ಸಂಕ್ಷಿಪ್ತ ಕ್ರೀಡಾ ಸುದ್ದಿಗಳು

7

ಸಂಕ್ಷಿಪ್ತ ಕ್ರೀಡಾ ಸುದ್ದಿಗಳು

Published:
Updated:

ಟೆನಿಸ್: ಕ್ವಾರ್ಟರ್ ಫೈನಲ್‌ಗೆ ನಿಕ್ಷೇಪ್

ನವದೆಹಲಿ:
ಕರ್ನಾಟಕದ ಬಿ.ಆರ್. ನಿಕ್ಷೇಪ್ ಇಲ್ಲಿ ನಡೆಯುತ್ತಿರುವ ಫೆನೆಸ್ಟಾ ಓಪನ್ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್ ಬಾಲಕರ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಬುಧವಾರ ನಡೆದ ಪಂದ್ಯದಲ್ಲಿ ಅವರು 6-0, 6-0 ರಲ್ಲಿ ಮಿಂಗ್‌ಕಿ ತಲೊಮ್ ವಿರುದ್ಧ ಗೆದ್ದರು. ಆದರೆ ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ 4-6, 3-6 ರಲ್ಲಿ ಗಾರ್ವಿತ್ ಬಾತ್ರ ಎದುರು ಪರಾಭವಗೊಂಡರು.ಚೆಸ್ ಫೆಡರೇಷನ್, ಕ್ರೀಡಾ ಇಲಾಖೆಗೆ ನೋಟಿಸ್

ನವದೆಹಲಿ (ಪಿಟಿಐ):
ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ `ಅನರ್ಹ~ ಸ್ಪರ್ಧಿಗಳಿಗೆ ಅವಕಾಶ ನೀಡಿ ಕ್ರೀಡಾ ಕೋಟಾವನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.ಮುಖ್ಯ ನ್ಯಾಯಮೂರ್ತಿ ಡಿ. ಮುರುಗೇಶನ್ ಮತ್ತು ನ್ಯಾಯಮೂರ್ತಿ ರಾಜೀವ್ ಸಹಾಯ್ ಅವರನ್ನೊಳಗೊಂಡ ಪೀಠ ಕೇಂದ್ರ ಕ್ರೀಡಾ ಇಲಾಖೆ ಮತ್ತು ಅಖಿಲ ಭಾರತ ಚೆಸ್ ಫೆಡರೇಷನ್‌ಗೆ (ಎಐಸಿಎಫ್) ಬುಧವಾರ ನೋಟಿಸ್ ಜಾರಿಗೊಳಿಸಿದೆ. ಮಾತ್ರವಲ್ಲ ಡಿಸೆಂಬರ್ 12ರ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ.`ಎಐಸಿಎಫ್ ಅನರ್ಹ ಸ್ಪರ್ಧಿಗಳಿಗೆ ಅವಕಾಶ ನೀಡಿ ಬಳಿಕ ಅವರಿಗೆ ಪ್ರಮಾಣಪತ್ರ ನೀಡುತ್ತಿದೆ. ಅವರು ಈ ಪ್ರಮಾಣಪತ್ರ ಬಳಸಿ ಕ್ರೀಡಾಕೋಟಾದಡಿ ಲಭಿಸುವ ಪ್ರಯೋಜನ ಪಡೆಯವರು~ ಎಂದು ಇಬ್ಬರು ಅಂತರರಾಷ್ಟ್ರೀಯ ಚೆಸ್ ಆಟಗಾರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಬಂದ್ಯಾ ಕಾಕಡೆ ನಿಧನ

ಮುಂಬೈ (ಪಿಟಿಐ):
ಭಾರತ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಬಂದ್ಯಾ ಕಾಕಡೆ (67) ಹೃದಯಾಘಾತದಿಂದ ಬುಧವಾರ ಮೃತಪಟ್ಟರು.ಬ್ಯಾಂಕಾಕ್‌ನಲ್ಲಿ 1970ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಅವರು ಗೋಲ್ ಕೀಪರ್ ಆಗಿದ್ದರು. ಕಾಕಡೆ ಎರಡು ದಶಕ ಕಾಲ ಟಾಟಾ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು.ಕರ್ನಾಟಕಕ್ಕೆ ಜಯ

ತಿರುವನಂತಪುರ:
ಎಚ್.ಪಿ.ಸಂಧ್ಯಾ ಗಳಿಸಿದ ಎಂಟು ಗೋಲುಗಳ ನೆರವಿನಿಂದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್ ಜೂನಿಯರ್ ಟೂರ್ನಿ ಬಾಲಕಿಯರ ವಿಭಾಗದ ಪಂದ್ಯದಲ್ಲಿ 27-0 ಗೋಲುಗಳಿಂದ ಪುದುಚೇರಿ ತಂಡವನ್ನು ಪರಾಭವಗೊಳಿಸಿದರು. ಬಾಲಕರ ವಿಭಾಗದ ಪಂದ್ಯದಲ್ಲಿ ಕನ್ನಡ ನಾಡಿನ ತಂಡ 9-0 ಗೋಲುಗಳಿಂದ ಪುದುಚೇರಿ ತಂಡವನ್ನು ಮಣಿಸಿತು.ಜೀವನಹಳ್ಳಿಗೆ ಪ್ರಶಸ್ತಿ

ಬೆಂಗಳೂರು:
ಜೀವನಹಳ್ಳಿ ತಂಡದವವರು ಬುಧವಾರ ಇಲ್ಲಿ ಕೊನೆಗೊಂಡ ಕೆ.ಎಚ್.ಲಕ್ಷ್ಮಿನಾರಾಯಣ ಸ್ಮಾರಕ 14 ವರ್ಷದೊಳಗಿನವರ ಫುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಫೈನಲ್‌ನಲ್ಲಿ ಜೀವನಹಳ್ಳಿ ತಂಡ ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-3 ಗೋಲುಗಳಿಂದ ಗೌತಮಪುರ ತಂಡವನ್ನು ಸೋಲಿಸಿತು.ಟೈಟಾನ್ಸ್ ತಂಡಕ್ಕೆ  ಸುಲಭ ಗೆಲುವು

ಡರ್ಬನ್ (ಪಿಟಿಐ):
ಜಾಕ್ ರುಡಾಲ್ಫ್ (63, 56 ಎಸೆತ, 7 ಬೌಂ) ಮತ್ತು ಫರ್ಹಾನ್ ಬೆಹರ್ದೀನ್ (ಅಜೇಯ 48, 23 ಎಸೆತ, 1 ಬೌಂ, 3 ಸಿಕ್ಸರ್) ಅವರ ಆಕರ್ಷಕ ಆಟದ ನೆರವಿನಿಂದ ಟೈಟಾನ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 59 ರನ್‌ಗಳಿಂದ ಆಕ್ಲೆಂಡ್ ತಂಡವನ್ನು ಮಣಿಸಿತು.ಬುಧವಾರ ಮೊದಲು ಬ್ಯಾಟ್ ಮಾಡಿದ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172 ರನ್ ಪೇರಿಸಿದರೆ, ಆಕ್ಲೆಂಡ್ 18.1 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟಾಯಿತು.ಸಂಕ್ಷಿಪ್ತ ಸ್ಕೋರ್: ಟೈಟಾನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 172 (ಹೆನ್ರಿ ಡೇವಿಡ್ಸ್ 36, ಜಾಕ್ ರುಡಾಲ್ಫ್ 63, ಫರ್ಹಾನ್ ಬೆಹರ್ದೀನ್ ಔಟಾಗದೆ 48, ಮೈಕಲ್ ಬೇಟ್ಸ್ 21ಕ್ಕೆ 1, ಅಜರ್ ಮಹಮೂದ್ 32ಕ್ಕೆ 1). ಆಕ್ಲೆಂಡ್: 18.1 ಓವರ್‌ಗಳಲ್ಲಿ 113 (ಆಂಡ್ರೆ ಆ್ಯಡಮ್ಸ 30, ಎತಿ ಮಬಲಾಟಿ 26ಕ್ಕೆ 3, ಅಲ್ಫೋನ್ಸೊ ಥಾಮಸ್ 18ಕ್ಕೆ 3). ಪಂದ್ಯಶ್ರೇಷ್ಠ: ಫರ್ಹಾನ್ ಬೆಹರ್ದೀನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry