ಗುರುವಾರ , ಮೇ 13, 2021
40 °C

ಸಂಗೀತದ ಪಂಚರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಠ ಕೇಳುವಾಗಿರಲಿ, ಪರೀಕ್ಷೆ ಬರೆಯುವಾಗಿರಲಿ, ಈ ಹುಡುಗಿ ಮೇಜು ಕುಟ್ಟುತ್ತಿದ್ದಳು. ಮೇಜು ಕುಟ್ಟುವ ಕಾರಣದಿಂದಲೇ ತರಗತಿಯಿಂದ ಹೊರಗೆ ಹಾಕಿಸಿಕೊಂಡಿದ್ದಳು. ಅದೇ ಹುಡುಗಿ, ಈಗ ಇದೀಗ `ಯುವಜನ ರಾಷ್ಟ್ರೀಯ ಪ್ರಶಸ್ತಿ~ ಪುರಸ್ಕೃತಳು. ವ್ಯತ್ಯಾಸ ಇಷ್ಟೇ- ಮೇಜಿನ ಜಾಗದಲ್ಲೆಗ ಮೃದಂಗ ಬಂದಿದೆ.ಆ ಹುಡುಗಿಯ ಹೆಸರು ಲಕ್ಷ್ಮಿ.


ಶಾಲೆ - ಕಾಲೇಜು ದಿನಗಳಿಂದಲೂ ಲಕ್ಷ್ಮಿಗೆ ಮೇಜು ಕುಟ್ಟುವ ಹುಚ್ಚು. ಯಾರಾದರೂ ಐಸ್‌ಕ್ರೀಂ ಕೊಡಿಸುತ್ತೇನೆಂದರಂತೂ, ತರಗತಿಯಲ್ಲೇ ಸಂಗೀತ ಕಛೇರಿಯೊಂದು ಶುರು. ಹುಡುಗಿ ಓದಿನಲ್ಲೂ ಹುಷಾರಾಗಿದ್ದುದರಿಂದ ಆಕೆಯ ಕುಟ್ಟಾಟವನ್ನು ಮೇಷ್ಟ್ರುಗಳು ಸಹಿಸಿಕೊಂಡರು.

 

ಅದೇ ಹುಡುಗಿ, ಮೃದಂಗ ನುಡಿಸಿ `ಯುವಜನ~ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಗ ಲಕ್ಷ್ಮಿಯ ಸಾಧನೆಯ ಹಾದಿಯನ್ನು ಗಮನಿಸುತ್ತಾ ಬಂದವರಿಗೆಲ್ಲ ಆಕೆಯ `ಮೇಜು ಕಥೆ~ ನೆನಪಾಗಿದ್ದರಲ್ಲಿ ಆಶ್ಚರ್ಯವಿಲ್ಲ.ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ಸಹಯೋಗದಲ್ಲಿ ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ವ್ಯವಹಾರ ಖಾತೆ ಮಂತ್ರಾಲಯ ನಡೆಸಿದ `ಯುವಜನೋತ್ಸವ~ದಲ್ಲಿ ಜಿಲ್ಲಾ ಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಲಕ್ಷ್ಮಿ ಕನ್ನಡನಾಡಿನ ಹೆಮ್ಮೆಯ ಸಂಗೀತ ಪಟು.

 

ರಾಷ್ಟ್ರಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಲಕ್ಷ್ಮಿಯೊಬ್ಬರೇ ಮಹಿಳಾ ಸ್ಪರ್ಧಿ. ಕಣದಲ್ಲಿದ್ದ 19 ರಾಜ್ಯಗಳ ಸ್ಪರ್ಧಾಳುಗಳನ್ನು ಮೀರಿಸುವ ನಂಬಿಕೆ ಲಕ್ಷ್ಮಿಗೆ ಇರಲಿಲ್ಲವಂತೆ. ಫಲಿತಾಂಶ ಬಂದಾಗ ಆಕೆಗೆ ಪ್ರಥಮ ಬಹುಮಾನ ಹಾಗೂ ಚಿನ್ನದ ಪದಕ.ಲಕ್ಷ್ಮಿಯ ಮೃದಂಗದ ಹಾದಿ ಹೂವಿನದೇನಾಗಿರಲಿಲ್ಲ. ಮೃದಂಗ ನುಡಿಸಲಿಕ್ಕೆ ಹೆಚ್ಚು ಶಕ್ತಿ ಬೇಕು. ಮೃದಂಗದಿಂದ ಹೊಮ್ಮುವ `ಧೀಂ~ ಸ್ವರಕ್ಕೆ ಕೈಯಲ್ಲಿ ಅಪರಿಮಿತ ಶಕ್ತಿ ಇರಲೇಬೇಕು.

 

ಹೀಗೆ ಶಕ್ತಿ ಪ್ರಯೋಗದಲ್ಲಿ ಲಕ್ಷ್ಮಿ ಅವರ ಉಗುರುಕಣ್ಣಿನಿಂದ ಅದೆಷ್ಟು ಬಾರಿ ರಕ್ತ ಚಿಮ್ಮಿದೆಯೋ! ಅವರ ಹಟ, ಹಂಬಲ ಎಲ್ಲಾ ನೋವುಗಳನ್ನು ಮೀರಿದಂತಹದ್ದು. ಅಂದಹಾಗೆ, ಕರ್ನಾಟಕ ಶಾಸ್ತ್ರೀಯ ಸಂಗೀತದ ಕೆಲವೇ ಮೃದಂಗ ವಿದುಷಿಯರಲ್ಲಿ ಲಕ್ಷ್ಮಿ ಪ್ರಮುಖರು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸ್ಕಾಲರ್‌ಷಿಪ್ ಪಡೆದ ಹೆಮ್ಮೆ ಅವರದು.ಸಂಗೀತದ ಅನುಬಂಧ

ಲಕ್ಷ್ಮಿ ಮಾತ್ರವಲ್ಲ, ಅವರ ಒಟಹುಟ್ಟುಗಳೆಲ್ಲ ಸಂಗೀತಸಾಧಕರೇ. ಮೂವರು ಹೆಣ್ಣು, ಇಬ್ಬರು ಗಂಡುಮಕ್ಕಳ ಕುಟುಂಬವದು.  ಲಕ್ಷ್ಮಿ ಅವರ ತಂಗಿ ಭುವನೇಶ್ವರಿ ಅವರದ್ದು ವಯಲಿನ್ ಸಾಧನೆಯಲ್ಲಿ ಅಕ್ಕನಷ್ಟೇ ಎತ್ತರದ ಸಾಧನೆ. ಅಕ್ಕನ ಮೃದಂಗಕ್ಕೆ ಅವರದ್ದು ವಯಲಿನ್ ಸಾಥಿ.ಇನ್ನೊಬ್ಬ ತಂಗಿ ಮರಗದವಲ್ಲಿ ಹಾಡುಗಾರಿಕೆಯಲ್ಲಿ ನಿಸ್ಸೀಮಳು. ಮೂವರು ಒಟ್ಟಿಗೆ ಕುಳಿತರೆಂದರೆ ಸ್ವರ ರಾಗಗಳ ಧಾರೆ. ಒಬ್ಬರಿಗೊಬ್ಬರು ಸೋಲೊಪ್ಪಿಕೊಳ್ಳರು. ಕಛೇರಿ ಅಂದರೆ ಸೋದರಿಯರ ಸವಾಲು ಜವಾಬಿನ ವೇದಿಕೆ.ಕರ್ನಾಟಕದಲ್ಲಿ ಕಛೇರಿ ನಡೆದರೆ ದೇವರ ನಾಮಗಳು, ತಮಿಳುನಾಡಾದರೆ ವಾಗ್ಗೇಯಕಾರರ ಕೃತಿ, ಆಂಧ್ರದಲ್ಲಾದರೆ ತಿಮ್ಮಪ್ಪನ ಸ್ತುತಿ- ಹೀಗೆ, ಕಾಲದೇಶಕ್ಕೆ ತಕ್ಕಂತೆ ಸೋದರಿಯರ ಸಂಗೀತದ ರೂಪಾಂತರ. ತಮ್ಮದೇ `ರತ್ನಾಲಯ ಫೌಂಡೇಶನ್~ ವತಿಯಿಂದ ಅವರು ದೇಶ ವಿದೇಶಗಳಲ್ಲಿ ಕಾರ್ಯಕ್ರಮ ಕೊಟ್ಟಿದ್ದಾರೆ.ಸಹೋದರಿಯರು ಮಾತ್ರವಲ್ಲ, ಲಕ್ಷ್ಮಿ ಅವರ ಇಬ್ಬರು ತಮ್ಮಂದಿರಾದ ದಯಾನಿಧಿ ಮತ್ತು ಬಾಲಾಜಿ ಕೂಡ ಸಂಗೀತದಲ್ಲಿ ಪಳಗಿದವರೇ. ದಯಾನಿಧಿ ಮೋರ್ಚಿಂಗ್ ನುಡಿಸಿದರೆ, ಬಾಲಾಜಿ ಕಂಜೀರಾದಲ್ಲಿ ಪರಿಣಿತ. ಈ ಸೋದರ ಸೋದರಿಯರೆಲ್ಲರ ಬಳಿಯೂ ವಿಶ್ವವಿದ್ಯಾಲಯಗಳ ಪದವಿಗಳಿವೆ. ದೇವರು ಕೊಟ್ಟ ಪದವಿ ಸಂಗೀತದ್ದು.ಓದಿರಲಿ, ಸ್ಪರ್ಧೆಯಿರಲಿ ಸೋದರಿಯರು ಸದಾ ಮುಂದು. ಮರಗದವಲ್ಲಿ ಸೀನಿಯರ್ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ದರ್ಜೆ ಪಡೆದಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್‌ನ ಸಂಗೀತ ಸ್ಪರ್ಧೆ ಹಾಗೂ ಸಂಗೀತ ಪ್ರಪಂಚ ಮಂಡಳಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಪ್ರತಿಭೆ ಅವರದ್ದ.ಭುವನೇಶ್ವರಿ ಕರ್ನಾಟಕ ಸರ್ಕಾರದ ಸಂಗೀತ ಪರೀಕ್ಷೆಯಲ್ಲಿ ಜೂನಿಯರ್, ಸೀನಿಯರ್ ಎರಡರಲ್ಲೂ ಫಸ್ಟ್‌ಕ್ಲಾಸ್. ರೋಟರಿ ಕ್ಲಬ್‌ನ ವಯಲಿನ್ ಸ್ಪರ್ಧೆಯಲ್ಲೂ ಆಕೆ ಮೊದಲ ಸ್ಥಾನ ಪಡೆದವರು. ಲಕ್ಷ್ಮಿ ಹಲವು ತಾಳ ವಾದ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮೊದಲ ಬಹುಮಾನ ಗಳಿಸಿದ್ದಾರೆ. ಸೋದರರೂ ಕಮ್ಮಿಯೇನಲ್ಲ. ಎಂಜಿನಿಯರಿಂಗ್‌ನಲ್ಲಿ ಇಬ್ಬರೂ ಫಸ್ಟ್ ಕ್ಲಾಸ್!

ತೊಡೆಯ ಮೇಲೆ ಮರಗದವಲ್ಲಿ

ವಿದುಷಿ ಮರಗದವಲ್ಲಿ ಸಂಗೀತ ಕಲಿತದ್ದು ಬಹಳ ವಿಶೇಷವಾಗಿದೆ. ಅಕ್ಕಂದಿರಿಗೆ ಗುರುಗಳು ಪಾಠ ಮಾಡುವಾಗ ಮಗು ಮರಗದವಲ್ಲಿ ಅಪ್ಪನ ತೊಡೆಯ ಮೇಲೆ ಕುಳಿತಿರುತ್ತಿದ್ದಳು. ಇನ್ನೂ ಪುಟ್ಟಮಗು. ಗುರುಗಳು ಪಾಠ ಮುಗಿಸಿ ಹೋದ ಮೇಲೆ ಮಗು ಮರಗದವಲ್ಲಿ ಗುರುಗಳು ಅಕ್ಕಂದಿರಿಗೆ ಹೇಳಿದ ಅಷ್ಟೂ ಪಾಠವನ್ನು ಸ್ವಲ್ಪವೂ ಶೃತಿ, ತಾಳ ತಪ್ಪದಂತೆ ಒಪ್ಪಿಸುತ್ತಿದ್ದಳು.ತನ್ನ ಏಳನೇ ವಯಸ್ಸಿನಲ್ಲಿ ಮರಗದವಲ್ಲಿ ವಿದುಷಿ ಸರೋಜ ನಟರಾಜನ್ ಅವರ ಬಳಿ ತಮ್ಮ ಗಾಯನ ಪಾಠ ಆರಂಭಿಸಿದರು. ಬಹಳ ಚಿಕ್ಕ ವಯಸ್ಸಿನಲ್ಲೇ ಕಛೇರಿ ಕೊಡಲು ಆರಂಭಿಸಿದ ಆಕೆ, ಇಡೀ ದೇಶ ಸುತ್ತಿದ್ದಾರೆ. ನಾದಬ್ರಹ್ಮ ಟಿ.ವಿ. ಗೋಪಾಲಕೃಷ್ಣನ್ ಅವರ ಬಳಿ ಅವರ ಕಲಿಕೆಯೀಗ ನಡೆದಿದೆ.ಮರಗದವಲ್ಲಿಗೆ ಹಿಂದುಸ್ತಾನಿ ಸಂಗೀತವೂ ಗೊತ್ತು. ಅವರ ಕರ್ನಾಟಕ ಸಂಗೀತ ಕಛೇರಿಯಲ್ಲಿ ಹಿಂದೂಸ್ತಾನಿಯೂ ಇಣುಕು ಹಾಕುತ್ತದೆ. ಉಭಯ ಗಾನ ವಿದುಷಿ  ಶ್ಯಾಮಲಾ ಜಿ. ಭಾವೆ ಅವರ ಹಿಂದೂಸ್ತಾನಿ ಸಂಗೀತದ ಗುರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ಶುಕ್ರವಾರ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ `ಯುವಜನೋತ್ಸವ~ ಕಾರ್ಯಕ್ರಮ ನಡೆಯುತ್ತದೆ. ಇತ್ತೀಚೆಗೆ ಈ ಕುಟುಂಬಕ್ಕೆ ಯುವಜನೋತ್ಸವದಲ್ಲಿ ಕಾರ್ಯಕ್ರಮ ಕೊಡುವ ಅವಕಾಶ ಸಿಕ್ಕಿತ್ತು.ಶಾಸ್ತ್ರೀಯ ಸಂಗೀತ ಆಲಿಸಲು ಜನರೇ ಬರುವುದಿಲ್ಲ ಎನ್ನುವ ಕಾಲದಲ್ಲಿ ಈ ಕಾರ್ಯಕ್ರಮಕ್ಕೆ ರಸಿಕರ ದಂಡೇ ನೆರೆದಿತ್ತು. ಎರಡೂವರೆ ಗಂಟೆಗಳ ಗಾಯನ ಕೇಳಿ ಯುವಜನ ಚಿತ್ತಾದರು. ಡಾನ್ಸ್, ಫ್ಯಾಷನ್‌ಗಳನ್ನು ನೋಡಿ ಸಿಳ್ಳೇ ಕೇಕೆ ಹಾಕುತ್ತಿದ್ದವರು ಮಾಂತ್ರಿಕ ಸಂಗೀತದ ಮೋಡಿಗೊಳಗಾಗಿದ್ದರು.

ಖ್ಯಾತನಾಮರಿಗೆ ಸಾಥ್

ಲಕ್ಷ್ಮಿ, ಭುವನೇಶ್ವರಿ, ಬಾಲಾಜಿ, ದಯಾನಿಧಿ ಅವರಿಗೆ ದೇಶದ ಅನೇಕ ಖ್ಯಾತ ನಾಮರಿಗೆ ಸಾಥ್ ಕೊಟ್ಟಿರುವ ಹೆಮ್ಮೆ ಯಿದೆ. ನಾದಬ್ರಹ್ಮ ಟಿ.ವಿ. ಗೋಪಾಲ ಕೃಷ್ಣನ್, ಪಂಡಿತ್ ವಿಶ್ವಮೋಹನ ಭಟ್, ಸರಳಾಯ ಸಹೋದರಿಯರು, ಕೊಲ್ಕತ್ತಾದ ಒಮಾನ ಕುಟ್ಟಿ, ದೆಹಲಿಯ ಲತಾ ಮುರಳಿ ಮುಂತಾದ ಖ್ಯಾತನಾಮರಿಗೆ ಸಾಥ್ ಕೊಟ್ಟಿದ್ದಾರೆ. ದೇಶದ ಪ್ರಮುಖ ಸಂಗೀತ ಸಭಾಗಳಲ್ಲಿ ತಮ್ಮ ಸಂಗೀತ  ಪ್ರಸ್ತುತ ಪಡಿಸಿದ ಕೀರ್ತಿ ಅವರದು.ಬೆಂಗಳೂರಿನ ಪ್ರತಿಷ್ಠಿತ ರಾಮ ಸೇವಾ ಮಂಡಳಿ, ಚೆನ್ನೈನ ಟಿ.ವಿ.ಜಿ. ಅಕಾಡೆಮಿ ಆಫ್ ಮ್ಯೂಜಿಕ್, ಮುಂಬೈನ ಬಿರ್ಲಾ ಮಾತೃಶ್ರೀ ಸಂಸ್ಥೆ, ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತ ಸಭಾ, ಮೈಸೂರು ಅರಮನೆ, ಬೆಂಗಳೂರು ಇಸ್ಕಾನ್ ದೇವಸ್ಥಾನ ಮುಂತಾದ ಕಡೆ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಪ್ರಯೋಗಶೀಲ ಮನಸು

ಪ್ಯೂಷನ್ ಶೈಲಿಯೂ ಈ ಸಂಗೀತ ಸಾಧಕರಿಗೆ ಕರಗತ. ಈ ಶೈಲಿಯ ಮೂಲಕ ಸ್ಟಾರ್ ಹೋಟೆಲ್‌ಗಳಲ್ಲಿ, ಬೇರೆ ಬೇರೆ ಬ್ಯಾಂಡ್‌ಗಳಲ್ಲಿ ಸಾಥ್ ನೀಡಿ ತಾವೂ ಯಾವದಕ್ಕೂ ಕಮ್ಮಿಯಿಲ್ಲ ಎಂದು ತೋರಿಸಿದ್ದಾರೆ. ಅನ್ನೋನ್ ಫ್ಯೂಷನ್ ಬ್ಯಾಂಡ್, ಶಿವಶಕ್ತಿ ಫ್ಯೂಷನ್ ಬ್ಯಾಂಡ್‌ಗಳಲ್ಲಿ ಭಾಗವಹಿಸಿ ಪಾಶ್ಚಾತ್ಯ ಸಂಗೀತಕ್ಕೆ ಜತೆಯಾಗಿದ್ದಾರೆ.ಖ್ಯಾತ ಮೃದಂಗ ವಾದಕ ವಿದ್ವಾನ್ ಪ್ರವೀಣ್ ಅವರ ಕುಟುಂಬದವರು  ಕಳೆದ ಒಂದೂವರೆ ಶತಮಾನದಿಂದ ನಡೆಸಿಕೊಂಡು ಬರುತ್ತಿರುವ ಪುರಂದರ ದಾಸರ ಆರಾಧನೆಯಲ್ಲಿ ಈ ಸೋದರ ಸೋದರಿಯರು ಸಂಗೀತ ಸೇವೆ ಮಾಡುತ್ತಾ ಬಂದಿದ್ದಾರೆ.

 

ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ತಮ್ಮೆಲ್ಲಾ ವಾದ್ಯಗಳ ಸಮೇತ  ದೇವಾಲಯಕ್ಕೆ ಬಂದರೆ ಸಂಜೆಯವರೆಗೂ ದೇವರ ಮುಂದೆ ಹಾಡಿ ನುಡಿಸಿ ದೈವಿ ವಿದ್ಯೆಯನ್ನು ದೇವರಿಗೇ ಅರ್ಪಿಸುತ್ತಾರೆ. ಪ್ರತಿಷ್ಠಿತ ತಿರುವಯ್ಸಾರ್ ಆರಾಧನೆಯಲ್ಲಿ ಭಾಗವಹಿಸಿ ಸಂಗೀತ ಪಿತಾಮಹ ತ್ಯಾಗರಾಜರನ್ನು ಆರಾಧಿಸಿದ್ದಾರೆ.

 

ಚೆನ್ನೈ, ತಂಜಾವೂರುಗಳ ಆರಾಧನೆಯಲ್ಲೂ ಇವರು ಭಾಗವಹಸಿದ್ದಾರೆ. ಸಾಗರದಾಚೆಯೂ ಈ ಸಹೋದರ ಸಹೋದರಿಯರ ಸಂಗೀತ ಪ್ರತಿಭೆ ಪಸರಿಸಿದೆ. 2005ರಲ್ಲಿ ಲಂಡನ್ ಹಬ್ಬ ಭಾಗವಹಿಸಿ ಭಾರತಕ್ಕೆ ಹೆಮ್ಮ ತಂದಿದ್ದಾರೆ.2003ರಲ್ಲಿ ಈ ತಂಡವನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) ವತಿಯಿಂದ ನೈಜೀರಿಯಾದ ಚೋಮ್ (ಸಿಎಚ್‌ಒಎಂ) ವಾರ್ಷಿಕ ಉತ್ಸವಕ್ಕೆ ಭಾರತದ ಪ್ರತಿನಿಧಿಗಳಾಗಿ ಕಳುಹಿಸಲಾಗಿತ್ತು. 2007ರಲ್ಲಿ ಸಿಟ್ಜರ್ಲೆಂಡಿನ ಜ್ಯೂರಿಕ್ ನಗರದಲ್ಲಿ ತಮ್ಮ ಪ್ರತಿಭೆ ತೋರಿದ್ದಾರೆ. ಜರ್ಮನಿಯ `ಇಂಡಿಯನ್ ನೈಟ್~ ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ.

ಸಂಗೀತದ ವಾರಸುದಾರಿಕೆ

ಸಂಗೀತದ ಈ ಪಂಚರತ್ನಗಳಿಗೆ ಸಂಗೀತದ ಸಂಸ್ಕಾರ ಪೂರ್ವಿಕರಿಂದಲೇ ವರವಾಗಿ ಬಂದಿದೆ. ಇವರ ತಂದೆ ಖ್ಯಾತ ಮೃದಂಗ ವಿದ್ವಾನ್ ಗುರುಮೂರ್ತಿ ತಂಗವೇಲು. ತಮಿಳುನಾಡು ಮೂಲದ ಅವರ ಕುಟುಂಬ ಮುತ್ತಾತನವರ ಕಾಲದಲ್ಲೇ ಬೆಂಗಳೂರಿಗೆ ಬಂದು ನೆಲೆಸಿದೆ. ತಂದೆ ಭರತನಾಟ್ಯ ಮತ್ತು ಕುಚುಪುಡಿ ನೃತ್ಯ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರು.ತಾತ ಕೃಷ್ಣಪಿಳ್ಳೈ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದವರು. ಕೃಷ್ಣ ಪಿಳ್ಳೈ ಅವರು ವಿದೇಶ ಪ್ರವಾಸ ಮಾಡಿದ ಮೊದಲ ಭಾರತೀಯ ಸಂಗೀತ ಕಲಾವಿದ. ಇವರ ಮೊಮ್ಮಕ್ಕಳೇ ಈ ಅಪೂರ್ವ ಸೋದರ ಸೋದರಿಯರು. ತಾತನ `ತಬಲ ತರಂಗ~ ಇಂದಿಗೂ ಪ್ರಸಿದ್ಧ. ತಲೆಯ ಮೇಲೆ ನೀರಿನ ಮಡಿಕೆ ಇಟ್ಟುಕೊಂಡು ಏಳು ತಬಲಾ ನುಡಿಸಿ ಕೊನೆಯದಾಗಿ ಮೃದಂಗದಲ್ಲಿ ಮುಗಿಸುತ್ತಿದ್ದರು. ಕೆಳಗೆ ಒಂದು ತೊಟ್ಟು ನೀರು ಬೀಳುತ್ತಿರಲಿಲ್ಲ. ಈ ತಬಲ ತರಂಗ್ ಜಗತ್ಪ್ರಸಿದ್ಧ.

 ಈ ಮೂವರು ಸೋದರಿಯರು ಬೆಂಗಳೂರಿನ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕಿಯರು.

 

ಕಲಿತದ್ದನ್ನು ಹಂಚಿಕೊಳ್ಳುವಾಸೆ ಅವರದು. ಮನೆಯಲ್ಲಿ ಪಾಠ ಮಾಡುವುದರ ಜೊತೆಗೆ ಶಾಲೆಯಲ್ಲೂ ಪಾಠ. ಹೊರಗೆ ಪ್ರಸಿದ್ಧ ಸಂಗೀತ ಸಾಧಕರಾದರೂ, ಮನೆಯಲ್ಲಿದ್ದಾಗ ಇವರೆಲ್ಲರೂ ಅಪ್ಪಟ ಸ್ನೇಹಿತರು. ಸಮಾನ ಮನಸ್ಕರಾಗಿ ಎಲ್ಲವನ್ನು ಎಂಜಾಯ್ ಮಾಡುವ ಮನಸ್ಥಿತಿ.

 

ಸಂಗೀತವೇ ಧ್ಯಾನವಾದರೂ ಬದುಕಿನ ಸಣ್ಣಪುಟ್ಟ ಖುಷಿಗಳನ್ನು ತಪ್ಪಿಸಿಕೊಂಡವರಲ್ಲ. ಎಲ್ಲರಂತೆ ಆಟ, ಹುಡುಗಾಟ, ಹಾಸ್ಯ, ಪ್ರವಾಸ, ಫ್ಯಾಷನ್, ಟೀವಿ-ಸಿನಿಮಾ ಎಲ್ಲವೂ  ಇವರ ಜೊತೆಗಿವೆ. ಇವರನ್ನು ಸಂಪರ್ಕಿಸಬೇಕಾದಲ್ಲಿ dhayanidhig@gmail.com  ಗೆ ಮೇಲ್ ಕಳುಹಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.