ಶುಕ್ರವಾರ, ಮೇ 20, 2022
21 °C

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕುಕಿ' ಸಂಘಟನೆ ನಾಯಕನ ಹತ್ಯೆ

ಇಂಫಾಲ (ಪಿಟಿಐ):
ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಭಾನುವಾರ ಅಪರಿಚಿತರ ಗುಂಡಿನ ದಾಳಿಗೆ `ಕುಕಿ' ಲಿಬರೇಷನ್ ಆರ್ಮಿ (ಕೆಎಲ್‌ಎ) ಸಂಘಟನೆಯ ನಾಯಕ ಬಲಿಯಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಕೆಎಲ್‌ಎ ನಾಯಕ ಸಿಖೊಹಾಯ್ ಖೊಂಗ್‌ಸೈ ಅಲಿಯಾಸ್ ಮಾರ್ವಿನ್ ತಮ್ಮ ಪತ್ನಿ ಹಾಗೂ ಇತರ ನಾಲ್ವರೊಂದಿಗೆ ಪ್ರಯಾಣಿಸುತ್ತಿದ್ದಾಗ ಗುಂಡಿನ ದಾಳಿ ನಡೆಯಿತು.ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅಪರಿಚಿತರು ಮಾರ್ವಿನ್ ಅವರ ಕಾರನ್ನು ತಡೆಗಟ್ಟಿ ಗುಂಡಿನ ದಾಳಿ ನಡೆಸಿದರು. ಘಟನೆಯಲ್ಲಿ ಮಾರ್ವಿನ್ ಸಾವನ್ನಪ್ಪಿದ್ದು, ಅವರ ಎರಡು ವರ್ಷದ ಪುತ್ರಿ, 5 ವರ್ಷದ ಸಂಬಂಧಿ ಹಾಗೂ ಕಾರಿನ ಚಾಲಕ ಗಾಯಗೊಂಡಿದ್ದಾರೆ. ಮಾರ್ವಿನ್ ಅವರ ಪತ್ನಿ ಗುಂಡೇಟಿನಿಂದ ಪಾರಾಗಿದ್ದಾರೆ.ಘಟನೆಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಕೆಎಲ್‌ಎ ಸಂಘಟನೆ ಸರ್ಕಾರದೊಂದಿಗೆ ಶಾಂತಿಯುತ ಮಾತುಕತೆ ನಡೆಸುವಲ್ಲಿ ನಿರತವಾಗಿತ್ತು. ಇದನ್ನು ಸಹಿಸದ ಅಪರಿಚಿತರ ಶಸ್ತ್ರಾಸ್ತ್ರಧಾರಿಗಳು ಗುಂಡಿನ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಈ ನಡುವೆ ಜಿರಿಬ್ಯಾಮ್ ಪಟ್ಟಣದಿಂದ 222 ಕಿ.ಮೀ. ದೂರದ ಪೆಟ್ರೋಲ್ ಪಂಪ್ ಬಳಿ ಶಕ್ತಿಶಾಲಿ ಗ್ರೆನೇಡ್ ಪತ್ತೆಯಾಗಿದ್ದು, ಅದನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ.ಮೊಬೈಲ್‌ನಲ್ಲಿ ರೇಡಿಯೊ ಸುದ್ದಿ ಸಂದೇಶ!

ನವದೆಹಲಿ (ಪಿಟಿಐ):
ಸರ್ಕಾರಿ ಸ್ವಾಮ್ಯದ ಆಕಾಶವಾಣಿಯ (ಎಐಆರ್) ಸುದ್ದಿಗಳು ಸದ್ಯದಲ್ಲೇ ಮೊಬೈಲ್‌ನಲ್ಲಿ ಹರಿದಾಡಲಿವೆ.

ಹೌದು, ಆಧುನಿಕ ಯುಗಕ್ಕೆ ತಕ್ಕಂತೆ ತನ್ನ ಸೇವೆಯ ವ್ಯಾಪ್ತಿಯ ವಿಸ್ತರಣೆಗೆ ಮುಂದಾಗಿರುವ ಆಕಾಶವಾಣಿ, ದೇಶದಾದ್ಯಂತ ತನ್ನ ಕೇಳುಗರಿಗೆ ಎಸ್‌ಎಂಎಸ್ ಮೂಲಕ ಸುದ್ದಿಗಳನ್ನು ಒದಗಿಸುವ `ಎಸ್‌ಎಂಎಸ್ ಸುದ್ದಿ ಸೇವೆ'ಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.ನೂತನ ಸೇವೆ ಅನ್ವಯ ಎಐಆರ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಕೇಳುಗರ ಮೊಬೈಲ್ ಸಂಖ್ಯೆಗೆ  ದಿನಕ್ಕೆ ಮೂರು ಬಾರಿ, ಆ ಕ್ಷಣದ ಪ್ರಮುಖ ಸುದ್ದಿಗಳ 3-4 ತಲೆಬರಹಗಳನ್ನು ಎಸ್‌ಎಂಎಸ್ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಾಹೀರಾತು ಸಮೇತ ಒದಗಿಸಲಾಗುತ್ತಿರುವ ಈ ಸೇವೆಯಲ್ಲಿ ಸುದ್ದಿಗಳ ತಲೆಬರಹಗಳ ಮಿತಿಯನ್ನು 100 ಅಕ್ಷರಗಳಿಗೆ ಹಾಗೂ ಜಾಹೀರಾತು ಮಿತಿಯನ್ನು 60 ಅಕ್ಷರಗಳಿಗೆ  ನಿಗದಿಪಡಿಸಲಾಗಿದೆ. ನೂತನ ಸೇವೆಯ ಜಾರಿಗೆ ಎಐಆರ್ ಈಗಾಗಲೇ ಟ್ರಾಯ್‌ನ (ಟಿಆರ್‌ಎಐ) ಅನುಮತಿ ಪಡೆದಿದೆ ಎಂದು ಮೂಲಗಳು ತಿಳಿಸಿದೆ.ಕೈಗಾರಿಕೋದ್ಯಮಿ ಅಪಹರಣ

ಲೂದಿಯಾನ (ಪಿಟಿಐ):
ಇಲ್ಲಿನ ಕಾಡನ್ ಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಪ್ರಯಾಣಿಸುತ್ತಿದ್ದ ಯುವ ಕೈಗಾರಿಕೋದ್ಯಮಿಯನ್ನು ಪೊಲೀಸರ ವೇಷದಲ್ಲಿದ್ದ ನಾಲ್ವರು ಅಪರಿಚಿತರು ಅಪಹರಿಸಿದ್ದಾರೆ. ಲೂದಿಯಾನ ನಗರದ ಕೈಗಾರಿಕೋದ್ಯಮಿ ಮನೀಷ್ ಬ್ರಾರಾ (26) ಅಪರಹಣಕ್ಕೊಳಗಾದವರು.ಮನೀಷ್ ತಮ್ಮ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅವರನ್ನು ಹಾಗೂ ಅವರ ಕಾರಿನ  ಚಾಲಕನನ್ನು ಪೊಲೀಸ್ ವೇಷಧಾರಿಗಳು ಅಪಹರಿಸಿದ್ದಾರೆ.ಅಪರಹಣಕಾರರು ಮನೀಷ್ ಅವರ ಕುಟುಂಬಕ್ಕೆ ಬೆದರಿಕೆಯ ಕರೆಗಳನ್ನು ಮಾಡುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಅಪಹರಣದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಿಕ್ಷಣದಿಂದ `ಯಂತ್ರ ಮಾನವ'ರ ಸೃಷ್ಟಿ: ವಿಷಾದ

ಭುವನೇಶ್ವರ (ಪಿಟಿಐ):
ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಥಾಮಸ್ ಮೆಕಾಲೆಯ ಸಿದ್ಧಾಂತಗಳ ಪ್ರಭಾವವಿರುವುದರಿಂದ ಮನುಷ್ಯನನ್ನು ಯಂತ್ರ ಮಾನವನನ್ನಾಗಿ ಮಾಡಿದ್ದಷ್ಟೇ ಅಲ್ಲ ಕುಟುಂಬಗಳು ಒಡೆದು ಹೋಗುವಂತೆ ಮಾಡಿದೆ' ಎಂದು ಪುರಿ ಶಂಕರಾಚಾರ್ಯ ಮಠದ ನಿಶ್ಚಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.`ಜೀವನ ಅರ್ಥಪೂರ್ಣವಾಗಿಸಿಕೊಳ್ಳಲು ಬೇಕಾದ ಅಂಶಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲ. ಆತ್ಮಕ್ಕೆ ಸಂಬಂಧಿಸಿದ ಆಂಶಗಳನ್ನು ನಿರ್ಲಕ್ಷಿಸಲಾಗಿದೆ' ಎಂದು ಇಲ್ಲಿಯ ಖಾಸಗಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವ ಸ್ವಾಮೀಜಿ ತಿಳಿಸಿದ್ದಾರೆ.`ಯಂತ್ರಮಾನವ ಸ್ವಾರ್ಥಿಯಾಗಿದ್ದು ಬದುಕು ನಿಯಂತ್ರಣ ಕಳೆದುಕೊಂಡಿದೆ. ಇದು ಆತನ ಬೆಳವಣಿಗೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ' ಎಂದು ಸ್ವಾಮೀಜಿ ಹೇಳಿದ್ದಾರೆ.`ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೆ ಉತ್ತರಾಖಂಡದಲ್ಲಾಗಿರುವ ಪರಿಸ್ಥಿತಿಯೇ ಎಲ್ಲ ಕಡೆ ಆಗಲಿದೆ' ಎಂದು ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಿದರು.`ಸಂಸ್ಕೃತಿ ಎನ್ನುವುದು ಮಹಿಳೆಯ ಮೇಲೆ ಅವಲಂಬಿಸಿದ್ದರಿಂದ ಆಕೆಗೆ ಸೂಕ್ತ ಭದ್ರತೆ ಒದಗಿಸಬೇಕು' ಎಂದು ಮಹಿಳಾ ಸಬಲೀಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.