ಸಂಕ್ರಾಂತಿ ಮಿಡಿತ: ಮಾರುಕಟ್ಟೆ ಏರಿಳಿತ

7

ಸಂಕ್ರಾಂತಿ ಮಿಡಿತ: ಮಾರುಕಟ್ಟೆ ಏರಿಳಿತ

Published:
Updated:
ಸಂಕ್ರಾಂತಿ ಮಿಡಿತ: ಮಾರುಕಟ್ಟೆ ಏರಿಳಿತ

ವೇಗದೂತ ಬಸ್‌ನಂತೆ ಓಡುವ ಬದುಕಿಗೆ ಬ್ರೇಕ್ ಕೊಡುವ ಹಬ್ಬಗಳಿಗೆ ಸಂಕ್ರಾಂತಿ ನಾಂದಿ ಹಾಡಿದೆ. ಒಂದೇ ವಾರ, ನಾಲ್ಕೇ ದಿನ, ಎರಡೇ ದಿನ, ನಾಳೆಯೇ ಎಂದು ಪ್ರತೀಕ್ಷೆ ಮಾಡಿದ ಹಬ್ಬ ಮುಗಿದೇ ಹೋಗಿದೆ. ಹಬ್ಬದೂಟದ ಸುವಾಸನೆ ಮನೆಯೊಳಗೆ ಇನ್ನೂ ಅಡರಿಕೊಂಡಿದೆ.

ಸಿಹಿ ಪೊಂಗಲ್, ಪಾಯಸ, ಕೋಸಂಬರಿ, ಅವರೆಕಾಯಿ ಉಸುಲಿ, ಕಾಯಿ ಹೋಳಿಗೆಯ ಸವಿಯನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಯುಗಾದಿಯ ಕನಸು ಹೆಣೆಯುತ್ತಿದ್ದೇವೆ. ಅಡುಗೆ ಮನೆಯ ಕಟ್ಟೆಯಲ್ಲಿ ತಣ್ಣಗೆ ಕುಳಿತ ಬಾಣಲೆಯ ಎಣ್ಣೆಯಲ್ಲಿ ನಿನ್ನೆ ಕರಿದ ಪಕೋಡಾದ ಚಹರೆ, ಹೊಸ್ತಿಲಿನಿಂದ ಗೇಟಿನಾಚೆ ರಸ್ತೆಯುದ್ದಗಲಕ್ಕೆ ಹಾಕಿದ ರಂಗೋಲಿ ಇಂದು ಬೆಳಿಗ್ಗೆ ಹಾಕಿದ ನೀರಿಗೆ ಚೆಲ್ಲಾಪಿಲ್ಲಿ... ಎಳೆಬಿಸಿಲಿನಲ್ಲಿ ಒಣಹಾಕಿದ ಹಬ್ಬದ ಸೀರೆಯಲ್ಲಿ ತುಪ್ಪದ ಕಲೆ... ಹಬ್ಬ ಮುಗಿದ ನಂತರಮನೆಯ ಒಳಹೊರಗಿನ ಸಿಂಹಾವಲೋಕನದಲ್ಲಿ ಎಷ್ಟು ಮಜಾ ಇದೆ ಅಲ್ವಾ?ಅದಿರಲಿ, ಹಬ್ಬ ಹಬ್ಬ ಎಂದು ಬಗೆಬಗೆ ಪಟ್ಟಿಯೊಂದಿಗೆ ಲವಲವಿಕೆಯಿಂದ ಓಡಾಡಿ ಸಂಭ್ರಮವನ್ನು ಬಿಕರಿ ಮಾಡುವ ಗ್ರಾಹಕರಿಗಾಗಿ ಹೊಸತನದೊಂದಿಗೆ ತೆರೆದುಕೊಳ್ಳುವ ಮಾರುಕಟ್ಟೆಗಳು, ಅದೇ ಗ್ರಾಹಕರ ಮನೆಗಳಲ್ಲಿ ಹಬ್ಬ ಸಂಪನ್ನವಾಗುವುದಕ್ಕೂ ಮೊದಲೇ ಮುದುರಿಕೊಳ್ಳುವ ಪರಿಯನ್ನು ಗಮನಿಸಿದ್ದೀರಾ?

ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ನಿಂದ ಕೋಣನಕುಂಟೆವರೆಗಿನ ಫುಟ್‌ಪಾತ್‌ಗಳು ಕಬ್ಬಿನ ತೋಟಗಳಾಗಿ, ತರಕಾರಿ ಮಂಡಿಗಳಾಗಿ ಎರಡು ದಿನ ಗ್ರಾಹಕರು ರಸ್ತೆಯನ್ನೆಲ್ಲ ಆಕ್ರಮಿಸಿಕೊಂಡಿದ್ದರು. ಇಂದು ಬೆಳಿಗ್ಗೆ ನೋಡಿದರೆ ಕೊಳ್ಳುವವರ ಸಂಖ್ಯೆ ಬೆರಳೆಣಿಕೆಗೆ ಇಳಿದಿತ್ತು.ಬಸ್‌ನಲ್ಲಿ ಪಕ್ಕದಲ್ಲಿ ಕುಳಿತಿದ್ದ ಗೃಹಿಣಿ ವೆಂಕಟಲಕ್ಷ್ಮಿ ಇದನ್ನು ಗಮನಿಸಿ, `ನಿನ್ನೆ ಇಲ್ಲಿ ಕಾಲು ಹಾಕೋಕೆ ಆಗ್ತಿರಲಿಲ್ಲ. ಇವತ್ತು ಬೆಳಿಗ್ಗೆಯೇ ಖಾಲಿ ಖಾಲಿ. ಮಧ್ಯಾಹ್ನದ ಮೇಲೆ ಕಬ್ಬೂ ಬೇಡ, ತರಕಾರಿನೂ ಬೇಡ' ಅಂತ ಷರಾ ಬರೆದೇಬಿಟ್ಟರು. ಹಬ್ಬಕ್ಕೆ ಒಂದೆರಡು ದಿನವಿದೆ ಅನ್ನುವಾಗ ತೆರೆದುಕೊಳ್ಳುವ ಈ ದಿಢೀರ್ ಮಾರುಕಟ್ಟೆಗಳನ್ನು ರೈತರೇ ನಡೆಸುತ್ತಾರೆ ಅಂದುಕೊಂಡಿರಾ? ಈ ಉದಾಹರಣೆ ನೋಡಿ:

ಅದೇ ಕೋಣನಕುಂಟೆ ಜಂಕ್ಷನ್‌ನಲ್ಲಿ ಕಬ್ಬು ಮಾರುತ್ತಿದ್ದ ಕಾವಿಬಣ್ಣದ ಲುಂಗಿ ಉಟ್ಟಿದ್ದ ಹುಡುಗ ತಲೆಗೆ ಅದೇ ಬಣ್ಣದ ಟವೆಲ್ಲು ಸುತ್ತಿಕೊಂಡಿದ್ದ.

ಪಕ್ಕದಲ್ಲೇ ಮಧ್ಯವಯಸ್ಕರೊಬ್ಬರು ಸೊಂಟಕ್ಕೆ ಕೈಯಿಟ್ಟು ನಿಂತಿದ್ದರು. ಕಾರ್‌ನಲ್ಲಿ ಬಂದ ಆ ದಂಪತಿ, `ಕಬ್ಬು ಆಯ್ಕೆ ಮಾಡೋದು ಹೇಗಪ್ಪಾ? ಗಿಣ್ಣು ಹತ್ತಿರ ಹತ್ತಿರವಿದ್ದರೆ ಒಳ್ಳೆಯದಾ? ದೂರವಿರಬೇಕಾ?' ಅಂತ ಅಮಾಯಕವಾಗಿ ವಿಚಾರಿಸಿದರು. ಅಲಗಿನಂತಹ ಕತ್ತಿಯನ್ನು ನಾಲ್ಕಾರು ಜಲ್ಲೆಗಳ ಮೇಲೆ ಸವರಿದ ಹುಡುಗ `ಯಾವುದಾದರೂ ತಗೊಳ್ಳಿ ಮೇಡಂ. ಎಲ್ಲಾ ಒಂದೇ' ಅಂದ. ಅಲ್ಲ ಯಾವುದು ಸಿಹಿ ಹೆಚ್ಚು ಅಂತ ಕೇಳಿದೆ ಅಂದರು ಆಕೆ.`ಅಯ್ಯೋ ನನ್ಗೂ ಗೊತ್ತಿಲ್ಲ, ನಾನು ರೈತ ಅಲ್ಲ ಮೇಡಂ, ಸ್ಟೂಡೆಂಟು, ಸಂಕ್ರಾಂತಿ ಮಾರ್ಕೆಟ್ಟು ಇದು' ಅಂತ ಸತ್ಯ ಬಿಚ್ಚಿಟ್ಟ ಹುಡುಗ ಬಾಯ್ತುಂಬಾ ನಗೆಯಾಡಿದ. ಹಬ್ಬದ ಮಾರುಕಟ್ಟೆ ನೆಪದಲ್ಲಿ ತಾತ್ಕಾಲಿಕ ವ್ಯಾಪಾರಿಗಳಾಗುವ ಜಾಣರಿವರು.

ಶುಕ್ರವಾರದಿಂದಲೂ `ಫಿಕ್ಸೆಡ್ ರೇಟ್' ಎಂದು ಸ್ಲೇಟಿನ ಮೇಲೆ, ರಟ್ಟಿನ ಮೇಲೆ ಬರೆದು ಕಬ್ಬಿನ ಜಲ್ಲೆಯ ಗಾಡಿಗೆ ಸಿಕ್ಕಿಸಿ ಬನಶಂಕರಿ ಬಳಿಯ ಸಾರಕ್ಕಿ ಗೇಟು ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕಿಳಿದ ಗಾಡಿವಾಲಾ ಸೊಣ್ಣಪ್ಪ ಸೋಮವಾರ ಬೆಳಿಗ್ಗೆ 11ರವರೆಗೂ ಒಂದು ಕಬ್ಬುರೂ 30 ಕ್ಕೆ ಮಾರಾಟ ಮಾಡಿದ್ದರು. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಅವರ ತಳ್ಳುಗಾಡಿ ಜರಗನಹಳ್ಳಿಯ ರಸ್ತೆಗಳಲ್ಲಿ ಮನೆ ಮನೆ ಮುಂದೆ ಕುಂಟುತ್ತಾ ಸಾಗಿತ್ತು. `ಕಬ್ಬೋ ಕಬ್ಬೋ' ಅಂತ ಕೂಗಿ ಕರೆಯುತ್ತಿದ್ದರು ಸೊಣ್ಣಪ್ಪ.ಅಷ್ಟುದ್ದದ ರಸ್ತೆಯಲ್ಲಿ ಮನೆಯಿಂದಾಚೆ ಹಣಕಿಹಾಕಿದ ಮುಖಗಳು ನಾಲ್ಕೋ ಐದೋ! `ತೋಟದಿಂದ ತಂದಿದ್ದು. 30 ಹೇಳ್ತಿದ್ದೆ. ನೀವು 25 ಕೊಡಿ' ಅಂತ ಸ್ವತಃ ಬಾರ್ಗೈನ್‌ನ ಲಂಚ ಅವರ ಮಾತಲ್ಲಿತ್ತು. ಆಮೇಲೆ ಗೇಟು ದಾಟಿ ಬಂದ ಮನೆಯೊಡತಿ ಆರತಿ ವಿಶ್ವನಾಥ, `20 ಕೊಡ್ತೀನಿ ಅಷ್ಟೇ' ಅಂತಂದು ವ್ಯಾಪಾರ ಮುಗಿಸಿದರು.

ಅವರೆಕಾಯಿ, ಸೊಪ್ಪು, ಬಾಳೆಹಣ್ಣು, ಶೇಂಗಾ, ಹೂವಿನ ವ್ಯಾಪಾರಿಗಳದ್ದೂ ಇದೇ ಕತೆ. ಸೋಮವಾರ ಸೂರ್ಯ ನೆತ್ತಿಗೆ ಬರುವ ಮೊದಲೇ ಈ ಕೈಗಾಡಿಗಳು ತಮ್ಮ ತಾತ್ಕಾಲಿಕ ಶೆಡ್‌ನಿಂದೀಚೆ ಬಂದು ಮನೆ ಮನೆಗಳ ಮುಂದೆ, ಅಡ್ಡರಸ್ತೆಗಳಲ್ಲಿ ಜೋರಾಗಿ ಕೂಗಿ ಕರೆಯುವುದು ಸಾಮಾನ್ಯ ದೃಶ್ಯವಾಗಿತ್ತು.

***

`ಕಾಲು ಕೆ.ಜಿಗೆ 50 ರೂಪಾಯಿ. ಬೇಕಿದ್ರೆ ಬೇಗ ಹೇಳೀಮ್ಮ ಬೇರೆ ಗಿರಾಕಿಗೂ ಕೊಡ್ಬೇಕಲ್ವಾ? ಒಬ್ರ ಜತೆನೇ ಮಾತಾಡ್ತಾ ಕೂರಕ್ಕಾಗುತ್ತಾ?' ಅಂತ  ಒರಟಾಗಿಯೇ ಮಾತಿಗಿಳಿದ ಎಳ್ಳು ಬೆಲ್ಲ ವ್ಯಾಪಾರಿ ಚಂದ್ರಮ್ಮನೂ ಸೋಮವಾರ ಬೆಳಿಗ್ಗೆ 9ರ ಹೊತ್ತಿಗೆ 50ರಿಂದ 40, 30ಕ್ಕೆ ರಾಜಿಯಾಗಿದ್ದರು.

***

ಹಬ್ಬವನ್ನು ಊರ ತುಂಬಾ ಸಂಪನ್ನಗೊಳಿಸುವ ಮಾರುಕಟ್ಟೆ, ಹಬ್ಬದ ದಿನ ಹೊತ್ತು ಮೀರುತ್ತಾ, ದಾಟುತ್ತಾ ಹೋದಂತೆ ಊರಿನೊಳಗೇ ಕಾಲಿಡುವುದು, ಸಿಕ್ಕಿದ ಬೆಲೆಗೆ ಮಾರಾಟ ಮಾಡಿ ಒಮ್ಮೆ ಸರಕು ಖಾಲಿಯಾದರೆ ಸಾಕು ಎಂಬ ರಾಜಿಸೂತ್ರಕ್ಕೆ ಶರಣಾಗುವುದು... ಒಂಥರಾ ಜುಗಲ್‌ಬಂದಿಯಂತೆ ಕಾಣುವುದಿಲ್ಲವೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry