ಸಂಗಮ ಹಯ್ಯಾಳ ರಸ್ತೆ ಸಂಚಾರ ಪ್ರಯಾಸ

7

ಸಂಗಮ ಹಯ್ಯಾಳ ರಸ್ತೆ ಸಂಚಾರ ಪ್ರಯಾಸ

Published:
Updated:

ಯಾದಗಿರಿ: ರಸ್ತೆ ಮಧ್ಯದಲ್ಲಿಯೇ ದೊಡ್ಡ ಹೊಂಡಗಳು ಬಿದ್ದಿದ್ದು, ಶಹಾಪುರ ತಾಲ್ಲೂಕಿನ ಸಂಗಮ-ಹಯ್ಯಾಳ ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸವಾಗಿ ಪರಿಣಮಿಸಿದೆ. ನಿತ್ಯ ನೂರಾರು ವಾಹನಗಳು ಓಡಾಡುವ ಈ ರಸ್ತೆಗೆ ದುರಸ್ತಿಯ ಭಾಗ್ಯ ಎಂದು ಕೂಡಿ ಬಂದೀತು ಎಂದು ಚಾಲಕರು ಪರಿತಪಿಸುವಂತಾಗಿದೆ.ಈ ಭಾಗದಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದು, ಹೆಚ್ಚು ಭಾರದ ಲಾರಿ, ಟ್ರ್ಯಾಕ್ಟರ್‌ಗಳ ಓಡಾಟದಿಂದ ಈ ರಸ್ತೆಯ ಸಂಪೂರ್ಣ ಹಾಳಾಗಿದೆ. ಇದೀಗ ಸಕ್ಕರೆ ಕಾರ್ಖಾನೆ ಆರಂಭವಾಗಿರುವುದರಿಂದ ಸಂಗಮ-ಹಯ್ಯಾಳ ರಸ್ತೆಯಲ್ಲಿ ನಿತ್ಯ ಹಲವಾರು ವಾಹನಗಳು ಓಡಾಡುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.ರಸ್ತೆಯಲ್ಲಿ ಬಿದ್ದಿರುವ ತೆಗ್ಗು-ಗುಂಡಿಗಳನ್ನು ನೋಡಿದ ಚಾಲಕರು ಮತ್ತೊಮ್ಮೆ ಈ ರಸ್ತೆಯಲ್ಲಿ ಓಡಾಡುವುದೇ ಬೇಡ ಎನ್ನುತ್ತಿದ್ದಾರೆ. 10 ವರ್ಷಗಳ ಹಿಂದೆ ನಿರ್ಮಾಣವಾದ ಈ ರಸ್ತೆಯ ದುರಸ್ತಿಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೂಡಲೇ ಈ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.ಕುಪ್ಪಿ ಹೇಳಿಕೆಗೆ ಖಂಡನೆ: ಜಿಲ್ಲೆಯ ಗುರುಮಠಕಲ್ ಶಾಸಕರ ವರ್ತನೆಯ ಕುರಿತು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನಾ ಕುಪ್ಪಿ ನೀಡಿರುವ ಹೇಳಿಕೆಗೆ ಮಹಿಳಾ ಕಾಂಗ್ರೆಸ್ ಸದಸ್ಯರಾದ ಗಂಗಮ್ಮ ಕೌಳೂರು, ಮಹಾದೇವಮ್ಮ ಕೌಳೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಗೆ ಆಗಮಿಸಿದ ಶಾಸಕರು, ಕ್ಷೇತ್ರದ ಜನರಿಗೆ ಅಭಿವೃದ್ಧಿ ಕೆಲಸಗಳು ವಿಳಂಬ ಆಗಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳ ಜೊತೆ ಚರ್ಚೆಗೆ ಮುಂದಾಗಿದ್ದಾರೆ.ಇದನ್ನೇ ಘೋರ ಅಪರಾಧ ಎನ್ನುವಂತೆ ಬಿಂಬಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.  ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ತಾಲ್ಲೂಕು ಪಂಚಾಯಿತಿ ಬಿಜೆಪಿ ಸದಸ್ಯರು, ತಮಗೆ ಸಭೆಯಿಂದ ಹೊರಗೆ ನಡೆಯಿರಿ ಎಂದು ಹೇಳಿ ಅಪಮಾನ ಮಾಡಿರುವುದಾಗಿ ಹೇಳಿದ್ದಾರೆ.ಆದರೆ ಇದು ಸರಿಯಲ್ಲ. ಸ್ವತಃ ಶಾಸಕರೇ ಬಂದು, ತಾಲ್ಲೂಕು ಪಂಚಾಯಿತಿ ಸದಸ್ಯರ ಜೊತೆ ಮಾತನಾಡಿದ್ದಾರೆ.

ಅಧಿಕಾರಿಗಳ ಜೊತೆ ಚರ್ಚಿಸಿದ ನಂತರ ಸದಸ್ಯರ ಜೊತೆಗೂ ಮಾತನಾಡುವುದಾಗಿ ಹೇಳಿದ್ದರು. ಆದರೆ ಇದನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲದ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದಾರೆ.ಶಾಸಕರೇ ಸಮಾಧಾನ ಪಡಿಸಲು ಬಂದರೂ ಕೇಳದ ತಾಲ್ಲೂಕು ಪಂಚಾಯಿತಿ ಸದಸ್ಯರ ವರ್ತನೆ ಖಂಡನಾರ್ಹ ಎಂದು ಹೇಳಿದ್ದಾರೆ.ಶಾಸಕರು ಅಧಿಕಾರಿಗಳ ಸಭೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿಲ್ಲ. ಬದಲಿಗೆ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಅಧಿಕಾರಿಗಳ ಸಭೆ ನಡೆಸಲು ಮುಂದಾಗಿದ್ದರು.ಇದನ್ನೇ ನೆಪವಾಗಿ ಇಟ್ಟುಕೊಂಡು ನಾಗರತ್ನಾ ಕುಪ್ಪಿ ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ಅಭಿವೃದ್ಧಿಯ ವಿಷಯದಲ್ಲೂ ರಾಜಕೀಯ ಮಾಡಬಾರದು. ಇದನ್ನು ಮೊದಲು ಕುಪ್ಪಿ ಅರಿತುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry