೂ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲ, ರಾಮಾನುಜ ರಸ್ತೆಯ ಕಾಮಕಾಮೇಶ್ವರಿ ದೇಗುಲ, ಈಶ್ವರ ದೇವಸ್ಥಾನಗಳು ಸೇರಿದಂತೆ ಹಲವೆಡೆ ಉದ್ದನೆಯ ಸಾಲುಗಳು ಕಂಡು ಬಂದವು.ಜೆ.ಪಿ. ನಗರದಲ್ಲಿ ಗೋಧೂಳಿ ರಂಗು: ಜೆ.ಪಿ. ನಗರದಲ್ಲಿ ಅಪರೂಪಕ್ಕೆಂಬಂತೆ ಶುಕ್ರವಾರದ ಇಳಿಸಂಜೆಯಲ್ಲಿ ಗೋಧೂಳಿ ರಂಗು ಮೂಡಿತ್ತು. ಇಲ್ಲಿನ 10ನೇ ಮುಖ್ಯರಸ್ತೆಯಲ್ಲಿ ವಿ.ವಿ. ಕ್ರಿಯೇಷನ್ಸ್ ವತಿಯಿಂದ ಏರ್ಪಡಿಸಿದ್ದ ‘ಹಸುಗಳು ಮತ್ತು ಎತ್ತುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಸ್ಪರ್ಧೆ’ಯಲ್ಲಿ ಹಲವು ರಾಸುಗಳು ಪಾಲ್ಗೊಂಡಿದ್ದವು.ಮರಳೂರು, ಗೊದ್ದನಪುರ, ಸಿಂಧುವಳ್ಳಿ, ದೊಡ್ಡಕಾನ್ಯ, ದಡದಹಳ್ಳಿ, ಜೆ.ಪಿ. ನಗರ ಸೇರಿದಂತೆ ಹಲವೆಡೆಗಳಿಂದ ರೈತರು ತಮ್ಮ ತಮ್ಮ ಹಸುಗಳನ್ನು ಸ್ಪರ್ಧೆಗೆ ಸಿಂಗರಿಸಿ ತಂದಿದ್ದರು. ಎಲ್ಲ ರಾಸುಗಳೂ ಕಿಚ್ಚು ಹಾಯ್ದು ನೆರೆದಿದ್ದವರು ಉಸಿರು ಬಿಗಿ ಹಿಡಿಯುವಂತೆ ಮಾಡಿದವು.ಎತ್ತುಗಳ ವಿಭಾಗದಲ್ಲಿ ದಡದಹಳ್ಳಿಯ ಡಿ.ಪಿ. ರವಿ ಅವರ ಎತ್ತು ಪ್ರಥಮ, ಮರಳೂರಿನ ರವಿ ಅವರ ಎತ್ತು ದ್ವಿತೀಯ ಹಾಗೂ ದೊಡ್ಡ ಕಾನ್ಯದ ನಂಜೇಗೌಡ ಅವರ ಎತ್ತು ತೃತೀಯ ಬಹುಮಾನ ಪಡೆದವು. ಹಸುಗಳ ವಿಭಾಗದಲ್ಲಿ ಜೆ.ಪಿ. ನಗರದ ಬಂಗಾರಮ್ಮ ಹಾಗೂ ಚಿಕ್ಕತಾಯಮ್ಮ ಎಂಬುವವರ ಹಸುಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಗಳಿಸಿದವು. ₹ 5 ಸಾವಿರ ಪ್ರಥಮ, ₹ 3 ಸಾವಿರ ದ್ವಿತೀಯ ಹಾಗೂ ₹ 2 ಸಾವಿರ ತೃತೀಯ ಬಹುಮಾನ ಎಂದು ನಿಗದಿಗೊಳಿಸಲಾಗಿತ್ತು.ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಡುಗೊರೆ ನೀಡಲಾಯಿತು. ಮಂಡ್ಯದ ಪ್ರಗತಿಪರ ರೈತ ಬಿ.ವಿ. ರಾಜೇಗೌಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದರಲ್ಲಿ ಮೇಯರ್ ಬಿ.ಎಲ್. ಭೈರಪ್ಪ, ರಂಗಕರ್ಮಿ ಮಂಡ್ಯ ರಮೇಶ್, ನೃತ್ಯ ಕಲಾವಿದರಾದ ವಿದ್ವಾನ್ ಶ್ರೀಧರ್ ಜೈನ್  ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.