ಬುಧವಾರ, ಏಪ್ರಿಲ್ 21, 2021
24 °C

ಸಂಗೀತದಿಂದ ವಾತಾವರಣ ಶುದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಮನುಷ್ಯ ಮನುಷ್ಯನಾಗಿ ಉಳಿಯದ ಇಂದಿನ ಸನ್ನಿವೇಶದಲ್ಲಿ ಮೌಲ್ಯಗಳೆಲ್ಲ ಹಾಳಾಗಿ ಹೋಗಿವೆ. ಸಂಗೀತಕ್ಕೆ ಮಾತ್ರ ನಮ್ಮ ಮನಸ್ಸುಗಳನ್ನು ಶುದ್ಧೀಕರಿಸುವ ಶಕ್ತಿ ಇದೆ~ ಎಂದು ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಬ್ಬನ್‌ಪೇಟೆ ಹಾಗೂ ಸಂಗಮತೀರ್ಥ ಸೇವಾ ಕೇಂದ್ರಗಳ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಏರ್ಪಡಿಸಲಾಗಿದ್ದ `ಮಾಧುರ್ಯ ಗಾನ, ಮಧುರ ಜೀವನ~ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.`ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಿದರೆ ವಾತಾವರಣ ತಾನೇ ತಿಳಿಯಾಗುತ್ತದೆ~ ಎಂದ ಅವರು, `ಮಧುರ ಜೀವನವನ್ನು ನಮ್ಮದಾಗಿಸಿಕೊಳ್ಳಲು ಮಾಧುರ್ಯ ತುಂಬಿದ ಗಾಯನ ಕೇಳಬೇಕು~ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ಕೆಎಸ್‌ಎಲ್ ಸ್ವಾಮಿ, `ಇಂದಿನ ದಿನಮಾನದಲ್ಲಿ ಕಿರುಚುವುದೆಲ್ಲ ಸಂಗೀತವಾಗಿದೆ. ಆದ್ದರಿಂದಲೇ ಎಸ್. ಜಾನಕಿ ಅವರಂತಹ ಹಿರಿಯ ಕಲಾವಿದರು ಮೌನವಾಗಿದ್ದಾರೆ. ಸಂಗೀತ ಕ್ಷೇತ್ರ ಇಂತಹ ಕಲುಷಿತ ವಾತಾವರಣದಿಂದ ಮುಕ್ತವಾಗಬೇಕಿದೆ~ ಎಂದು ಅಭಿಪ್ರಾಯಪಟ್ಟರು.`ಕನ್ನಡ ಭಾಷೆ ಬೆಳೆಸಲು ತಮ್ಮ ಗಾಯನದ ಮೂಲಕ ಡಾ.ಪಿ.ಬಿ. ಶ್ರೀನಿವಾಸ ಮತ್ತು ಜಾನಕಿ ನೀಡಿದ ಕೊಡುಗೆ ಯಾವ ಕನ್ನಡ ಸಂಸ್ಥೆಗಿಂತಲೂ ಕಡಿಮೆಯದಲ್ಲ~ ಎಂದು ಮೆಚ್ಚುಗೆಯಿಂದ ಹೇಳಿದ ಅವರು, `ಆಗಿನ ಕಲಾವಿದರು ಬರೀ ನೂರು ರೂಪಾಯಿ ಸಂಭಾವನೆ ಪಡೆದು ಹಾಡುತ್ತಿದ್ದರು.  ಆದರೆ, ಈಗಿನ ಗಾಯಕರು ಲಕ್ಷ ರೂಪಾಯಿಗಿಂತ ಅಧಿಕ ಸಂಭಾವನೆ ಪಡೆದರೂ ಭಾಷಾ ಶುದ್ಧಿಯೇ ಇರುವುದಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.`ಸತ್ಸಂಗ ಮಾಡಿದರೆ ಬೇಡವೆಂದರೂ ಒಳ್ಳೆಯದು ಸಿಗುತ್ತದೆ~ ಎಂದರು.ಹಿರಿಯ ನಟಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದರು.ಜಾನಕಿ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಿರಸಿ ಕೇಂದ್ರದ ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾದಿ ಸರಳಾ ಸಾನಿಧ್ಯ ವಹಿಸಿದ್ದರು.ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ, ಸಾಹಿತಿ ಪ್ರೊ. ಜಿ.ಎಚ್. ಹನ್ನೆರಡುಮಠ ವೇದಿಕೆ ಮೇಲಿದ್ದರು. ಹೇಮಾಪ್ರಸಾದ್ ಮತ್ತು ತಂಡ ಗೀತೆಗಳನ್ನು ಪ್ರಸ್ತುತಪಡಿಸಿತು.ತಾವು ಹಾಡಿದ ಹಾಡನ್ನು ಅಷ್ಟೇ ಸುಶ್ರಾವ್ಯವಾಗಿ ಹಾಡಿದ ಅರ್ಚನಾ ರವಿ ಅವರಿಗೆ ಜಾನಕಿ ಸಾವಿರ ರೂಪಾಯಿ ಬಹುಮಾನ ನೀಡಿ, ಬೆನ್ನು ತಟ್ಟಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.