ಸೋಮವಾರ, ಅಕ್ಟೋಬರ್ 21, 2019
23 °C

ಸಂಕ್ರಾಂತಿ ಸಡಗರ: ಖರೀದಿ ಭರಾಟೆ

Published:
Updated:

ಬಳ್ಳಾರಿ: ಮನೆಯಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರ. ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಯ ಭರಾಟೆ. ಹೊಸ ಉಡುಗೆ ತೊಟ್ಟು ಸಂಭ್ರಮಿಸಿದ ಮಹಿಳೆಯರು, ಮಕ್ಕಳು. ಎಲ್ಲೆಡೆ ಸಡಗರದ ವಾತಾವರಣ.

ಸುಗ್ಗಿ ಹಬ್ಬ ಸಂಕ್ರಾಂತಿಯ ಮುನ್ನಾದಿನವಾದ ಶನಿವಾರ ನಗರದಲ್ಲಿ ಕಂಡುಬಂದ ದೃಶ್ಯವಿದು.ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬಳ್ಳಾರಿಯಲ್ಲಿ ಆ ರಾಜ್ಯದ ಸಂಸ್ಕೃತಿ, ಆಚರಣೆಗಳ ಪ್ರಭಾವವೂ ಇದೆ. ಅಂಥ ವಿಶೇಷಗಳಲ್ಲಿ ರಂಗೋಲಿಯೂ ಒಂದು. ತರಹೇವಾರಿ ಬಣ್ಣಗಳನ್ನು ಬಳಸಿ ಹಾಕಿದ ರಂಗೋಲಿಗಳು ಗಮನ ಸೆಳೆಯುತ್ತವೆ.ಮಹಿಳೆಯರು ಶುಕ್ರವಾರ ರಾತ್ರಿಯಿಂದಲೇ ಮನೆಯಂಗಳವನ್ನು ಸ್ವಚ್ಛಗೊಳಿಸಿ, ಸಾರಿಸಿ, ರಂಗೋಲಿ ಹಾಕಿ ಅದರಲ್ಲಿ ಬಣ್ಣಗಳನ್ನು ತುಂಬುವುದು ಕಂಡುಬಂತು. ಒಂದೊಂದು ಮನೆಯ ಮುಂದೆ ಒಂದೊಂದು ವಿನ್ಯಾಸದ ರಂಗೋಲಿ. `ಸಂಕ್ರಾಂತಿ ಹಬ್ಬದ ಶುಭಾಶಯ~ ಎಂಬ ಒಕ್ಕಣೆಯೂ ಅದರಲ್ಲಿತ್ತು. ನೆರೆಹೊರೆಯವರಿಗಿಂತ ತಮ್ಮ ರಂಗೋಲಿ ವಿಶೇಷವಾಗಿರಬೇಕು ಎನ್ನುವ ಪೈಪೋಟಿಯಿಂದ ಮಹಿಳೆಯರು ರಂಗೋಲಿ ಹಾಕಿದಂತಿತ್ತು.ಶುಕ್ರವಾರ `ಭೋಗಿ~ ಆಚರಣೆಯ ಅಂಗವಾಗಿ ಮನೆಯಲ್ಲಿ ಮಹಿಳೆಯರು ಬಾಗಿನ ನೀಡಿದರು. ನಗರದ ಸುತ್ತಮುತ್ತಲಿನ ಆಂಧ್ರ ಕ್ಯಾಂಪ್‌ಗಳಲ್ಲೂ ಹಬ್ಬದ ಸಂಭ್ರಮ ಮನೆಮಾಡಿತ್ತು. ಭೋಗಿ ಅಂಗವಾಗಿ ಕಟ್ಟಿಗೆಗೆ ಬೆಂಕಿ ಹಾಕಿ ಉರಿಸುವುದು ಕಂಡುಬಂತು.ಖರೀದಿ ಭರಾಟೆ: ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಖರೀದಿ ಭರಾಟೆ ಜೋರಾಗಿತ್ತು. ರಂಗೋಲಿಗೆ ಬಳಸುವ ಬಣ್ಣಗಳು, ಕಬ್ಬು, ಕಡಲೆಗಿಡ, ಹಣ್ಣು- ಹೂವುಗಳನ್ನು ಸಾರ್ವಜನಿಕರು ಖರೀದಿಸಿದರು.

ರಂಗೋಲಿಗೆ ಬಳಸುವ ಬಣ್ಣಗಳಿಗೆ ಬೇಡಿಕೆಯಿತ್ತು. ತಳ್ಳುಗಾಡಿಗಳಲ್ಲಿ ಬಗೆ ಬಗೆಯ ಬಣ್ಣಗಳನ್ನಿಟ್ಟು ಮಾರಾಟ ಮಾಡಲಾಯಿತು. ಗ್ರಾಹಕರು ಚೌಕಾಶಿಯಲ್ಲಿ ತೊಡಗಿದ್ದರು.ಕತ್ತರಿಸಿದ ಕಬ್ಬಿನ ತುಂಡೊಂದಕ್ಕೆ 10 ರೂ, ಕಡಲೆ ಗಿಡ 30 ರೂ.ಗೆ ಕೆಜಿ, ಬಾರಿ ಹಣ್ಣು 30 ರೂಗೆ ಸೇರಿನಂತೆ ಮಾರುವುದು ಕಂಡುಬಂತು.`ಹಬ್ಬ ಇರುವುದರಿಂದ ಕಬ್ಬಿಗೆ ಡಬಲ್ ರೇಟ್ ಐತೆ. ಹೂವು, ಹಣ್ಣು, ತರಕಾರಿ ದರಗಳು ಸಾಧಾರಣವಾಗಿವೆ~ ಎಂದು ತಾಳೂರು ಗ್ರಾಮದ ನಿವಾಸಿ ಮಲ್ಲನಗೌಡ್ರು `ಪ್ರಜಾವಾಣಿ~ಗೆ ತಿಳಿಸಿದರು.`ಬೇರೆ ದಿನಗಳಲ್ಲಿ ದಿನಕ್ಕೆ 1,500 ರೂ.ವರೆಗೆ ವ್ಯಾಪಾರ ಆಗುತ್ತಿತ್ತು. ಕಳೆದ ಎರಡು ದಿನಗಳಲ್ಲಿ 4 ಸಾವಿರ ರೂ.ವರೆಗೆ ವ್ಯಾಪಾರ ಆಗುತ್ತಿದೆ~ ಎಂದು ಕಡಲೆ ಗಿಡ ವ್ಯಾಪಾರಿ ಮೆಹಬೂಬ್ ಪಾಷಾ ವಿವರಿಸಿದರು.ತಮ್ಮೂರಿಗೆ ಹೂವು ತೆಗೆದುಕೊಂಡು ಹೋಗುವುದಕ್ಕಾಗಿ ಸಮೀಪದ ನಾಗಸಮುದ್ರ ಗ್ರಾಮದಿಂದ ಬಂದಿದ್ದ ಹೂವಿನ ವ್ಯಾಪಾರಿ ಏಕಾಂತ್, ಹಬ್ಬ ಇರುವುದರಿಂದ ಹೂವಿನ ದರ ಸ್ವಲ್ಪ ಜಾಸ್ತಿ ಆಗಿದೆ ಎಂದು ಹೇಳಿದ.

ಒಟ್ಟಾರೆ ನಗರದಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಮನೆಮಾಡಿದೆ.

Post Comments (+)