ಸಂಗರಶೆಟ್ಟಹಳ್ಳಿಗೆ ಒತ್ತುವರಿ ಸಮಸ್ಯೆ

7

ಸಂಗರಶೆಟ್ಟಹಳ್ಳಿಗೆ ಒತ್ತುವರಿ ಸಮಸ್ಯೆ

Published:
Updated:

ಪಿರಿಯಾಪಟ್ಟಣ: ತಾಲ್ಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮ ಮೂಲಭೂತ ಸೌಲಭ್ಯಗಳಿಲ್ಲದೇ, ಅವ್ಯವಸ್ಥೆಯ ಗೂಡಾಗಿದೆ. ಅದಕ್ಕಿಂತ ಹೆಚ್ಚಾಗಿ ಈ ಗ್ರಾಮದಲ್ಲಿ ತಲೆದೋರಿರುವುದು ಒತ್ತುವರಿ ಸಮಸ್ಯೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಸ್ಥಾನ, ದಾನ ನೀಡಿದ ಜಮೀನು... ಹೀಗೆ ಬಹುಪಾಲು ಕಡೆ ಒತ್ತುವರಿ ಮತ್ತು ಅಕ್ರಮ ಖಾತೆ ಮಾಡಿಕೊಂಡ ಸಮಸ್ಯೆಗಳು ಕಾಡುತ್ತಿವೆ.ಸುಮಾರು 1200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಪ್ರಮುಖ ಬೀದಿಗಳಿಗೆ ಡಾಂಬರು ಹಾಕಿಲ್ಲ. ಕೆಲವೆಡೆ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದನ್ನು ಬಿಟ್ಟರೆ ಉಳಿದ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿವೆ.ಮೂರ‌್ನಾಲ್ಕು ಬೀದಿಗಳಲ್ಲಿ ಹಲವಾರು ವರ್ಷಗಳ ಹಿಂದೆ ಚಪ್ಪಡಿ ಕಲ್ಲು ಹಾಕಲಾಗಿದ್ದು, ಈಗ ಹೂಳು ತುಂಬಿ ಅವು ಮುಚ್ಚಿಹೋಗಿವೆ. ಇದರಿಂದಾಗಿ ಗ್ರಾಮದಲ್ಲಿ ಜನ ಹಾಗೂ ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ.ಕೆಲವು ರಸ್ತೆಗಳಲ್ಲಿ ಚರಂಡಿ ನಿರ್ಮಿಸಿದ್ದರೂ ಸರಿಯಾದ ನಿರ್ವಹಣೆ ಮಾಡಿಲ್ಲ. ತ್ಯಾಜ್ಯ ನೀರು ಸರಾಗವಾಗಿ ಹರಿಯದೇ ಅಲ್ಲಲ್ಲಿ ನಿಂತು ಕೊಳೆಯುತ್ತಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದರಾಗಿದೆ. ಚರಂಡಿ ಇಲ್ಲದ ರಸ್ತೆಗಲ್ಲಿ ಮಳೆ ನೀರು ಹಾಗೂ ಮನೆಗಳ ತ್ಯಾಜ್ಯ ರಸ್ತೆ ಮೇಲೆಯೇ ಹರಿಯುತ್ತದೆ.ಆರೋಗ್ಯ ಕೇಂದ್ರ ಒತ್ತುವರಿ

ಗ್ರಾಮದಲ್ಲಿ ದಾನಿಯೊಬ್ಬರು ನೀಡಿದ ಭೂಮಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಇದಕ್ಕೆ ಒಂದು ಕಡೆ ಕಾಂಪೌಂಡ್ ನಿರ್ಮಿಸದ ಕಾರಣ ಅಕ್ಕಪಕ್ಕದ ಜನ ಒತ್ತುವರಿ ಮಾಡಿಕೊಂಡಿದ್ದಾರೆ. ಆರೋಗ್ಯ ಕೇಂದ್ರಕ್ಕಾಗಿ ದಾನಿಗಳು ನೀಡಿದ ಭೂಮಿ ಅತ್ತ ಸರ್ಕಾರಕ್ಕೂ ಸೇರದೆ, ಇತ್ತ ಮೂಲ ಮಾಲೀಕರಿಗೂ ಸೇರದೆ; ಅನ್ಯರ ಪಾಲಾಗಿದೆ ಎಂಬುದು ಗ್ರಾಮಸ್ಥರ ದೂರು.ಈ ಒತ್ತುವರಿ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಭೂಮಿ ದಾನ ನೀಡಿದ ಕುಟುಂಬದ ಸದಸ್ಯ ಕೆ.ಕಾಳೇಗೌಡ ಅವರು.ಮಾತ್ರವಲ್ಲ; ಗ್ರಾಮದಲ್ಲಿರುವ ದೊಡ್ಡಮ್ಮತಾಯಿ ದೇವಾಯಲಯದ ಜಮೀನನ್ನೂ ಕೆಲವರು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಇದೇ ಜಮೀನಿನ ಮೇಲೆ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಾರೆ. ಇತ್ತ ಜಮೀನು ಹೋದರೂ ಸರಿ ಇದ್ದರೂ ಸರಿ ಎನ್ನುತ್ತಾರೆ ಮುಖಂಡರು.ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಶೀಘ್ರದಲ್ಲೇ ಗ್ರಾಮಸಭೆ ಕರೆದು ಕ್ರಿಯಾಯೋಜನೆ ತಯಾರಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸಲಾಗುವುದು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೋರೇಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry