`ಸಂಗೀತಕ್ಕೆ ಮಹತ್ವ ಕೊಟ್ಟ ಸೂಫಿಸಂತ'

7

`ಸಂಗೀತಕ್ಕೆ ಮಹತ್ವ ಕೊಟ್ಟ ಸೂಫಿಸಂತ'

Published:
Updated:
`ಸಂಗೀತಕ್ಕೆ ಮಹತ್ವ ಕೊಟ್ಟ ಸೂಫಿಸಂತ'

ಬೆಂಗಳೂರು: `ಧರ್ಮದಲ್ಲಿದ್ದುಕೊಂಡೇ ಧರ್ಮಕ್ಕೆ ಅಂಟಿಕೊಳ್ಳದೇ ಮನುಷ್ಯವಾದಕ್ಕೆ ಮುಖಮಾಡಿರುವ ರಾಮಕೃಷ್ಣಪರಮಹಂಸರು, ಸೂಫಿಸಂತರ ತತ್ವಗಳು ಎಲ್ಲ ಕಾಲಕ್ಕೂ ಆದರ್ಶ' ಎಂದು ಕವಿ ಕೆ.ಎಸ್.ನಿಸಾರ್ ಅಹಮದ್ ಅಭಿಪ್ರಾಯಪಟ್ಟರು.ಸಪ್ನ ಬುಕ್‌ಹೌಸ್ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಇಸ್ಲಾಂ ಧರ್ಮದಲ್ಲಿ ಸಂಗೀತ ಮತ್ತು ನೃತ್ಯಕ್ಕೆ ಅಷ್ಟೇನು ಪ್ರಾಶಸ್ತ್ಯವಿಲ್ಲ. ಆದರೂ ಕೂಡ ಸೂಫಿ ಸಂತರು ಅಮೋಘ ಸಂಗೀತದ ಮೂಲಕ ಭಕ್ತಿಯನ್ನು ಕಾಣುವ ಬಗೆಯನ್ನು ತಿಳಿಸಿಕೊಟ್ಟಿದ್ದಾರೆ. ಧರ್ಮಗಳ ನಡುವೆಯೇ ಇದ್ದು ಮನುಷ್ಯವಾದಕ್ಕೆ ಮರಳುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ' ಎಂದರು.`ಅಪೂರ್ವ ಸಾಧಕರು' ಕೃತಿಯಲ್ಲಿ ಕಾರ್ಲ್‌ಮಾಕ್ಸ್, ವಿವೇಕಾನಂದ, ಚಾರ್ಲಿ ಚಾಪ್ಲಿನ್ ಸೇರಿದಂತೆ ವಿವಿಧ ಸಾಧಕರ ಜೀವನ ಬಗ್ಗೆ ವಿಸ್ತೃತವಾಗಿ ವಿವರಣೆ ನೀಡಲಾಗಿದೆ. ಮಹಾನ್ ಚೇತಕರ ಹುಟ್ಟು ಹಾಗೂ ಸಾವು ಎರಡೂ ಕೂಡ ಸಾಮಾನ್ಯ ಮನುಷ್ಯರ ಬದುಕಿಗೆ ಸ್ಫೂರ್ತಿ ನೀಡುತ್ತದೆ' ಎಂದರು.`ನಾನು ಸಾಹಿತ್ಯಲೋಕಕ್ಕೆ ಪದಾರ್ಪಣೆ ಮಾಡಿದ್ದ ಸಂದರ್ಭದಲ್ಲಿ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರಿಗೆ ಬರವಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದ್ದು, ಯುವ ಸಾಹಿತಿಗಳಿಗೂ ಪ್ರಕಾಶಕರು ದೊರೆಯುತ್ತಾರೆ. ಹಾಗಾಗಿ ವಿಸ್ತಾರದ ಓದು ಹಾಗೂ ಬರವಣಿಗೆಯ ಅಭ್ಯಾಸದಿಂದ ಹೊಸತನ್ನು ಸೃಷ್ಟಿಸಲು ಸಾಧ್ಯವಿದೆ' ಎಂದರು.ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, `ಪ್ರಸ್ತುತ ದೇಶದಲ್ಲಿ ರಾಜಕೀಯ ಪ್ರೇರಿತ ಕಳಪೆ ಚಳವಳಿಗಳ ಹಾವಳಿ ಹೆಚ್ಚುತ್ತಿವೆ. ಅರ್ಥಹೀನ ಚಳವಳಿಗಳೊಂದಿಗೆ ಚಳವಳಿಯ ಚರಿತ್ರೆ ಹಾಗೂ ಬೆಳೆದು ಬಂದ ದಾರಿಯ ಕುರಿತು ಕೃತಿ ರಚಿಸಬೇಕು. ಆಗ ಚಳವಳಿ ನಡೆಸುವವರಿಗೆ ಮಾರ್ಗದರ್ಶನ ನೀಡಿದಂತಾಗುತ್ತದೆ' ಎಂದು ಸಲಹೆ ನೀಡಿದರು.ಲೇಖಕರಾದ ಪ್ರೊ.ಕೆ.ಬೈರಪ್ಪ ಅವರ 'ಸಾಮಾಜಿಕ ಚಳವಳಿಗಳು', ಬೆ.ಕಾ.ಮೂರ್ತೀಶ್ವರಯ್ಯ `ನೀವು ಮತ್ತು ಕಾನೂನು, ಬೇಲೂರು ರಾಮಮೂರ್ತಿ `ಕಥಾ ಸುರಭಿ', ಜಿ.ಎಂ.ಕೃಷ್ಣಮೂರ್ತಿ `ಅಪೂರ್ವ ಸಾಧಕರು', ಕತೆಗಳೋ ಕತೆಗಳು `ಗುರುರಾಜ ಬೆಣಕಲ್', ಬೆ.ಗೋ.ರಮೇಶ್ `ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ', ಪ್ರಕಾಶ್ ಚಾಲುಕ್ಯ `ಪರ್ಯಾಯ ಪದ ಸಂಪದ' ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry