ಸಂಗೀತಕ್ಕೆ ಶಾರ್ಟ್ ಕಟ್ ಇಲ್ಲ- ಗಾಯಕಿ ಅನುರಾಧಾ ಪೊಡ್ವಾಲ್

7

ಸಂಗೀತಕ್ಕೆ ಶಾರ್ಟ್ ಕಟ್ ಇಲ್ಲ- ಗಾಯಕಿ ಅನುರಾಧಾ ಪೊಡ್ವಾಲ್

Published:
Updated:
ಸಂಗೀತಕ್ಕೆ ಶಾರ್ಟ್ ಕಟ್ ಇಲ್ಲ- ಗಾಯಕಿ ಅನುರಾಧಾ ಪೊಡ್ವಾಲ್

ಹುಬ್ಬಳ್ಳಿ: ‘ಇಲ್ಲಿ ಸಂಗೀತವನ್ನು ಗೌರವಿಸುತ್ತಾರೆ. ನನ್ನದು ಎಂಬ ಭಾವದಿಂದ ಪ್ರೀತಿಸುತ್ತಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ಹಾಡುವುದಕ್ಕೆ ನನಗೆ ಆಗುವ ಆನಂದ ಹೇಳತೀರದು...’

ಉಣಕಲ್ ಕೆರೆಯ ದಡದ ಪಂಚತಾರಾ ಹೋಟೆಲಿನ ಕಾಟೇಜ್ ಅಂಗಳದಲ್ಲಿ ಕುಳಿತು ಮಾತನಾಡತೊಡಗಿದ ಪ್ರಸಿದ್ಧ ಗಾಯಕಿ ಅನುರಾಧಾ ಪೊಡ್ವಾಲ್ ಮೇಲಿನಂತೆ ಹೇಳುವಾಗ ಯಾವುದೇ ಕೃತಕತೆ ಇಣುಕಲಿಲ್ಲ.

ಮೂಲತಃ ಕಾರವಾರದವರಾದ ಪೊಡ್ವಾಲ್ ಮುಂಬೈನಿಂದ ಶುಕ್ರವಾರ ಸಂಜೆ ಬಂದಿಳಿದವರು ‘ಪ್ರಜಾವಾಣಿ’ ಜೊತೆ ಕೆಲಕಾಲ ಮಾತನಾಡಿದರು. ಶನಿವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಅವರ ಸಂಗೀತ ಕಾರ್ಯಕ್ರಮದ ಬಿಡುವಿಲ್ಲದ ಸಿದ್ಧತೆಯ ನಡುವೆಯೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.

‘ಇದು ಮೂಲತಃ ಸಂಗೀತದ ನೆಲ. ಸಂಗೀತಕ್ಕೆ ಬೆಲೆ ಮತ್ತು ನೆಲೆ ಎರಡನ್ನೂ ಒದಗಿಸಿದ ಸ್ಥಳ. ಇಲ್ಲಿ ಗಾಯನವನ್ನು ಮನಸ್ಸಿನಲ್ಲಿಟ್ಟು ಆರಾಧಿಸಲಾಗುತ್ತದೆ. ಶಾಸ್ತ್ರೀಯ ಮತ್ತು ಲಘು ಸಂಗೀತಗಳೆರಡನ್ನೂ ಇಲ್ಲಿಯ ಜನ ಆಸ್ವಾದಿಸುತ್ತಾರೆ. ಆದ್ದರಿಂದ ಶನಿವಾರ ಸಂಜೆ ನಾನಿಲ್ಲಿ ಹಾಡುವುದಕ್ಕೆ ಅಪಾರ ಸಂತೋಷವಾಗುತ್ತಿದೆ. ಇಲ್ಲಿಯ ಶ್ರೋತೃಗಳು, ಇಲ್ಲಿಯ ಜನ ತುಂಬ ವಾಸ್ತವವಾದಿಗಳು. ಅವರು ಕೆಟ್ಟ ಸಂಗೀತವನ್ನು ಒಪ್ಪಿಕೊಳ್ಳಲಾರರು’ ಎಂದು ಪೊಡ್ವಾಲ್ ನೈಜ ಕಳಕಳಿಯಿಂದ ಹೇಳಿದರು. ಸಿನಿಮಾ ಸಂಗೀತ, ಲಘು ಸಂಗೀತ, ಭಜನ್ ಮೊದಲಾದ ಪ್ರಕಾರಗಳಲ್ಲಿ ಯಾವುದು ಹೆಚ್ಚು ಶ್ರೇಷ್ಠ ಎಂಬ ಪ್ರಶ್ನೆಗೆ ‘ಊಹುಂ, ಅದು ಇದು ಎಂಬ ಮಾತಿಲ್ಲ; ಎಲ್ಲ ಸಂಗೀತವೂ ಶ್ರೇಷ್ಠ’ ಎಂದರು ಅವರು.

‘ಸಂಗೀತದಲ್ಲಿ ಭಕ್ತಿ ಇರಬೇಕು. ಭಾವ ಇರಬೇಕು. ಸಾಹಿತ್ಯದಲ್ಲಿ ಅರ್ಥ ಇರಬೇಕು ಹಾಗೂ ಮಾಧುರ್ಯ ಅಡಗಿರಬೇಕು. ಇಂತಹ ಸಂಗೀತ ಉಳಿಯುತ್ತದೆ. ಈ ಅಂಶಗಳಿರುವ ಎಲ್ಲ ಹಾಡುಗಳನ್ನೂ ನಾನು ಇಷ್ಟಪಟ್ಟು ಹಾಡುವೆ. ಸಿನಿಮಾ ಸಂಗೀತ, ಅಥವಾ ಅಲ್ಬಂ ಸಂಗೀತ ಎಂಬ ಭೇದ ಭಾವ ನನಗಿಲ್ಲ. ಆದ್ದರಿಂದ ಇವುಗಳ ಬಗ್ಗೆ ವಿಮರ್ಶೆ ಮಾಡುವುದೂ ಸರಿಯಲ್ಲ’ ಎಂಬುದು ಅವರ ಸ್ಪಷ್ಟ ನುಡಿಯಾಗಿತ್ತು.

ಹೊಸ ಪೀಳಿಗೆಯ ಸಂಗೀತಗಾರರ ಬಗ್ಗೆ ಅತ್ಯಂತ ಆಶಾ ಭಾವನೆಯನ್ನು ಹೊಂದಿರುವುದಾಗಿ ಈ ಹಿರಿಯ ಗಾಯಕಿ ಹೇಳಿದರು.

‘ಯುವ ಜನಾಂಗದ ಸಂಗೀತಗಾರರಲ್ಲಿ ಒಂದು ಕಮಿಟೆಡ್ (ಬದ್ಧತೆ ಹೊಂದಿರುವ) ವರ್ಗವಿದೆ. ಇದು ಎಂತಹ ಸಂಕಷ್ಟಗಳ ನಡುವೆಯೂ ಸಂಗೀತವನ್ನು ಉಳಿಸುವುದಕ್ಕಾಗಿ ಪಣ ತೊಟ್ಟಿದೆ. ಇದು ಅತ್ಯಂತ ಸಂತೋಷದ ಸಂಗತಿ. ಈ ವರ್ಗದ ಬದ್ಧತೆಯೇ ಹಿರಿ ತಲೆಮಾರಿನ ನಮಗೆಲ್ಲ ಸಂಗೀತದ ಉಳಿವಿನ ಕುರಿತು ಆಶಾ ಭಾವನೆ ಮೂಡಿಸಿರುವುದಕ್ಕೆ ಕಾರಣ.

‘ಯುವ ಜನತೆ ಕುರಿತು ನಾನು ಇನ್ನೊಂದು ಮಾತು ಹೇಳಬೇಕು. ಈಗ ಅವಕಾಶಗಳು ಹೇರಳ. ಸರಿಯಾದ ವೇದಿಕೆ ಸಿಗುವುದು ಸ್ವಲ್ಪ ಕಷ್ಟ ಎನ್ನಬಹುದು. ಆದರೆ ತಾಳ್ಮೆಯಿಂದ ಮತ್ತು ಬದ್ಧತೆಯಿಂದ ಕಾಯುವವರಿಗೆ ಅವರದ್ದೇ ಆದ ಸ್ಥಳಾವಕಾಶ ಸಂಗೀತ ಕ್ಷೇತ್ರದಲ್ಲಿದೆ. ದೃಶ್ಯ ಮಾಧ್ಯಮಗಳ ಕೊಡುಗೆಯನ್ನೂ ಈ ವಿಷಯದಲ್ಲಿ ನಾವು ಕಡೆಗಣಿಸುವಂತಿಲ್ಲ. ಮಾಧ್ಯಮ ಕ್ಷೇತ್ರದ ವಿಸ್ತಾರದಿಂದಾಗಿ ಎಲ್ಲ ಸ್ತರದವರೂ ಖ್ಯಾತಿ ಗಳಿಸಲು ಸಾಧ್ಯವಾಗಿದೆ.

‘ಆದರೆ ಒಂದು ವಿಷಯವನ್ನು ಯುವ ಜನತೆ ನೆನಪಿಡಬೇಕು. ಏಣಿಯನ್ನು ಒಂದೊಂದೇ ಮೆಟ್ಟಿಲಂತೆ ಏರಬೇಕು. ಸಾವಧಾನದಿಂದ ಮಾತ್ರ ನೀವು ದೀರ್ಘ ಕಾಲ ಹಾಡುಗಾರರಾಗಿ, ಸಂಗೀತಗಾರರಾಗಿ ಉಳಿಯಲು ಸಾಧ್ಯವಿದೆ. ಈ ಕ್ಷೇತ್ರ ಬಯಸುವುದೇ ಸಾವಧಾನವನ್ನು. ಇಲ್ಲಿ ಶಾರ್ಟ್ ಕಟ್ ಇಲ್ಲ’ ಎಂದು ಅವರು ವಿಶ್ಲೇಷಿಸಿದರು.

ಕ್ಯಾಸೆಟ್‌ಗಳ ಯುಗ ಮುಗಿದ ಈ ಸಂದರ್ಭದಲ್ಲಿ ಸಿ.ಡಿ ಉದ್ಯಮ ತುಂಬ ಸಂಕಷ್ಟದಲ್ಲಿದೆ ಎಂದು ಪೊಡ್ವಾಲ್ ತೀವ್ರ ಕಳವಳದಿಂದ ನುಡಿದರು. ಒಂದು ಸಿ.ಡಿಯಲ್ಲಿ ನೂರು- ನೂರ ಹತ್ತು ಹಾಡುಗಳನ್ನು ತುಂಬುವ ಕೆಲಸ ನಡೆಯುತ್ತದೆ. ಈ ಸಿ.ಡಿಗಳ ಮಾರುಕಟ್ಟೆ ದರವೂ ಕಡಿಮೆ. ಹೀಗಾಗಿ ಸಿ.ಡಿ ಉದ್ಯಮ ಕಷ್ಟದಲ್ಲಿ ಸಿಲುಕಿದೆ ಎಂಬುದು ಅವರ ವಾದವಾಗಿತ್ತು.

ತಮ್ಮ ಮುಂದಿನ ಸಂಗೀತ ಅಲ್ಬಂ ‘ರುದ್ರ’ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದ್ದು, ಇದು ಹಿಂದಿನ ತಮ್ಮ ಅಲ್ಬಂಗಳಿಗಿಂತ ಸಂಪೂರ್ಣ ಭಿನ್ನ ಎಂದರು ಅನುರಾಧಾ. ಇದರಲ್ಲಿ ಕಾಲಭೈರವನ (ಶಿವ) ಕುರಿತು ಮಾಧುರ್ಯದಿಂದ ಕೂಡಿದ ಭಜನ್‌ಗಳಿವೆ ಎಂದು ಅವರು ತಮ್ಮ ಮೃದು ಮಾತಿಗೆ ಮುಕ್ತಾಯ ಹಾಡಿದಾಗ ಕೆರೆಯ ಮೇಲಿನಿಂದ ತಂಗಾಳಿ ಸೂಸಿ ಬರುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry