ಸಂಗಯ್ಯ ಗವಿ ಪ್ರಾಧಿಕಾರ ಸೇರ್ಪಡೆಗೆ ಪ್ರಯತ್ನ

7

ಸಂಗಯ್ಯ ಗವಿ ಪ್ರಾಧಿಕಾರ ಸೇರ್ಪಡೆಗೆ ಪ್ರಯತ್ನ

Published:
Updated:

ಹುಮನಾಬಾದ್: ಮುಗ್ಧ ಸಂಗಯ್ಯ ಶರಣರ ಗವಿ ಪ್ರಾಧಿಕಾರ ಸೇರ್ಪಡೆ ವಿಷಯ ಕುರಿತು ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ,  ಸೇರ್ಪಡೆಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಶಾಸಕ ರಾಜಶೇಖರ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.  ತಾಲ್ಲೂಕಿನ ಗಡವಂತಿ ಗ್ರಾಮದ ಶಿವಶರಣ ಮುಗ್ಧ ಸಂಗಯ್ಯ ಗವಿ ಪ್ರಾಂಗಣದಲ್ಲಿ ಗವಿ ಅಭಿವೃದ್ಧಿ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ನೂತನ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಭೇಟಿ ವೇಳೆ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಬೀದರ್ ಸಂಸದ ಎನ್.ಧರ್ಮಸಿಂಗ್ ಮಾತ್ರ ವಲ್ಲದೇ ಜಿಲ್ಲೆಯ ಹಾಲಿ, ಮಾಜಿ ಶಾಸಕರು ಮತ್ತು ಪೂಜ್ಯರ ನಿಯೋಗ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.ಪ್ರಾಧಿಕಾರ ನಿರ್ದೇಶಕ ಸ್ಥಾನದಿಂದ ಜಾಮದಾರ್ ವರ್ಗಗೊಂಡು ಹೋದ ನಂತರ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ತಿಳಿಸಿದ ಅವರು, ಅಭಿವೃದ್ಧಿ ಕುಂಠಿತಕ್ಕೆ ಇರುವ ಕಾರಣ ಕುರಿತು ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಯತ್ನಿಸುವುದಾಗಿ ಶಾಸಕ ಪಾಟೀಲ ತಿಳಿಸಿದರು.ಗವಿ ಪ್ರಾಂಗಣದಲ್ಲಿ ಇಂದು ಗ್ರಂಥಾ ಲಯ ಅಸ್ತಿತ್ವಕ್ಕೆ ಬಂದಿರುವುದು ಆರೋಗ್ಯಕರ ಬೆಳವಣಿಗೆ ಆದರೇ ಇದು ಕೇವಲ ಉದ್ಘಾಟನೆಗೆ ಸೀಮಿತಗೊಳ್ಳದೇ ಸಾರ್ವಜನಿಕರಿಗೆ ಸದ್ಬಳಕೆ ಆಗುವ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುವ ಕೆಲಸ ಆಗಬೇಕು. ಅಭಿವೃದ್ಧಿ ಸಂಬಂಧಿಸಿದಂತೆ ಯಾವತ್ತೂ ಸಹಕಾರ ನೀಡುವುದಾಗಿ ಸಲಹೆ ನೀಡಿದರು.ಮುಗ್ಧ ಸಂಗಯ್ಯ ಶರಣರು ನೆಲೆಸಿದ ಪುಣ್ಯ ಕ್ಷೇತ್ರದಲ್ಲಿ ಮಾತನಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಗಡವಂತಿ ಚಾರಿತ್ರ್ಯವಂತ ಯುವಕರ ಕಾರ್ಯಕ್ಕೆ ಬೀದರ್ ಬಸವಸೇವಾ ಪ್ರತಿಷ್ಠಾನ ಅಕ್ಕ ಅನ್ನಪೂರ್ಣ ಮೆಚ್ಚುಗೆ  ವ್ಯಕ್ತಪಡಿಸಿದರು.ಗ್ರಂಥಾಲಯಗಳು ನಾಗರಿಕತೆ ಮತ್ತು ಶರಣ ಸಂಸ್ಕೃತಿ ಸಂಕೇತ ಎಂದು ಬಣ್ಣಿಸಿದ ಅವರು, ಹೋಟೆಲ್‌ಗಳಲ್ಲಿ ಅನಗತ್ಯ ಹರಟೆ ಹೊಡೆಯುವ ಜನ ಇನ್ನೂ ಮುಂದೆ ಗ್ರಂಥಾಲಯಕ್ಕೆ ಬಂದು ಪುಸ್ತಕ ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳುವುದರ ಮೂಲಕ ಚಾರಿತ್ರ್ಯವಂತರಾಗಿ ಬಾಳಿ ಬದುಕಬೇಕು ಎಂದು ಸಲಹೆ ನೀಡಿದರು.ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ಪಕ್ಷ ರಾಜಕೀಯ ಚುನಾವಣೆಗೆ ಸೀಮಿತಗೊಳ್ಳಬೇಕು. ಆಯ್ಕೆ ಬಳಿಕ ಅವರು ಯಾವುದೇ ಒಂದು ಪಕ್ಷಕ್ಕೆ ಸೀಮಿತರಾಗದೇ ಇಡೀ ಕ್ಷೇತ್ರದ ಶಾಸಕರಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಶಾಸಕ ರಾಜಶೇಖರ ಪಾಟೀಲ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನಪರ ಕೆಲಸಗಳಿಗೆ ಹೆಗಲಿಗೆ ಹೆಗಲುಕೊಟ್ಟು ಪಕ್ಷಾತೀತ ಸಹಕರಿಸುವುದಾಗಿ ಸ್ಪಷ್ಟಪಡಿಸಿದರು.ವಿಜಾಪೂರ ಜಿಲ್ಲೆ ಉಪ್ಪಲದಿನ್ನಿಯಲ್ಲಿ ಲಭ್ಯವಾದ ಗ್ರಂಥದ ಸಹಾಯದಿಂದ ಸಾಧ್ಯವಾದಷ್ಟು ಶೀಘ್ರ ಮುಗ್ಧ ಸಂಗಯ್ಯ ಶರಣರ ಜೀವನ ಮತ್ತು ಸಾಹಿತ್ಯ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಿ ಗ್ರಂಥ ರೂಪದಲ್ಲಿ ಹೊರತರುವ ಮೂಲಕ ಪ್ರಾಧಿಕಾರ ಕಣ್ತೆರೆಸಲು ಪ್ರಾಮಾಣಿಕ ಪ್ರಯತ್ನಿಸ ಲಾಗುವುದು ಎಂದು ಸಾಹಿತಿಗಳಾದ ಡಾ.ಸೋಮನಾಥ ಯಾಳವಾರ, ಬಿ.ಎಸ್.ಖೂಬಾ ಭರವಸೆ ನೀಡಿದರು.ಅನುಭವ ಮಂಟಪ ಸಂಚಾಲಕ ವಿ.ಸಿದ್ಧರಾಮಣ್ಣ, ಸಾಹಿತಿ ಎಚ್. ಕಾಶಿನಾಥರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಜಾತಾ ಅನೀಲ ಪಾಟೀಲ, ಗುಲ್ಬರ್ಗ ವಕೀಲ ಗೌರೀಶ, ಗ್ರಾಮದ ಪ್ರಮುಖ ಶರಣಪ್ಪಗೌಡ ಪಾಟೀಲ ವೇದಿಕೆಯಲ್ಲಿ ಇದ್ದರು. ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.ಅಶೋಕ ವಿಭೂತಿ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ಶ್ರೀಧರ ಪಸಾರಗಿ ಪ್ರಾಸ್ತಾವಿಕ ಮಾತನಾಡಿದರು.

ನವಲಿಂಗಕುಮಾರ ಪಾಟೀಲ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry