ಸಂಕ್ಷಿಪ್ತ ಸುದ್ದಿ

7

ಸಂಕ್ಷಿಪ್ತ ಸುದ್ದಿ

Published:
Updated:

ವಿದ್ಯುತ್ ಮತ್ತಷ್ಟು ದುಬಾರಿ?

ನವದೆಹಲಿ: ಆಮದು ಕಲ್ಲಿದ್ದಲು ಬೆಲೆ ದುಬಾರಿಯಾಗಿರುವುದರಿಂದ ಪ್ರತಿ ಕಿಲೊ ವಾಟ್ ವಿದ್ಯುತ್ ಉತ್ಪಾದನೆ ವೆಚ್ಚ ಶೇಕಡಾ 30ರಿಂದ 35ರಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಇಂಧನ ಸಚಿವಾಲಯ ಹೇಳಿದೆ. ಇದು ವಿದ್ಯುತ್ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಮುನ್ಸೂಚನೆಯಾಗಿ ಕಂಡುಬಂದಿದೆ.ಭಾರತೀಯ ಕಲ್ಲಿದ್ದಲು ಕಂಪೆನಿ ಸಹ ಕಲ್ಲಿದ್ದಲು ಬೆಲೆಯನ್ನು ಶೇಕಡಾ 15ರಷ್ಟು ಏರಿಸುವ ನಿರ್ಧಾರ ಮಾಡಿರುವುದರಿಂದ ವಿದ್ಯುತ್ ದುಬಾರಿಯಾಗುವ ಸ್ಪಷ್ಟ ಸೂಚನೆ ಕಂಡುಬರುತ್ತಿದೆ.ಭಾರತೀಯ ಕಲ್ಲಿದ್ದಲು ಕಂಪೆನಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ಸರಬರಾಜು ಮಾಡದ ಕಾರಣ ದುಬಾರಿ ವೆಚ್ಚದ ವಿದೇಶಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ ಎಂದು ಇಂಧನ ಸಚಿವಾಲಯದ ಮೂಲಗಳು ತಿಳಿಸಿವೆ.ಕಲ್ಲಿದ್ದಲು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬೆಲೆ ಹೆಚ್ಚಳ ಅನಿವಾರ್ಯ ಎಂದು ಅನೇಕ ರಾಜ್ಯ ಸರ್ಕಾರಗಳು ಸಹ ತಿಳಿಸಿರುವುದರಿಂದ ಮುಂಬರುವ ದಿನಗಳಲ್ಲಿ ಗ್ರಾಹಕರು ವಿದ್ಯುತ್‌ಗೆ ಹೆಚ್ಚಿನ ಬೆಲೆ ತೆರಲು ಸಿದ್ಧರಾಗಬೇಕಿದೆ.ಮಾ. 8ರಂದು ಮಹಿಳಾ ಮೀಸಲು ಮಸೂದೆ ಮಂಡನೆ?

ನವದೆಹಲಿ: ಪ್ರಸಕ್ತ  ಸಂಸತ್ ಅಧಿವೇಶನದಲ್ಲಿ ವಿವಾದಿತ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಗೆ ಅವಕಾಶವಿರುವ ಈ ಮಸೂದೆಯನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಮಾರ್ಚ್ 8ರಂದು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಅವರು ಭಾಷಣ ಮಾಡಿದಾಗ, ಮಹಿಳಾ ಮೀಸಲು ಮಸೂದೆ ಇದೇ ಅಧಿವೇಶನದಲ್ಲಿ ಅಂಗೀಕಾರವಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ.ಕೇರಳದಲ್ಲಿ ತಾಳೆ ಎಣ್ಣೆ ರಾಜಕೀಯ

ತಿರುವನಂತಪುರ (ಐಎಎನ್‌ಎಸ್): ಕೇರಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ, ಕೇಂದ್ರ ಜಾಗೃತ ಆಯೋಗದ ಆಯುಕ್ತ ಪಿ.ಜೆ.ಥಾಮಸ್ ಮತ್ತು ಅನೇಕ ಕಾಂಗ್ರೆಸ್ ನಾಯಕರನ್ನು ಒಳಗೊಂಡ ತಾಳೆ ಎಣ್ಣೆ ಆಮದು ಹಗರಣ ಹೊಸ ತಿರುವು ಪಡೆಯುತ್ತಿದೆ.ಈ ಹಗರಣದ ಆರೋಪಪಟ್ಟಿಯಲ್ಲಿ ಇನ್ನೂ ಕೆಲವರ ಹೆಸರುಗಳನ್ನು ಸೇರಿಸಬೇಕಾಗಿದ್ದು, ಮರು ತನಿಖೆಯ ಅಗತ್ಯವಿದೆ ಎಂದು ಹೇಳಿರುವ ಕೇರಳ ಸರ್ಕಾರ, ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ವಿರೋಧ ಪಕ್ಷವಾದ ಕಾಂಗ್ರೆಸ್‌ನ್ನು ಹಣಿಯಲು ಹೊರಟಿದೆ.1992ರಲ್ಲಿ ಕರುಣಾಕರನ್ ನೇತೃತ್ವದ ಸರ್ಕಾರದಲ್ಲಿ ಈ ಹಗರಣ ನಡೆದಿದ್ದು, ಈಗ ವಿರೋಧ ಪಕ್ಷದ ನಾಯಕರಾಗಿರುವ ಒಮನ್ ಚಾಂಡಿ ಅವರು ಆಗ ಹಣಕಾಸು ಸಚಿವರಾಗಿದ್ದರು. ಅವರನ್ನು ಈ ಹಗರಣದಲ್ಲಿ ಸಿಲುಕಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry