ಸಂಕ್ಷಿಪ್ತ ವಿದೇಶಿ ಸುದ್ದಿಗಳು

7

ಸಂಕ್ಷಿಪ್ತ ವಿದೇಶಿ ಸುದ್ದಿಗಳು

Published:
Updated:

ಗಿನ್ನೆಸ್‌ ದಾಖಲೆಗೆ ಲೈಗರ್‌

ಲಂಡನ್‌ (ಪಿಟಿಐ):
10 ಅಡಿ ಉದ್ದ ಹಾಗೂ 418 ಕೆ.ಜಿ ತೂಕದ ದೈತ್ಯ ಲೈಗರ್‌ (ಹೆಣ್ಣು ಹುಲಿ ಹಾಗೂ ಸಿಂಹದ ಮಿಶ್ರ ತಳಿ) ಒಂದು ಗಿನ್ನಿಸ್‌ ದಾಖಲೆಗೆ ಸೇರಿದೆ.ದಕ್ಷಿಣ ಕರೊಲಿನಾದ ಮಿರ್ಟ್ಲೆ ಸಮುದ್ರ ತೀರದ ವನ್ಯ ಜೀವಿ ಅಭಯಾರಣ್ಯದಲ್ಲಿ ಈ ಲೈಗರ್‌ ಇದೆ. ಹುಲಿ ಮತ್ತು ಸಿಂಹದ ಮಿಶ್ರ ತಳಿಯ ಈ ಲೈಗರ್‌ಗಳು ತಮ್ಮ ಪಾಲಕರ ದುಪ್ಪಟ್ಟು ಗಾತ್ರ ಹೊಂದಿರುತ್ತವೆ. ಲೈಗರ್‌ಗಳು ಬಹಳ ವರ್ಷಗಳ ಕಾಲ ಬದುಕುತ್ತವೆ ಎಂದು ಗಿನ್ನಿಸ್‌ ದಾಖಲೆಯ ಕಾರ್ಯನಿರ್ವಾಹಕ ಅಧಿಕಾರಿ ಸಾರಾ ವಿಲ್ಕಾಕ್ಸ್‌ ಹೇಳಿದ್ದಾರೆ.ಮಲಾಲಾಗೆ  ಅಮ್ನೆಸ್ಟಿ ಪ್ರಶಸ್ತಿ

ಲಂಡನ್‌ (ಐಎಎನ್‌ಎಸ್‌):
ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಲಾಲಾ ಯೂಸುಫ್‌ ಝೈ ಹಾಗೂ ಅಮೆರಿಕದ ಗಾಯಕಿ, ಮಾನವ ಹಕ್ಕು ಹಾಗೂ ಸಾಮಾಜಿಕ ನ್ಯಾಯ ಕಾರ್ಯಕರ್ತೆ ಹ್ಯಾರಿ ಬೆಲಫೊಂಟೆ ಅವರನ್ನು ‘2013ರ ಅಮ್ನೆಸ್ಟಿ ಇಂಟರ್‌­ನ್ಯಾಷನಲ್ ಆತ್ಮಸಾಕ್ಷಿ ರಾಯಭಾರಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.‘ಮಾನವ ಹಕ್ಕು, ನ್ಯಾಯ, ಆತ್ಮ ಗೌರವಕ್ಕಾಗಿ ಹೋರಾಟ ಮಾಡುತ್ತಿರುವ   ಮಲಾಲಾ ಹಾಗೂ ಹ್ಯಾರಿ ನಿಜವಾಗಿಯೂ ಆತ್ಮಸಾಕ್ಷಿಯ ರಾಯಭಾರಿಗಳು. ಇವರು ಇತರರಿಗೆ ಮಾದರಿ­ಯಾಗಿ ನಿಲ್ಲುತ್ತಾರೆ’ ಎಂದು  ಅಮ್ನೆಸ್ಟಿ ಇಂಟರ್‌­ನ್ಯಾಷನಲ್‌ ಪ್ರಧಾನ ಕಾರ್ಯದರ್ಶಿ ಸಲಿಲ್‌ ಶೆಟ್ಟಿ ಶ್ಲಾಘಿಸಿದ್ದಾರೆ.ಗಿನ್ನೆಸ್‌ ದಾಖಲೆಗೆ ಅತಿ ಚಿಕ್ಕ ಕಾರು

ವಾಷಿಂಗ್ಟನ್‌ (ಪಿಟಿಐ):
ಪ್ರಪಂಚದ ಅತಿ ಚಿಕ್ಕ ಕಾರು ಸುರಕ್ಷಿತವಾಗಿ ರಸ್ತೆಯಲ್ಲಿ ಚಲಿಸುವ ಮೂಲಕ ಗಿನ್ನಿಸ್‌ ದಾಖಲೆ ನಿರ್ಮಿಸಿದೆ.

ಈ ಕಾರು 25 ಇಂಚು ಎತ್ತರ ಹಾಗೂ 4 ಅಡಿ ಅಗಲ ಇದೆ.  ಅಮೆರಿಕದ ಆಸ್ಟಿನ್‌ ಕೌಲ್‌ಸನ್‌ ಈ ಕಾರನ್ನು ತಯಾರಿಸಿದ್ದು, ರಸ್ತೆಗೆ ಯೋಗ್ಯವಾದ ಕಾರು ನಿರ್ಮಾಣ ಹಾಗೂ ಅದರ ಮಾಲೀಕರಾಗಿ ಇವರು ಗಿನ್ನಿಸ್‌ ದಾಖಲೆಗೆ ಸೇರಿದ್ದಾರೆ.‘ಕಾಶ್ಮೀರ ವಿವಾದ: ಮಾತುಕತೆಗೆ ಸಿದ್ಧ’

ಇಸ್ಲಾಮಾಬಾದ್‌ (ಪಿಟಿಐ): 
‘ನೆರೆದೇಶಗಳ ಜತೆಗಿನ ಸಂಬಂಧ ಸುಧಾರಿಸುವ ದಿಸೆಯಲ್ಲಿ ಕೆಲಸ ಮಾಡಲು  ನನಗೆ ಜನಾದೇಶ ಸಿಕ್ಕಿದೆ’ ಎಂದಿರುವ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌, ‘ ಕಾಶ್ಮೀರ ಸೇರಿದಂತೆ ಎಲ್ಲ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳಲು ಭಾರತೊಂದಿಗೆ  ಸಮಗ್ರ ಮಾತುಕತೆಗೆ ಪಾಕ್‌ ಉತ್ಸುಕವಾಗಿದೆ’ ಎಂದಿದ್ದಾರೆ.ಇತ್ತೀಚೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಘಟನೆಯು ಆತಂಕಕ್ಕೆ ಕಾರಣವಾಗಿದೆ ಎಂದಿರುವ ಅವರು, ‘ ಇದಕ್ಕೆ ಪಾಕಿಸ್ತಾನವು ಸಂಯಮದಿಂದ ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸಲಿದೆ’ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.ನೀನಾ ಗೆಲುವಿನ ಸಂಭ್ರಮ

ವಾಷಿಂಗ್ಟನ್‌ (ಪಿಟಿಐ):
‘ನೀನಾ ದವುಲುರಿ ಅವರು ಮಿಸ್‌ ಅಮೆರಿಕ ಕಿರೀಟ ಧರಿಸಿರುವುದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಹೆಮ್ಮೆಯ ಸಂಗತಿ. ಸೌಂದರ್ಯ ಸ್ಪರ್ಧೆಯಲ್ಲಿ ಅವರು ಗೆದ್ದಿರುವ ಈ ಕ್ಷಣ 1945ರಲ್ಲಿ ಯಹೂದಿ ಸುಂದರಿ ಬೆಸ್‌ ಮೈಯರ್‌ ಸನ್‌ ಅವರು ಮಿಸ್‌ ಅಮೆರಿಕ ಆಗಿದ್ದ ಸಂದರ್ಭವನ್ನು ನೆನಪಿಸುತ್ತದೆ’ ಎಂದು ಕಾಂಗ್ರೆಸ್‌ ಸದಸ್ಯೆ ಗ್ರೇಸ್‌ ಮೆಗ್‌ ಪ್ರತಿಕ್ರಿಯಿಸಿದ್ದಾರೆ.‘ ಇದು ನೀನಾಗೆ ಮಾತ್ರವಲ್ಲ; ಇಲ್ಲಿರುವ ಭಾರತೀಯ ಸಮುದಾಯದವರೆಲ್ಲರಿಗೂ ಸಂಭ್ರಮದ ಕ್ಷಣ’ ಎಂದೂ ಅವರು ಬಣ್ಣಿಸಿದ್ದಾರೆ.  ಸಮುದ್ರ ತೀರದಲ್ಲಿ ಸಾಂಪ್ರದಾಯಿಕ ನಡಿಗೆ: ಮಿಸ್‌ ಅಮೆರಿಕ ಗೆದ್ದಿದ್ದಕ್ಕೆ ನೀನಾ ಅವರು ನ್ಯೂಜೆರ್ಸಿಯ ಸಮುದ್ರ ತೀರದಲ್ಲಿ ಸಾಂಪ್ರದಾಯಿಕ ಕಾಲ್ನಡಿಗೆಯಲ್ಲಿ ಗಮನ ಸೆಳೆದರು.ಮಂಗಳಕ್ಕೆ ಹಾವಿನ ಆಕಾರದ ರೋಬೊಟ್‌

ಲಂಡನ್‌ (ಪಿಟಿಐ):
ಐರೋಪ್ಯ ಬಾಹ್ಯಾಕಾಶ ಸಂಸ್ಥೆ ಹಾವಿನ ಮಾದರಿಯ ರೋಬೊಟ್‌ ಒಂದನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ನಿರ್ಧರಿಸಿದೆ.  ಈ ರೋಬೊಟ್‌ ಹಾವು ಮಂಗಳನ ಎಲ್ಲ ಮೂಲೆಗಳನ್ನು ತಡಕಾಡುವ ಸಾಮರ್ಥ್ಯ ಹೊಂದಿದೆ. ಈವರೆಗೆ ಮಂಗಳನ ಶೋಧಕ್ಕಾಗಿ ಕಳುಹಿಸಿದ ನೌಕೆಗಳಿಗಿಂತ ಭಿನ್ನವಾಗಿ ಕೆಲಸ ನಿರ್ವಹಿಸಲಿದೆ.    ಅಲ್ಲದೇ ಭವಿಷ್ಯದಲ್ಲಿ ಉಡಾವಣೆ ಮಾಡುವ ಮಂಗಳ ನೌಕೆಗಳ ಜತೆ ಸುಲಭವಾಗಿ ಸಂರ್ಪಕ ಸಾಧಿಸುವ ತಂತ್ರಜ್ಞಾನವನ್ನೂ ಹೊಂದಿರುತ್ತದೆ. ನಾಸಾ ಈಗಾಗಲೇ ನಾಲ್ಕು ಅಂತರಿಕ್ಷ ನೌಕೆಗಳನ್ನು ಮಂಗಳನ ಅಂಗಳಕ್ಕೆ ಕಳುಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry