ಭಾನುವಾರ, ಜೂನ್ 20, 2021
20 °C

ಸಂಕ್ಷಿಪ್ತ ವಿದೇಶ ಸುದ್ಧಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಸಂಜಾತ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ

ವಾಷಿಂಗ್ಟನ್(ಪಿಟಿಐ):
ಸ್ತನ ಕ್ಯಾನ್ಸರ್‌ಗೆ ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ನಂಜಿನ ಚಿಕಿತ್ಸಾ ವಿಧಾನವನ್ನು ಸಂಶೋಧನೆ ಮಾಡಿರುವ ಭಾರತೀಯ ಮೂಲದ ಬಾಲಕ ನಿತಿನ್ ರೆಡ್ಡಿ ತುಮ್ಮಾ (17) ಅವರಿಗೆ ಅಮೆರಿಕದ ಪ್ರತಿಷ್ಠಿತ ವಿಜ್ಞಾನ ಪ್ರತಿಭಾ ಸ್ಪರ್ಧೆಯಲ್ಲಿ ಒಂದು ಲಕ್ಷ ಡಾಲರ್‌ಗಳ ಪ್ರತಿಭಾ ಪುರಸ್ಕಾರ ಲಭಿಸಿದೆ.ಇಂಟೆಲ್ ಪ್ರತಿಷ್ಠಾನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ನಡೆಸುವ ಅತ್ಯಂತ ಕಠಿಣವಾದ ಈ ರಾಷ್ಟ್ರೀಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿದ್ದ 40 ಮಂದಿಯಲ್ಲಿ ಏಳು ಭಾರತೀಯ ಸಂಜಾತರಿದ್ದರು. ಮೊದಲ ಹತ್ತು ಸ್ಥಾನಗಳಲ್ಲಿ ಭಾರತೀಯ ಮೂಲದ ನಿತಿನ್ ಮಾತ್ರವಲ್ಲದೆ, ನೀಲ್ ಪಟೇಲ್ ಮತ್ತು ಅನಿರುದ್ಧ್ ಪ್ರಭು ಎಂಬ ವಿದ್ಯಾರ್ಥಿಗಳು ಸಹ ಇದ್ದಾರೆ.ತಮಿಳರ ಹತ್ಯೆ: ಲಂಕಾಗೆ ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್(ಎಪಿ):
ಶ್ರೀಲಂಕಾ ಸರ್ಕಾರವು ಅಲ್ಪಸಂಖ್ಯಾತ ತಮಿಳರೊಂದಿಗಿನ ವೈಮನಸ್ಸನ್ನು ನಿವಾರಿಸಿಕೊಳ್ಳಲು ರಾಜಿ ಸಂಧಾನ ಮಾಡಿಕೊಳ್ಳದಿದ್ದಲ್ಲಿ ಮತ್ತು ಯುದ್ಧ ಅಪರಾಧ ಆರೋಪಗಳ ಬಗ್ಗೆ ಸೂಕ್ತ ಕ್ರಮದೊಂದಿಗೆ ಸ್ಪಂದಿಸದಿದ್ದಲ್ಲಿ ಮತ್ತೆ ಜನಾಂಗೀಯ ಬಿಕ್ಕಟ್ಟು ಮರುಕಳಿಸುವ ಅಪಾಯವಿದೆ ಎಂದು ಅಮೆರಿಕ ಬುಧವಾರ ಎಚ್ಚರಿಸಿದೆ.ಶ್ರೀಲಂಕಾದಲ್ಲಿ 2009ರಲ್ಲಿ ಕೊನೆಗೊಂಡ ಅಂತಃಕಲಹದಲ್ಲಿ ಸಾವಿರಾರು ತಮಿಳು ನಾಗರಿಕರು ಸಾವನ್ನಪ್ಪಿದ್ದು, ಈ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಸೂಚಿಸಿ ಈಗಾಗಲೇ ಅಮೆರಿಕವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಮಂಡಿಸಿರುವ ಕರಡು ನಿರ್ಣಯದ ಮೇಲೆ ಮುಂದಿನ ವಾರ ಮತದಾನ ನಡೆಯುತ್ತಿರುವುದಕ್ಕೆ ಲಂಕಾ ಪ್ರತಿಭಟನೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲೇಕ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.ಮತ್ತೆ ಭಾರತೀಯ ಕಾನ್ಸುಲೇಟ್‌ಗೆ ಚಿಂತನೆ

ಇಸ್ಲಾಮಾಬಾದ್ (ಐಎಎನ್‌ಎಸ್):
ಭಾರತವು ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ಮತ್ತೆ ತನ್ನ ಕಾನ್ಸುಲೇಟ್ ಪುನರಾರಂಭಿಸಲು ಯೋಜಿಸಿರುವುದಾಗಿ ಭಾರತೀಯ ಹೈಕಮಿಷನರ್ ಶರತ್ ಸಬರವಾಲ್ ತಿಳಿಸಿದ್ದಾರೆ.ಭಾರತೀಯ ವೀಸಾಗಾಗಿ ಅರ್ಜಿ ಸಲ್ಲಿಸುವ ಪಾಕ್ ರಾಷ್ಟ್ರೀಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾನ್ಸುಲೇಟ್ ತೆರೆಯಲು ಮಾತುಕತೆ ನಡೆಸಲಾಗಿದೆ ಎಂದು ಭುಟ್ಟೊ ಕುಟುಂಬದ ವಸ್ತು ಸಂಗ್ರಹಾಲಯಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರಿಗೆ ಹೇಳಿದ್ದಾಗಿ ಜಿಯೊ ನ್ಯೂಸ್ ವರದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.