ಸಂಕ್ಷಿಪ್ತ ವಿದೇಶ ಸುದ್ದಿ

7

ಸಂಕ್ಷಿಪ್ತ ವಿದೇಶ ಸುದ್ದಿ

Published:
Updated:

26/11: ವಿಚಾರಣೆ ಮುಂದೂಡಿಕೆ

ಇಸ್ಲಾಮಾಬಾದ್ (ಪಿಟಿಐ): ಮುಂಬೈನಲ್ಲಿ 26/11ರಂದು ನಡೆದ ಉಗ್ರರ ದಾಳಿ ಪ್ರಕರಣದ ಆರೋಪಿಗಳಾದ ಲಷ್ಕರ್-ಎ-ತೈಯಬಾ (ಎಲ್‌ಇಟಿ) ಸಂಘಟನೆಯ ಝಾಕೀವುರ್ ರೆಹಮಾನ್ ಲಖ್ವಿ ಹಾಗೂ ಪಾಕಿಸ್ತಾನದ ಇನ್ನಿತರ ಆರು ಶಂಕಿತರ ವಿಚಾರಣೆಯನ್ನು ನ್ಯಾಯಾಧೀಶರು ಗೈರುಹಾಜರಿದ್ದ ಕಾರಣ ಒಂದು ವಾರ ಕಾಲ ಮುಂದೂಡಲಾಗಿದೆ.

`ನ್ಯಾಯಾಧೀಶ ಚೌಧರಿ ಹಬೀಬ್-ಉರ್-ರೆಹಮಾನ್ ಅವರು ಭಯೋತ್ಪಾದನಾ ನಿಗ್ರಹ ನ್ಯಾಯಾಲಯಗಳ ಸಮಾವೇಶದಲ್ಲಿ ಭಾಗವಹಿಸಬೇಕಿದ್ದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಆಗಮಿಸಿರಲಿಲ್ಲ. ಆದ್ದರಿಂದ ವಿಚಾರಣೆಯನ್ನು ಡಿ. 8ಕ್ಕೆ ಮುಂದೂಡಲಾಗಿದೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪುರಾವೆ ನೀಡಿದರೆ ಕ್ರಮ: ಈ ಮಧ್ಯೆ, `ಭಾರತವು ಪುರಾವೆ ನೀಡಿದರೆ ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಎಲ್‌ಇಟಿ ಸ್ಥಾಪಕ ಹಫೀಜ್ ಸಯೀದ್ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಶನಿವಾರ ಇಲ್ಲಿ ಹೇಳಿದ್ದಾರೆ.

ಭಯೋತ್ಪಾದನೆ: ಇಬ್ಬರ ಬಂಧನ

ವಾಷಿಂಗ್ಟನ್ (ಪಿಟಿಐ): ಉಗ್ರರಿಗೆ ಅಮೆರಿಕದಲ್ಲಿ ದಾಳಿಯ ಸಂಚಿಗೆ ನೆರವು ನೀಡಿದ ಆರೋಪದ ಮೇಲೆ ಫ್ಲಾರಿಡಾದಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ, ಬಂಧಿತರನ್ನು ರಯೀಸ್ ಅಲಂ ಖಾಜಿ (20) ಹಾಗೂ ಶೆಹೆರ್ಯಾರ್ ಅಲಂ ಖಾಜಿ (30) ಎಂದು ಗುರುತಿಸಲಾಗಿದ್ದು, ಇವರನ್ನು  ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ಇರಾನ್ ಮೇಲೆ ಮತ್ತಷ್ಟು ದಿಗ್ಬಂಧನ

ವಾಷಿಂಗ್ಟನ್ (ಐಎಎನ್‌ಎಸ್/ರಿಯಾ ನೊವೊಸ್ತಿ): ಇರಾನ್ ಮೇಲೆ ಇನ್ನಷ್ಟು ದಿಗ್ಬಂಧನ ಹೇರಲು ಅಮೆರಿಕ ಸೆನೆಟ್ ಮತ ಚಲಾಯಿಸಿದೆ. ಇರಾನ್‌ನ ಇಂಧನ, ಬಂದರು, ಹಡಗು ನಿರ್ಮಾಣ ವಲಯವು ದಿಗ್ಬಂಧನದ ವ್ಯಾಪ್ತಿಗೆ ಸೇರುತ್ತದೆ.

ಒಬಾಮ ಆಡಳಿತದಲ್ಲಿ ಅಂಧನ ನೇಮಕ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆಡಳಿತದಲ್ಲಿ ಪ್ರಮುಖ ಹುದ್ದೆಯೊಂದಕ್ಕೆ ಭಾರತೀಯ ಮೂಲದ ಅಂಧ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದ್ದಾರೆ. `ಆರ್ಕಿಟೆಕ್ಚರಲ್ ಆ್ಯಂಡ್ ಟ್ರಾನ್ಸ್‌ಪೋರ್ಟೇಷನ್ ಬ್ಯಾರಿಯರ್ಸ್ ಕಂಪ್ಲೈಯನ್ಸ್' ಮಂಡಳಿಗೆ ಸಚಿನ್ ದೇವ್ ಪವಿತ್ರನ್ ಅವರನ್ನು ನೇಮಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry